ಕಾಸರಗೋಡಿನಲ್ಲಿ ಯೆನೆಪೊಯದ ಐವರು ಸಿಬ್ಬಂದಿಯಿಂದ ಸ್ವಯಂ ಪ್ರೇರಿತ ಸೇವೆ

Update: 2020-04-02 13:48 GMT

ಮಂಗಳೂರು, ಎ.2: ಕರ್ನಾಟಕ - ಕೇರಳ ಗಡಿ ಮುಚ್ಚಿದ ಪರಿಣಾಮವಾಗಿ, ಕಾಸಗೋಡಿನಿಂದ ಮಂಗಳೂರಿನ ಆಸ್ಪತ್ರೆಗಳಿಗೆ ಇತರ ರೋಗಗಳ ಚಿಕಿತ್ಸೆಗೆ ಬರುತ್ತಿದ್ದವರಿಗೆ ಬಹಳಷ್ಟು ತೊಂದರೆಯಾಗಿದೆ. ಆ್ಯಂಬುಲೆನ್ಸ್‌ನಲ್ಲಿ ಬರುವ ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಈ ನಡುವೆ ಯೆನೆಪೊಯ ವೈದ್ಯಕೀಯ ಕಾಲೇಜಿನಲ್ಲಿ ಬಿ ಎಸ್ ಡಯಾಲಿಸಿಸ್ ತಂತ್ರಜ್ಞಾನವನ್ನು ಪೂರ್ಣಗೊಳಿಸಿದ ಕಾಸರುಗೋಡು ಮೂಲದ ಐವರು ಸಿಬ್ಬಂದಿ ಕಾಸರಗೋಡಿನ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತರಾಗಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲು ಮುಂದಾಗುವ ಮೂಲಕ ಮಾನವೀಯ ಮೌಲ್ಯಕ್ಕೆ ಒತ್ತು ನೀಡಿದ್ದಾರೆ.

ಮನೆಯಲ್ಲಿ ಸುರಕ್ಷಿತವಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಿರುವ ಈ ತುರ್ತು ಪರಿಸ್ಥಿತಿಯಲ್ಲಿ ಶಿಫಾ, ಅಖಿಲ್, ಮುಫೀದಾ, ಗೋಪಿಕಾ ಮತ್ತು ಅಫ್ರಾ ರೋಗಿಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಮುಂದಾಗುವ ಮೂಲಕ ಹೃದಯವಂತಿಕೆಯನ್ನು ಪ್ರದರ್ಶಿಸಿದ್ದಾರೆ. ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಒದಗಿಸಲಾದ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ಮತ್ತು ಕೈಗೆಟುಕುವ ಚಿಕಿತ್ಸೆಯಿಂದಾಗಿ, ಗಡಿಯುದ್ದಕ್ಕೂ ಹೆಚ್ಚಿನ ಸಂಖ್ಯೆಯ ರೋಗಿಗಳು ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಈ ಪೈಕಿ, 100ಕ್ಕೂ ಹೆಚ್ಚು ರೋಗಿಗಳು ಕೇವಲ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಇದೀಗ ಗಡಿಗಳನ್ನು ಮುಚ್ಚಿರುವುದರಿಂದ ಡಯಾಲಿಸಿಸ್‌ಗಾಗಿ ಆಸ್ಪತ್ರೆಗೆ ಬರುತ್ತಿದ್ದ ಬಿಪಿಎಲ್ ಕಾರ್ಡ್‌ದಾರ ರೋಗಿಗಳಿಗೆ ತೊಂದರೆಯಾಗಿದೆ. ಈ ಸಂಕಷ್ಟವನ್ನು ಮನಗಂಡ ಆಸ್ಪತ್ರೆಯು 5 ಡಯಾಲಿಸಿಸ್ ಯಂತ್ರಗಳನ್ನು ಕಾಸರೋಗೋಡಿನ ಕಿಮ್ಸ್ ಸನ್‌ರೈಸ್‌ಆಸ್ಪತ್ರೆಗೆ ಸ್ಥಳಾಂತರಿಸಲು ಆಸ್ಪತ್ರೆ ನಿರ್ಧರಿಸಿತು. ಅಲ್ಲಿ ಕಾಸರಗೋಡಿನ ಬಡ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಇವರ ಈ ಕ್ರಮಕ್ಕೆ ಇದೀಗ ಈ ಐವರು ಯುವ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಸೇವೆಗೆ ಮುಂದಾಗಿರುವುದು ಪ್ರಶಂಸೆಗೆ ಕಾರಣವಾಗಿದೆ. ಯೆನೆಪೊಯ ಆಸ್ಪತ್ರೆಯ ಸಂಪೂರ್ಣ ಸಹಕಾರದೊಂದಿಗೆ ಆಸ್ಪತ್ರೆಯ ಸಹಾಯಕ ನಿರ್ವಹಣಾ ಅಧಿಕಾರಿ ಮುಹಮ್ಮದ್ ಸಬಿತ್ ಅವರ ಸಂಯೋಜನೆಯಲ್ಲಿ ಡಯಾಲಿಸಿಸ್ ತಂಡ ಮತ್ತು ಜೈವಿಕ ವೈದ್ಯಕೀಯ ವಿಭಾಗದ ಬೆಂಬಲದೊಂದಿಗೆ ಈ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News