ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಕೈಜೋಡಿಸಲು ಮುಂದಾದ 30,000ಕ್ಕೂ ಅಧಿಕ ವೈದ್ಯರು

Update: 2020-04-03 17:05 GMT

ಹೊಸದಿಲ್ಲಿ, ಎ.3: ನಿವೃತ್ತ ಸರಕಾರಿ ಮತ್ತು ಸಶಸ್ತ್ರ ಪಡೆಗಳ ವೈದ್ಯರು, ಖಾಸಗಿ ವೃತ್ತಿಪರರು ಸೇರಿದಂತೆ 30,000ಕ್ಕೂ ಅಧಿಕ ವೈದ್ಯರು ಕೊರೋನ ವೈರಸ್‌ನ ವಿರುದ್ಧ ಸರಕಾರದ ಹೋರಾಟದಲ್ಲಿ ನೆರವಾಗಲು ಸ್ವಯಂಸ್ಫೂರ್ತಿಯಿಂದ ಮುಂದಾಗಿದ್ದಾರೆ.

ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಮುಂದಾಗುವಂತೆ ಸರಕಾರವು ಮಾ.25ರಂದು ವಿವಿಧ ಕ್ಷೇತ್ರಗಳಲ್ಲಿಯ ನಿವೃತ್ತ ವೈದ್ಯರು ಮತ್ತು ಖಾಸಗಿ ವೈದ್ಯರಿಗೆ ಮನವಿ ಮಾಡಿಕೊಂಡಿತ್ತು. ವೈದ್ಯರು ಈ ಉದಾತ್ತ ಸೇವೆಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ನೀತಿ ಆಯೋಗದ ಅಧಿಕೃತ ಜಾಲತಾಣದಲ್ಲಿ ಕೊಂಡಿಯೊಂದನ್ನು ಒದಗಿಸಲಾಗಿತ್ತು.

ನಿವೃತ್ತ ಸರಕಾರಿ ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಹಾಗೂ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ವೈದ್ಯರು, ಖಾಸಗಿಯವರು ಸೇರಿದಂತೆ 30,100 ವೈದ್ಯರು ಕೊರೋನ ವೈರಸ್ ವಿರುದ್ಧದ ಸರಕಾರದ ಹೋರಾಟದಲ್ಲಿ ಭಾಗಿಯಾಗುವುದಾಗಿ ಲಿಖಿತವಾಗಿ ತಿಳಿಸಿದ್ದಾರೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಶುಕ್ರವಾರ ಇಲ್ಲಿ ತಿಳಿಸಿದರು.

ಅಮೆರಿಕ,ಇಟಲಿ,ಬ್ರಿಟನ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ಕೊರೋನ ವೈರಸ್ ವಿರುದ್ಧ ಹೋರಾಡಲು ಕಾರ್ಯರಂಗಕ್ಕೆ ಮರಳಿ ಬರುವಂತೆ ನಿವೃತ್ತ ವೈದ್ಯಕೀಯ ವೃತ್ತಿಪರರನ್ನು ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News