ಗಡಿ ನಿರ್ಬಂಧ ವಿಚಾರ: ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ

Update: 2020-04-03 08:59 GMT

ಮಂಗಳೂರು, ಎ.3: ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯುವಂತೆ ಕೇರಳ ಹೈಕೋರ್ಟ್ ಎಪ್ರಿಲ್ 1ರಂದು ನೀಡಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. 

ಈ ಮೇಲ್ಮನವಿ ಅರ್ಜಿಯನ್ನು ಮಿಥುನ್ ತಮ್ಮ ವಕೀಲರಾದ ಸಂಜಯ್ ಎಂ ನುಳಿ ಮುಖಾಂತರ ಸಲ್ಲಿಸಿದ್ದಾರೆ. ಜಸ್ಟಿಸ್ ಎಲ್.ನಾಗೇಶ್ವರ ರಾವ್ ಹಾಗೂ ಜಸ್ಟಿಸ್ ದೀಪಕ್ ಗುಪ್ತಾ ಅವರ ಪೀಠ ಈ ಪ್ರಕರಣವನ್ನು ಕರ್ನಾಟಕ ಸರಕಾರ ಸಲ್ಲಿಸಿರುವ ಇಂತಹುದೇ ಇನ್ನೊಂದು ಅಪೀಲಿನ ಜತೆಗೆ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಕೇರಳ-ಕರ್ನಾಟಕ ಗಡಿಯನ್ನು ಮುಚ್ಚಿದ ಕರ್ನಾಟಕ ಸರಕಾರದ ಕ್ರಮವನ್ನು ತಮ್ಮ ಅಪೀಲಿನಲ್ಲಿ ಸಮರ್ಥಿಸಿಕೊಂಡಿರುವ ಮಿಥುನ್, ನೆರೆಯ ಕಾಸರಗೋಡು ಜಿಲ್ಲೆಯಿಂದ ಮಂಗಳೂರಿಗೆ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುವುದರಿಂದ ಸದ್ಯದ ಕೊರೋನ ವೈರಸ್ ಸೋಂಕು ಸಮಸ್ಯೆಯನ್ನು ನಿಭಾಯಿಸುವ ಸಮಯದಲ್ಲಿ ಇದು ಇಲ್ಲಿನ ಆರೋಗ್ಯ ಸೇವಾ ಸಂಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.

'ಜಿಲ್ಲೆಯ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಹಾಗೂ ಅವರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಮಾತ್ರ ಕೇರಳದಿಂದ ದಕ್ಷಿಣ ಕನ್ನಡಕ್ಕೆ ಜನರು ಆಗಮಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ, ಕರ್ನಾಟಕ ಸರಕಾರ ಇಲ್ಲಿನ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗದಂತೆ ಮಾಡುವ ಉದ್ದೇಶದಿಂದ ಸಾಂಕ್ರಾಮಿಕ ರೋಗಗಳ ಕಾಯಿದೆ 1897 ಇದರನ್ವಯ ಈ ನಿರ್ಬಂಧ ಹೇರಿದೆ' ಎಂದು ಮಿಥುನ್ ರೈ ಸಲ್ಲಿಸಿರುವ ಅಪೀಲಿನಲ್ಲಿ ವಿವರಿಸಲಾಗಿದೆ.

ಮಾನವೀಯತೆಯ ನೆಲೆಯಲ್ಲಿ ಈ ಹೆಜ್ಜೆ: ಮಿಥುನ್ ರೈ

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯುವಂತೆ ಕೇರಳ ಹೈಕೋರ್ಟ್‌ನ ಆದೇಶದ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದು ಮಾನವೀಯತೆಯ ದೃಷ್ಟಿಯಿಂದ ಮಾತ್ರವೇ ಹೊರತು ಬೇರೆ ಯಾವುದೇ ಕಾರಣವಿಲ್ಲ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.

ಮಿಥುನ್ ರೈ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಕುರಿತಂತೆ ಪತ್ರಿಕೆ ಅವರನ್ನು ಮಾತನಾಡಿಸಿದಾಗ ಅವರು ಈ ಹೇಳಿಕೆ ನೀಡಿದ್ದಾರೆ. 'ನಾನು ಮಾನವೀಯತೆಯ ದೃಷ್ಟಿಯಿಂದ ಈ ಹೆಜ್ಜೆ ಇರಿಸಿದ್ದೇನೆ. ಇದಕ್ಕೆ ಮುಖ್ಯ ಕಾರಣ ಕೊರೋನ ಸೋಂಕಿನ ಸಾಮುದಾಯಿಕ ಹರಡುವಿಕೆಯನ್ನು ನಿಯಂತ್ರಿಸುವುದಷ್ಟೆ. ಕೇರಳದ ಮೇಲಿನ ಯಾವುದೇ ರೀತಿಯ ದ್ವೇಷ ನನಗಿಲ್ಲ. ನಿನ್ನೆಯವರೆಗೆ ಕಾಸರಗೋಡು ಜಿಲ್ಲೆಯಲ್ಲಿ ಮಾತ್ರವೇ 121 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 21,600 ಜನರು ಕ್ವಾರಂಟೈನ್‌ನಲ್ಲಿದ್ದಾರೆ. ನಮ್ಮ ರಾಜ್ಯದಲ್ಲಿ ಸದ್ಯ 6,000 ಜನರು ಕ್ವಾರಂಟೈನಲ್ಲಿದ್ದಾರೆ. ಕಾಸರಗೋಡಿನಲ್ಲಿ ಸರಕಾರಿ ವೈದ್ಯರು ಸೇರಿದಂತೆ 490 ವೈದ್ಯರಿದ್ದಾರೆ. 30 ಆಸ್ಪತ್ರೆಗಳಿವೆ. ಕಣ್ಣೂರಿನಲ್ಲಿ 18 ವಿಶೇಷ ಆಸ್ಪತ್ರೆಗಳಿವೆ. ಕಾಸರಗೋಡು ಅವಿಭಜಿತ ದ.ಕ. ಜಿಲ್ಲೆಯ ಅಂಗ. ಇಲ್ಲಿ ನಮ್ಮ ನೆಂಟರೂ ಅಲ್ಲಿದ್ದಾರೆ. ಸ್ನೇಹಿತರಿದ್ದಾರೆ. ಕಾಸರಗೋಡು, ಮಂಗಳೂರು ನಮ್ಮೆರಡು ಕಣ್ಣುಗಳಿದ್ದಂತೆ. ವ್ಯವಹಾರ ಸೇರಿದಂತೆ ಎಲ್ಲದಕ್ಕೂ ನಾವು ಪರಸ್ಪರ ಸ್ಪಂದಿಸುತ್ತೇವೆ. ಆದರೆ ಈ ಕೊರೋನ ನಿಯಂತ್ರಣಕ್ಕೆ ಅತೀ ಅಗತ್ಯ ಸಾಮುದಾಯಿಕವಾಗಿ ಹರಡುವಿಕೆಯನ್ನು ನಿಯಂತ್ರಿಸುವುದಾಗಿದೆ. ಆ ದೃಷ್ಟಿಯಿಂದ ನಾನು ಕೇರಳ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿರುವುದು' ಎಂದು ಮಿಥುನ್ ರೈ ತಿಳಿಸಿದ್ದಾರೆ.

‘‘ಗಡಿ ನಿರ್ಬಂಧ ತೆರವುಗೊಳಿಸಿದರೆ ಒಂದು ದಿನದಲ್ಲಿ ಸಾವಿರಾರು ಜನ ಕ್ವಾರಂಟೈನ್‌ಗೆ ಒಳಪಡುವ ಅಪಾಯವಿದೆ. ಇಲ್ಲಿ ಸದ್ಯ ಸರಕಾರದ ವೆನ್‌ಲಾಕ್ ಆಸ್ಪತ್ರೆಯನ್ನು ಕೊರೋನ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಈಗಾಗಲೇ ನಮ್ಮಲ್ಲಿ 9 ಪಾಸಿಟಿವ್ ಪ್ರಕರಣಗಳಿವೆ. ಇಲ್ಲಿ ನಾವು ಎಚ್ಚರಿಕೆ ವಹಿಸದಿದ್ದರೆ, ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಮುಂದೆ ನಾವು ನೆರೆಯ ಜಿಲ್ಲೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಬರಬಹುದು. ಇಲ್ಲಿನ ಸೋಂಕಿತರು ಮುಂದೆ ಉಡುಪಿ, ಮಡಿಕೇರಿ, ಬೆಂಗಳೂರು ಇಲ್ಲಿ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಬಂದಲ್ಲಿ ಮತ್ತೆ ರಾಜ್ಯಕ್ಕೇ ಇದು ಹರಡುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಸದ್ಯ ತೀವ್ರಗತಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ಏರಿಕೆಯಾಗುತ್ತಿರುವ ಕಾಸಗೋಡಿನ ಗಡಿ ನಿರ್ಬಂಧವನ್ನು ತೆರವುಗೊಳಿಸದಿರುವುದೇ ನಮ್ಮ ಮುಂದಿರುವ ದಾರಿ. ಇದೇ ಹಂತದಲ್ಲಿ ನಾವು ಈ ಮಹಾಮಾರಿಯನ್ನು ನಿಯಂತ್ರಿಸಬೇಕಾಗಿದೆ’’ ಎಂದು ಮಿಥುನ್ ರೈ ಅಭಿಪ್ರಾಯಿಸಿದ್ದಾರೆ.

‘‘ಈ ಕೊರೋನ ಸೋಂಕಿಗೆ ಹೆಚ್ಚಾಗಿ ಬಲಿಪಶುಗಳಾಗುವವರು ವೃದ್ಧರು ಮತ್ತು ಮಕ್ಕಳು. ಹಾಗಾಗಿ ಸಾಮುದಾಯಿಕ ಹರಡುವಿಕೆಯ ಬಗ್ಗೆ ನಾವು ಜಾಗರೂಕರಾಗಲೇ ಬೇಕು. ಒಂದೆರಡು ವರ್ಷದ ಮಕ್ಕಳಿಗೆ ಈ ರೋಗ ಸಾಕಷ್ಟು ಬಾಧಿಸುತ್ತದೆ. ಆ ಸಂದರ್ಭ ಪೋಷಕರೂ ಅಸಹಾಯಕರಾಗಬೇಕಾಗುತ್ತದೆ. ಹಾಗಾಗಿ ನಾವು ಈ ಎಲ್ಲಾ ಅಪಾಯಗಳನ್ನು ಅರಿತಿದ್ದರೂ ಸಾಮುದಾಯಿಕ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಬಾರದು. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನು ಈ ಕ್ರಮ ಕೈಗೊಂಡಿದ್ದೇನೆ. ಇದು ಯಾವುದೇ ರೀತಿಯ ವೈಯಕ್ತಿಕ ರಾಜಕೀಯವಲ್ಲ. ನನ್ನ ಮನೆಯಲ್ಲಿ ಐದು ಮಂದಿ ವೈದ್ಯರಿದ್ದಾರೆ. ಹಾಗಾಗಿ ಈ ಸೋಂಕಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಅದಕ್ಕಾಗಿಯೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವುದು'' ಎಂದು ಮಿಥುನ್ ರೈ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News