ಭಾರತೀಯ ವೈದ್ಯರು ಸುರಕ್ಷಾ ಸಾಧನಗಳ ಕೊರತೆ ಎದುರಿಸುತ್ತಿರುವ ನಡುವೆಯೇ ಭಾರತದಿಂದ ಸರ್ಬಿಯಾಗೆ 90 ಟನ್ ಸಾಧನಗಳ ರಫ್ತು

Update: 2020-04-02 06:09 GMT
ಚಿತ್ರ ಕೃಪೆ: twitter

ಹೊಸದಿಲ್ಲಿ, ಎ.2: ದೇಶದಲ್ಲಿ ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ರಕ್ಷಾ ಕವಚ ಹಾಗೂ ಸುರಕ್ಷಾ ಸಾಧನಗಳ ಕೊರತೆ ತೀವ್ರವಾಗಿ ಕಾಡುತ್ತಿರುವ ನಡುವೆಯೇ ಭಾರತ 90 ಟನ್ ತೂಕದ ವೈದ್ಯಕೀಯ ಉಪಕರಣಗಳು ಹಾಗೂ ವೈದ್ಯಕೀಯ ಸುರಕ್ಷಾ ಸಾಧನಗಳನ್ನು ಸರ್ಬಿಯಾ ದೇಶಕ್ಕೆ ರಫ್ತು ಮಾಡಿದೆ. 

ಕೊರೋನ ಪೀಡಿತ ದೇಶಗಳಿಗೆ ಸಹಾಯ ಮಾಡುತ್ತಿರುವ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಇದರ ಸರ್ಬಿಯನ್ ಘಟಕ ಮಾಡಿದ ಟ್ವೀಟ್ ಒಂದು ಮೇಲಿನ ಮಾಹಿತಿ ಬಹಿರಂಗಗೊಳಿಸಿದೆ. ಆದರೆ ಈ ರಫ್ತಿನ ವಿಚಾರ ತನಗೆ ತಿಳಿದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

‘‘90 ಟನ್ ವೈದ್ಯಕೀಯ ಸುರಕ್ಷಾ ಸಲಕರಣೆಗಳನ್ನೊಳಗೊಂಡ ಎರಡನೇ ಸರಕು ವಿಮಾನ-ಬೋಯಿಂಗ್ 747 ಭಾರತದಿಂದ ಇಂದು ಬೆಲ್ಗ್ರೇಡ್ ತಲುಪಿದೆ. ಈ ಸಲಕರಣೆಗಳ ಸಾಗಾಟವನ್ನು ಯುರೋಪಿಯನ್ ಯೂನಿಯನ್ ಭರಿಸಿತ್ತು ಹಾಗೂ ವಿಮಾನಸೇವೆಯನ್ನು ಸರ್ಬಿಯಾ ಯುಎನ್‌ಡಿಪಿ ಏರ್ಪಾಡು ಮಾಡಿ ಶೀಘ್ರವಾಗಿ ವಸ್ತುಗಳು ತಲುಪುವಂತೆ ಮಾಡಿದೆ’’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಸರ್ಬಿಯಾಗೆ ತಲುಪಿದ ಸರಕಿನಲ್ಲಿ 50 ಟನ್ ಸರ್ಜಿಕಲ್ ಗ್ಲವ್ಸ್, ಮಾಸ್ಕ್ಸ್, ಕವರಾಲ್ಸ್ ಸೇರಿದ್ದು ಇವುಗಳ ಅಗತ್ಯ ಈಗ ಭಾರತಕ್ಕೆ ಹಿಂದಿಗಿಂತಲೂ ಅಗತ್ಯವಾಗಿದೆ. ಮಾರ್ಚ್ 29ರಂದು ಕಳುಹಿಸಲಾದ ಇನ್ನೊಂದು ಸರಕು ವಿಮಾನದಲ್ಲಿ 35 ಲಕ್ಷ ಜತೆ ಸರ್ಜಿಕಲ್ ಗ್ಲವ್ಸ್ ಇತ್ತು ಎಂದು ಕೊಚ್ಚಿ ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ. ಕೊಚ್ಚಿ ಕಸ್ಟಮ್ಸ್ ಈ ವಸ್ತುಗಳ ಸಾಗಾಟಕ್ಕೆ ಅಗತ್ಯ ಅನುಮತಿಗಳನ್ನು ನೀಡಿತ್ತು.

ದೇಶದಲ್ಲಿ ಈಗಾಗಲೇ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ಸುಮಾರು 100 ವೈದ್ಯರುಗಳು ಭಾರತದ ವಿವಿಧೆಡೆ ಕ್ವಾರಂಟೈನ್‌ನಲ್ಲಿದ್ದು ಕನಿಷ್ಠ ನಾಲ್ವರು ವೈದ್ಯರಿಗೆ ಕೊರೋನ ಸೋಂಕು ತಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News