ಭಾರತಕ್ಕೆ 100 ಕೋಟಿ ರೂ. ಮೌಲ್ಯದ ಸುರಕ್ಷಾ ಸಾಧನ ದೇಣಿಗೆ ನೀಡಿದ ಟಿಕ್‌ಟಾಕ್

Update: 2020-04-02 05:05 GMT

ಹೊಸದಿಲ್ಲಿ, ಎ.2: ಜನಪ್ರಿಯ ವೀಡಿಯೋ ಶೇರಿಂಗ್ ಆ್ಯಪ್ ಆಗಿರುವ ಟಿಕ್ ಟಾಕ್, ಕೊರೋನಪೀಡಿತ ಭಾರತದಲ್ಲಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗಾಗಿ ಸುಮಾರು 100 ಕೋಟಿ ರೂ. ಮೌಲ್ಯದ ನಾಲ್ಕು ಲಕ್ಷ ಸುರಕ್ಷಾ ಹರ್ಮತ್ ಸೂಟ್‌ಗಳನ್ನು ದೇಣಿಗೆಯಾಗಿ ನೀಡಿದೆ.

ಮೊದಲ ಕಂತಾಗಿ 20,675 ಸೂಟ್‌ಗಳನ್ನು ಬುಧವಾರ ನೀಡಲಾಗಿದ್ದು, ಶನಿವಾರದ ಒಳಗಾಗಿ 1.80 ಲಕ್ಷ ಸೂಟ್‌ಗಳು ಆಗಮಿಸಲಿವೆ. ಮುಂದಿನ ವಾರ ಉಳಿದ 2 ಲಕ್ಷ ಸೂಟ್‌ಗಳನ್ನು ವಿತರಿಸಲಾಗುವುದು ಎಂದು ಸರ್ಕಾರಕ್ಕೆ ಟಿಕ್ ಟಾಕ್ ಪತ್ರ ಬರೆದಿದೆ.

ಈ ವಿಶೇಷ ಸುರಕ್ಷಾ ಸೂಟ್‌ಗಳನ್ನು ಕ್ರೋಢೀಕರಿಸುವುದು, ಲಾಜಿಸ್ಟಿಕ್ಸ್ ಮತ್ತು ವಿತರಣೆ ಹೊಣೆಯನ್ನು ಜವಳಿ ಸಚಿವಾಲಯ ಹೊತ್ತಿರುವುದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರಿಗೆ ಟಿಕ್ ಟಾಕ್ ಮುಖ್ಯಸ್ಥ ನಿಖಿಲ್ ಗಾಂಧಿ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತದಲ್ಲಿ ಅರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಸಾಧನಗಳ ಕೊರತೆ ತೀವ್ರವಾಗಿದೆ. ಸೂಟ್, ಕೈಗವಸು, ಕನ್ನಡಕ, ಮಾಸ್ಕ್ ಹೀಗೆ ವೈಯಕ್ತಿಕ ಸುರಕ್ಷಾ ಸಾಧನಗಳ ಕೊರತೆ ವಿರುದ್ಧ ಸಿಡಿದೆದ್ದಿರುವ ವೈದ್ಯರು ಮುಷ್ಕರ ನಡೆಸುವ ಬೆದರಿಕೆ ಒಡ್ಡಿದ್ದಾರೆ.

ಟಿಕ್ ಟಾಕ್ ಭಾರತದಲ್ಲಿ 250 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿದ್ದು, ಕೋವಿಡ್-19 ಸಾಂಕ್ರಾಮಿಕ ತಡೆ ಜಾಗೃತಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಕಂಪೆನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News