ಬಡವರಿಗೆ ಪರಿಹಾರ ಪ್ಯಾಕೇಜ್ ಘೋಷಣೆ: ಡಬ್ಲ್ಯುಎಚ್‌ಒ ಮುಖ್ಯಸ್ಥರಿಂದ ಮೋದಿ ಶ್ಲಾಘನೆ

Update: 2020-04-02 16:25 GMT

ನ್ಯೂಯಾರ್ಕ್, ಎ. 2: ನೋವೆಲ್-ಕೊರೋನವೈರಸ್ ಸೊಂಕು ಹರಡುವುದನ್ನು ತಡೆಯಲು ಇಡೀ ಭಾರತಕ್ಕೆ ಬೀಗ ಹಾಕಿದ ಬಳಿಕ, ಬಡವರಿಗೆ ನೆರವಾಗಲು ತೆಗೆದುಕೊಂಡ ಕ್ರಮಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೆಬ್ರಿಯೇಸಸ್ ಗುರುವಾರ ಶ್ಲಾಘಿಸಿದ್ದಾರೆ.

ಲಾಕ್‌ಡೌನ್‌ನಂಥ ಕಠಿಣ ಕ್ರಮಗಳು ಸಮಾಜದ ಅತ್ಯಂತ ಬಡ ಮತ್ತು ಅತಿ ದುರ್ಬಲ ಜನರ ಮೇಲೆ ತೀವ್ರ ಪರಿಣಾಮಗಳನ್ನು ಬೀರಬಹುದಾಗಿದೆ ಎಂಬುದಾಗಿ ಡಬ್ಲ್ಯುಎಚ್‌ಒ ಮುಖ್ಯಸ್ಥರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಆಹಾರ ಪಡಿತರ, ನಗದು ವರ್ಗಾವಣೆ ಮತ್ತು ಉಚಿತ ಅಡುಗೆ ಅನಿಲ ಮುಂತಾದ ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಿರುವುದಕ್ಕಾಗಿ ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು.

ಬೀಗಮುದ್ರೆಯಿಂದ ಊಹಿಸದ ಪರಿಣಾಮ: ಗೇಬ್ರಿಯೇಸಸ್

‘‘ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜನರ ಚಲನವಲನವನ್ನು ದೇಶಗಳು ಸ್ಥಗಿತಗೊಳಿಸುತ್ತಿವೆ ಹಾಗೂ ಮನೆಯಲ್ಲೇ ಇರುವಂತೆ ಜನರಿಗೆ ಹೇಳುತ್ತಿವೆ. ಆದರೆ, ಇಂಥ ಕ್ರಮಗಳು ಅತಿ ಬಡವರು ಮತ್ತು ಅತ್ಯಂತ ದುರ್ಬಲ ವರ್ಗದ ಜನರ ಮೇಲೆ ಊಹಿಸದ ಪರಿಣಾಮಗಳನ್ನು ಬೀರಬಹುದು’’ ಎಂದು ಗೆಬ್ರಿಯೇಸಸ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News