ದೇಶದಲ್ಲಿ ಸುಮಾರು 50 ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಕೊರೋನ ಸೋಂಕು

Update: 2020-04-03 17:41 GMT

ಹೊಸದಿಲ್ಲಿ, ಎ. 3: ದೇಶದಲ್ಲಿ ಸುಮಾರು 50 ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಸೋಂಕು ಯಾವ ರೀತಿ ತಗುಲಿದೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.

ಕೊರೋನ ಸೋಂಕಿತ ರೋಗಿಗಳಿಂದ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡಿದೆಯೇ ಅಥವಾ ಕರ್ತವ್ಯದ ಸ್ಥಳದಿಂದ ಹೊರಗಡೆ ಸೋಂಕು ತಗುಲಿದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ. ಇವರಲ್ಲಿ ಕೆಲವು ವೈದ್ಯರು ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ವೈಯಕ್ತಿಕ ರಕ್ಷಣಾ ಸಲಕರಣೆ(ಪಿಪಿಇ)ಯ ಕೊರತೆಯ ಕಾರಣ ಕೊರೋನ ಸೋಂಕಿತರ ಚಿಕಿತ್ಸೆಯ ಸಂದರ್ಭ ವೈದ್ಯರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸರಕಾರಿ ಸಂಸ್ಥೆಗಳು ವೈಯಕ್ತಿಕ ರಕ್ಷಣಾ ಸಲಕರಣೆಯ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತಾದ ಆರ್ಮಿ ಕಮಾಂಡ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವ ಭಾರತೀಯ ಸೇನೆಯ ವೈದ್ಯರಿಗೆ ಸೋಂಕು ತಗುಲಿರುವುದು ಮಾರ್ಚ್ 29ರಂದು ದೃಢಪಟ್ಟಿದ್ದು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಇವರು ಹೊಸದಿಲ್ಲಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ, ಇವರ ಸಂಪರ್ಕದಲ್ಲಿದ್ದವರು ಹಾಗೂ ಸಹೋದ್ಯೋಗಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಎಪ್ರಿಲ್ 1ರಂದು ಸಿಆರ್‌ಪಿಎಫ್‌ನಲ್ಲಿ ವೈದ್ಯರಾಗಿರುವ ದಿಲ್ಲಿ ಮೂಲದ ವೈದ್ಯಾಧಿಕಾರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು ಅವರನ್ನು ಹರ್ಯಾಣದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಧಿಕಾರಿ ದಕ್ಷಿಣ ದಿಲ್ಲಿಯ ಸಾಕೇತ್ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಮೆಸ್‌ನಲ್ಲಿ ಉಳಿದುಕೊಂಡಿದ್ದ ಕಾರಣ ಮೆಸ್‌ನಲ್ಲಿದ್ದವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಇದೇ ರೀತಿ, ದಿಲ್ಲಿಯ ಎಐಐಎಂಎಸ್‌ನ ಸ್ಥಾನಿಕ ವೈದ್ಯರು ಹಾಗೂ ಅವರ ಗರ್ಭಿಣಿ ಪತ್ನಿಗೂ ಕೊರೊನ ವೈರಸ್ ಸೋಂಕು ದೃಢಪಟ್ಟಿದ್ದು ಇವರ ಕುಟುಂಬದ ಸದಸ್ಯರು ಹಾಗೂ ನಿಕಟ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News