ಕೇರಳದ ದಾದಿಯರನ್ನು ನೆನೆಯೋಣ

Update: 2020-04-02 17:39 GMT

ದಿಲ್ಲಿಯ ಆಸ್ಪತ್ರೆಗಳಲ್ಲಿ ಶುಶ್ರೂಷೆ ಮಾಡುತ್ತಿರುವ ದಾದಿಯರಲ್ಲಿ ಹೆಚ್ಚಿನವರು ಕೇರಳದವರು. ಅದರಲ್ಲೂ ಕೊಟ್ಟಾಯಂ ಜಿಲ್ಲೆಗೆ ಸೇರಿದವರು. ಪ್ರಖ್ಯಾತವಾದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡು 10 ದಿನ ಐಸಿಯುವಿನಲ್ಲಿದ್ದಾಗ ನನ್ನನ್ನು ಎವೆ ಮುಚ್ಚದೆ ಕಾಪಾಡಿದ 6 ಜನ ಮಲೆಯಾಳಿ ದಾದಿಯರಲ್ಲಿ 4 ಜನ ಮಂಗಳೂರಲ್ಲಿ ತರಬೇತಿ ಪಡೆದವರು, ಇಬ್ಬರು ಬೆಂಗಳೂರಲ್ಲಿ. ಮುಂಜಾನೆ ನನ್ನನ್ನು ಬೆತ್ತಲಾಗಿಸಿ ಸ್ನಾನ ಮಾಡಿಸುತ್ತಿದ್ದ ದಾದಿಯೊಬ್ಬಳಿಗೆ ನಾನು ಹೇಳಿದ್ದೆ-‘ ನನ್ನನ್ನು ಹೀಗೆ ನೋಡಿದ ನೀನು ನನ್ನ ತಾಯಿ’ ಆಗ ಆಕೆ ಅಂದದ್ದು- ‘ಎಲ್ಲ ರೋಗಿಗಳೂ ನಮಗೆ ಮಕ್ಕಳೇ, ಅದು ಮಂಗಳೂರಲ್ಲಿ ನಾವು ಕಲಿತ ಮೊದಲ ಪಾಠ’. ನನಗೆ ಕಣ್ತುಂಬಿ ಬಂತು. ಆಸ್ಪತ್ರೆಯಿಂದ ಬಂದವನೇ ಮದರ್ ತೆರೇಸಾ ಬಗ್ಗೆ ಓದತೊಡಗಿದೆ.

ಇದೇ ರೀತಿ ದಿಲ್ಲಿಯ ಯಾವುದೇ ಆಸ್ಪತ್ರೆಗೆ ಹೋದರೂ ಕೇರಳದ ನಗುಮುಖದ ದಾದಿಯರು ನಿಮ್ಮನ್ನು ಇದಿರುಗೊಳ್ಳುತ್ತಾರೆ. ಗುರುಗಾಂವ್‌ನ ಮೇದಾಂತ, ಆರ್ಟಿಮಿಸ್, ದಿಲ್ಲಿಯ ಫೋರ್ಟಿಸ್, ಮೋದಿ, ರಾಕ್ಲೆಂಡ್, ಸೀತಾರಾಮ ಭಾರ್ತಿ, ಅಪೋಲೊ ಮೊದಲಾದ ಪ್ರಖ್ಯಾತ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ದಾದಿಯರ ಸಂಖ್ಯೆ ಸುಮಾರು 10 ಸಾವಿರಕ್ಕೂ ಅಧಿಕ. ಇವರಲ್ಲಿ ಹೆಚ್ಚಿನವರೆಲ್ಲ ಕರ್ನಾಟಕದಲ್ಲಿ ಕಲಿತವರು. ಕರ್ನಾಟಕದಲ್ಲಿ ಅಷ್ಟೊಂದು ಸಂಖ್ಯೆಯ ನರ್ಸಿಂಗ್ ಶಾಲೆಗಳಿವೆ, ಅವುಗಳು ನಡೆಯುವುದೇ ಕೇರಳದಿಂದ ಬರುವ ಮಕ್ಕಳಿಂದ. ಕೇರಳದ ಬಾಲೆಯರು ಕರ್ನಾಟಕದಲ್ಲಿ ಕಲಿತು ದೇಶದಾದ್ಯಂತ ರೋಗಿಗಳ ಸೇವೆ ಮಾಡುತ್ತಾರೆ.

ಇವತ್ತು ಕೇರಳದ ರೋಗಿಗಳಿಗೆ ಕರ್ನಾಟಕ ಬಾಗಿಲು ಬಂದ್ ಮಾಡಿದೆ. ಇದೊಂದು ಅತ್ಯಂತ ಅಮಾನವೀಯವಾದ ಘಟನೆ. ಅಲ್ಲಿಂದ ಬರುವವರ ಬಗ್ಗೆ ಗಡಿ ಭಾಗದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕಾದ್ದು ಸರಿಯಾದ ಕ್ರಮ. ಆದರೆ ಶುಶ್ರೂಷೆಗೆ ಬರುವುದೇ ಬೇಡವೆಂದರೆ ಹೇಗೆ? ನಾಳೆ ಕರ್ನಾಟಕದ ನರ್ಸಿಂಗ್ ಶಾಲೆಗಳಿಗೆ , ಮೆಡಿಕಲ್ ಕಾಲೇಜುಗಳಿಗೆ ಕೇರಳದಿಂದ ಬರುವ ಮಕ್ಕಳಿಗೂ ಗಡಿ ಮುಚ್ಚುವ ಧೈರ್ಯ ಕರ್ನಾಟಕಕ್ಕೆ ಉಂಟೇ?
ರಾಷ್ಟ್ರೀಯತೆಯ ಹುಸಿ ನೆಲೆಗಳು ಬಿಕ್ಕಟ್ಟಿನ ಕ್ಷಣಗಳಲ್ಲಿ ಅನಾವರಣಗೊಳ್ಳುವುದೇ ಹೀಗೆ!

Writer - ಪುರುಷೋತ್ತಮ ಬಿಳಿಮಲೆ

contributor

Editor - ಪುರುಷೋತ್ತಮ ಬಿಳಿಮಲೆ

contributor

Similar News