ಕೊರೋನ: ಕ್ಯಾನ್ಸರ್, ಎಚ್‌ಐವಿ ರೋಗಿಗಳಿಗೆ ವಿಚಿತ್ರ ಸಮಸ್ಯೆ

Update: 2020-04-02 04:54 GMT

ಹೊಸದಿಲ್ಲಿ, ಎ.2: ಇಡೀ ದೇಶದ ಆರೋಗ್ಯ ವ್ಯವಸ್ಥೆ ಕೋವಿಡ್-19 ಚಿಕಿತ್ಸೆಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ, ಎಚ್‌ಐವಿ, ಕ್ಯಾನ್ಸರ್ ಹಾಗೂ ಕಿಡ್ನಿ ಸಮಸ್ಯೆ ಇರುವ ರೋಗಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ಚಿಕಿತ್ಸೆಯನ್ನು ಮುಂದುವರಿಸಲು ಆಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಮತ್ತು ಆಪರೇಷನ್ ಥಿಯೇಟರ್‌ಗಳ ವ್ಯವಸ್ಥೆ ಇಲ್ಲದಿರುವುದು ಇವರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿದೆ.

ಉದಾಹರಣೆಗೆ ಲಾಕ್‌ಡೌನ್ ಘೋಷಣೆಯಾದಾಗ ಮೈತ್ರಿ ಎಂಬ ಮಹಿಳೆ ದಿಲ್ಲಿ ಎಐಐಎಂಎಸ್‌ನಲ್ಲಿ ಬಾಯಿ ಕ್ಯಾನ್ಸರ್‌ರೆ ಚಿಕಿತ್ಸೆ ಪಡೆಯುತ್ತಿದ್ದರು. ತುರ್ತು ಶಸ್ತ್ರಚಿಕಿತ್ಸೆ ಅಗತ್ಯ ಎಂದು ಮಾರ್ಚ್ 13ರಂದು ವೈದ್ಯರು ಸೂಚಿಸಿದರು. ಆದರೆ ಎಐಐಎಂಎಸ್‌ನಲ್ಲಿ ಎಲ್ಲ ಓಪಿಡಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸುತ್ತಿಲ್ಲ. ನಾಲಿಗೆಯಲ್ಲಿ ತೀವ್ರ ನೋವು ಮತ್ತ ಹುಣ್ಣು ಹೊಂದಿರುವ ಇವರ ನಾಲಿಗೆಯಲ್ಲಿ ರಕ್ತಸ್ರಾವ ಆರಂಭವಾಗಿದೆ. ಎಐಐಎಂಎಸ್‌ನ ತುರ್ತುಚಿಕಿತ್ಸಾ ಘಟಕಕ್ಕೆ ನಾವು ಪ್ರತಿದಿನ ಹೋಗಬೇಕಾಗಿದೆ. ಏಕೆಂದರೆ ಇತರ ಯಾವ ಸೌಲಭ್ಯವೂ ಇಲ್ಲ. ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿರುವುದರಿಂದ ನೋವು ನಿವಾರಕ ಮಾತ್ರೆ ಹಾಗೂ ರಕ್ತಸ್ರಾವ ನಿಯಂತ್ರಣಕ್ಕೆ ಚಿಕಿತ್ಸೆ ನೀಡುವುದು ಬಿಟ್ಟರೆ ಬೇರೇನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದಾರೆ ಎಂದು ಮೈತ್ರಿಯವರ ಪತಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿರುವುದು ಕೂಡಾ ಹಲವು ರೋಗಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಬಹುತೇಕ ಎಲ್ಲ ಹೊರರೋಗಿ ಕಿಮೋಥೆರಪಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕ್ಯಾನ್‌ಸಪೋರ್ಟ್ ಎಂಬ ಸ್ವಯಂಸೇವಾ ಸಂಘಟನೆಯ ರಜ್ವೀಂದರ್ ಸಿಂಗ್ ಹೇಳುತ್ತಾರೆ. ಕೋವಿಡ್ ಹೊರತುಪಡಿಸಿ ಇತರ ರೋಗಿಗಳಿಗೆ ಆರೋಗ್ಯ ಸೇವೆ ನಿರಾಕರಿಸುತ್ತಿರುವ ಬಗ್ಗೆ ಅವರು ಹತಾಶೆ ವ್ಯಕ್ತಪಡಿಸುತ್ತಾರೆ.

ಮುಂಬೈನ ಎಚ್‌ಐವಿ ರೋಗಿ ಮತ್ತು ಹಮ್‌ಸಫರ್ ಟ್ರಸ್ಟ್ ಕಾರ್ಯಕರ್ತ ಗಣೇಶ್ ಆಚಾರ್ಯ ಹೇಳುವಂತೆ, ಎಚ್‌ಐವಿ ರೋಗಿಗಳು ಔಷಧಿಗಾಗಿ ಎಆರ್‌ಟಿ ಕೇಂದ್ರಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಎರಡನೇ ಮತ್ತು ಮೂರನೇ ಹಂತದ ಔಷಧಿ ಪಡೆಯುತ್ತಿರುವವರ ಸಮಸ್ಯೆ ಇನ್ನೂ ತೀವ್ರ. ಏಕೆಂದರೆ ಕೇವಲ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಈ ಔಷಧಿ ಲಭ್ಯ. ದೈನಂದಿನ ಡೋಸೇಜ್ ಪಡೆಯಲು ಸಾಧ್ಯವಾಗದ ಬಹಳಷ್ಟು ರೋಗಿಗಳ ನಿರೋಧಕ ವ್ಯವಸ್ಥೆ ಹದಗೆಡಲಿದೆ. ಕ್ಷಯದಂಥ ಇತರ ರೋಗಗಳಿಗೆ ಬಲಿಯಾಗುವ ಅಪಾಯವಿದೆ

ನಿಯತವಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯಬೇಕಾದ ರೋಗಿಗಳಿಗೂ, ಲಾಕ್‌ಡೌನ್ ಕಾರಣದಿಂದ ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೈದರಾಬಾದ್‌ನಲ್ಲಿ ಪೊಲೀಸರು ಇಂಥ ರೋಗಿಗಳಿಗೆ ಪಾಸ್‌ಗಳನ್ನು ವಿತರಿಸಿದ್ದಾರೆ. ಆದರೆ ಇತರ ಹಲವು ಕಡೆಗಳಲ್ಲಿ ವೈದ್ಯರ ಪತ್ರ ತೋರಿಸಿದರೂ, ಪ್ರಯಾಣಕ್ಕೆ ಅವಕಾಶ ನೀಡುತ್ತಿಲ್ಲ ಎಂದು ರೋಗಿಗಳು ದೂರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News