ಯೋಜನಾರಹಿತ ಲಾಕ್‌ಡೌನ್‌ನಿಂದ ಲಕ್ಷಾಂತರ ವಲಸಿಗ ಕಾರ್ಮಿಕರಿಗೆ ಯಾತನೆ

Update: 2020-04-02 16:01 GMT

ಹೊಸದಿಲ್ಲಿ, ಎ.2: ಮಾರಕ ಕೊರೋನ ವೈರಸ್ ಸೋಂಕಿನ ವ್ಯಾಪಕ ಹರಡುವಿಕೆಯನ್ನು ತಡೆಯಲು ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಅಗತ್ಯವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಗುರುವಾರ ತಿಳಿಸಿದ್ದಾರೆ. ಆದರೆ ಕೇಂದ್ರ ಸರಕಾರವು ಲಾಕ್‌ಡೌನ್‌ನ್ನು ಯೋಜನಾರಹಿತವಾಗಿ ಜಾರಿಗೊಳಿಸಿದ್ದರಿಂದ ಲಕ್ಷಾಂತರ ವಲಸಿಗ ಕಾರ್ಮಿಕರನ್ನು ಯಾತನೆಗೀಡು ಮಾಡಿದೆ ಹಾಗೂ ಅವರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ ಎಂದವರು ಹೇಳಿದ್ದಾರೆ.

 ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಈ ಗಂಭೀರವಾದ ಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸರಕಾರವು ಸಮಗ್ರವಾದ ಕಾರ್ಯತಂತ್ರವೊಂದನ್ನು ಜಾರಿಗೊಳಿಸಬೇಕೆಂದು ಕರೆ ನೀಡಿದರು.

 ‘‘ಕೊರೋನ ವೈರಸ್ ಸೋಂಕಿನ ಪತ್ತೆಗೆ ಯಾವುದೇ ನಿರಂತರ ಹಾಗೂ ವಿಶ್ವಸನೀಯವಾದ ಪರೀಕ್ಷಾ ವಿಧಾನವಿಲ್ಲ. ಹೀಗಿರುವಾಗ ಈ ಭಯಾನಕ ರೋಗದ ವಿರುದ್ಧ ಹೋರಾಡಲು ಲಾಕ್‌ಡೌನ್ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ’’ ಎಂದರು. ಕೊರೋನ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೆ ಸಮರೋಪಾದಿಯಲ್ಲಿ ವೈಯಕ್ತಿಕ ಸಂರಕ್ಷಣಾತ್ಮಕ ಉಪಕರಣಗಳನ್ನು ಒದಗಿಸಬೇಕು. ಆಸ್ಪತ್ರೆಗಳಲ್ಲಿ ಸಮರ್ಪಕವಾದ ವೆಂಟಿಲೇಟರ್‌ಗಳು, ಐಸೊಲೇಶನ್ ಹಾಸಿಗೆಗಳು ಹಾಗೂ ಉಸಿರಾಟದ ಉಪಕರಣಗಳು ಇರಬೇಕೆಂದು ಅವರು ಆಗ್ರಹಿಸಿದರು.

ಮೂಲಸೌಕರ್ಯಗಳ ಕೊರತೆ ಹಾಗೂ ಪೂರ್ವಸಿದ್ಧತೆಗಳ ಕೊರತೆಯಿಂದಾಗಿ ಸೋಂಕು ಹಾಗೂ ಸಾವುನೋವು ಸಂಭವಿದಂತೆ ನೋಡಿಕೊಳ್ಳುವ ಹೊಣೆ ಸರಕಾರದ ಮೇಲಿದೆಯೆಂದು ಸೋನಿಯಾ ಹೇಳಿದರು.

ಸಭೆಯಲ್ಲಿ ಪಕ್ಷದ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಮಾತನಾಡಿ, ಕೋವಿಡ್-19ರಿಂದಾಗಿ ಉಂಟಾಗಲಿರುವ ಆರ್ಥಿಕತೆಯ ವಿನಾಶವನ್ನು ಎದುರಿಸಲು ಭಾರತ ಸನ್ನದ್ಧವಾಗಬೇಕೆಂದು ಹೇಳಿದರು.

ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಮಾತನಾಡಿ, ಕೊರೋನ ವೈರಸ್ ನಿಂದ ದೇಶದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಅಗಾಧತೆಯನ್ನು ಕೇಂದ್ರ ಸರಕಾರವು ಅರಿತುಕೊಂಡಿಲ್ಲವೆಂದು ಹೇಳಿದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್, ಸರಕಾರವು ಬೆಂಬಲಿಸಬೇಕು. ಜೊತೆಗೆ ಅದರ ನ್ಯೂನತೆಗಳನ್ನು ಕೂಡಾ ಎತ್ತಿತೋರಿಸಬೇಕೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News