2000 ಕೊರೋನ ಪ್ರಕರಣ: ನಾಲ್ಕೇ ದಿನದಲ್ಲಿ ದ್ವಿಗುಣ

Update: 2020-04-02 03:44 GMT

ಹೊಸದಿಲ್ಲಿ, ಎ.2: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಕ್ಷಿಪ್ರವಾಗಿ ಹರಡುತ್ತಿದ್ದು, ಬುಧವಾರ ಒಂದೇ ದಿನ ದೇಶದಲ್ಲಿ 388 ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ಶನಿವಾರ 1000ದ ಆಸುಪಾಸಿನಲ್ಲಿದ್ದ ಕೊರೋನ ಪ್ರಕರಣಗಳ ಸಂಖ್ಯೆ ಕೇವಲ ನಾಲ್ಕು ದಿನಗಳಲ್ಲಿ ದ್ವಿಗುಣಗೊಂಡು 2000ಕ್ಕೆ ತಲುಪಿದೆ. ತಮಿಳುನಾಡಿನಲ್ಲಿ ಸತತ ಮೂರನೇ ದಿನವೂ ಮೂರಂಕಿ ಪ್ರಕರಣ ದಾಖಲಾಗಿದೆ. ಬುಧವಾರ ಮಧ್ಯರಾತ್ರಿ ವೇಳೆಗೆ ದೇಶದ ಕೋವಿಡ್-19 ಸೋಂಕು ಪ್ರಕರಣ 1,996 ಆಗಿತ್ತು.

ಮುಂಬೈನಲ್ಲಿ ಒಂದೇ ದಿನ ಆರು ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಸ್ಥಳೀಯ ಅಧಿಕಾರಿಗಳು 2 ಪ್ರಕರಣಗಳನ್ನಷ್ಟೇ ದೃಢಪಡಿಸಿದ್ದಾರೆ. ದಿಲ್ಲಿಯಲ್ಲಿ 32 ಹಾಗೂ ಮಹಾರಾಷ್ಟ್ರದಲ್ಲಿ 33 ಹೊಸ ಪ್ರಕರಣಗಳು ಬುಧವಾರ ದೃಢಪಟ್ಟಿವೆ. ರಾಜಸ್ಥಾನ (27), ಕೇರಳ (24) ಮತ್ತು ಮಧ್ಯಪ್ರದೇಶ (20) ರಾಜ್ಯಗಳಲ್ಲೂ ಒಂದೇ ದಿನ ದೊಡ್ಡ ಸಂಖ್ಯೆಯ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ದಿಲ್ಲಿಯಲ್ಲಿ ಇದುವರೆಗೆ 152 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕನಿಷ್ಠ ಆರು ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಬಹುತೇಕ ಮಂದಿ ವಿದೇಶ ಪ್ರವಾಸ ಅಥವಾ ರೋಗಿಗಳ ಜತೆ ಸಂಪರ್ಕ ಇದ್ದ ಹಿನ್ನೆಲೆ ಹೊಂದಿದ್ದಾರೆ. ಅಸ್ಸಾಂನಲ್ಲಿ ಮೊದಲ ಪ್ರಕರಣ ವರದಿಯಾದ ಮರುದಿನವೇ 12 ಹೊಸ ಪ್ರಕರಣಗಳು ದೃಢಪಟ್ಟಿವೆ.

ವಿವಿಧ ರಾಜ್ಯಗಳಿಂದ ಕ್ರೋಢೀಕರಿಸಿದ ಅಂಕಿಅಂಶಗಳ ಪ್ರಕಾರ ಸಾವಿನ ಸಂಖ್ಯೆ 57. ಆದರೆ ಆರೋಗ್ಯ ಸಚಿವಾಲಯ 41ನ್ನು ಮಾತ್ರ ದೃಢಪಡಿಸಿದೆ. ಮಹಾರಾಷ್ಟ್ರದಲ್ಲಿ ದೇಶದಲ್ಲೇ ಗರಿಷ್ಠ (335) ಪ್ರಕರಣಗಳು ದಾಖಲಾಗಿದ್ದು, 16 ಮಂದಿ ಜೀವ ಕಳೆದುಕೊಂಡಿದ್ದಾರೆ. ಬುಧವಾರ 12 ಹೊಸ ಪ್ರಕರಣಗಳು ವರದಿಯಾಗಿರುವ ತೆಲಂಗಾಣದಲ್ಲಿ 104 ಪ್ರಕರಣ ದಾಖಲಾಗಿದ್ದು, ಏಳು ಸಾವು ಸಂಭವಿಸಿದೆ.

ಉತ್ತರ ಪ್ರದೇಶದಲ್ಲಿ 25 ವರ್ಷದ ಯುವಕ ಸೋಂಕಿನಿಂದ ಮೃತಪಟ್ಟಿದ್ದು, ಇದು ರಾಜ್ಯದ ಮೊದಲ ಸಾವು. ಜತೆಗೆ ಈತ ದೇಶದಲ್ಲೇ ಕೋವಿಡ್-19 ಸೋಂಕಿಗೆ ಬಲಿಯಾದ ಅತ್ಯಂತ ಕಿರಿಯ ಎನಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News