ಆದಾಯ ತೆರಿಗೆ ನೋಟಿಸ್ ರದ್ದತಿ ಕೋರಿದ್ದ ಎನ್‍ಡಿಟಿವಿ ಅರ್ಜಿ ಸ್ವೀಕರಿಸಿದ ಸುಪ್ರೀಂ

Update: 2020-04-04 04:30 GMT

ಹೊಸದಿಲ್ಲಿ: 2007-08ನೇ ಹಣಕಾಸು ವರ್ಷದ ಆದಾಯ ತೆರಿಗೆ ಅಸೆಸ್‍ಮೆಂಟ್ ಮರು ತೆರೆಯಬೇಕು ಎಂದು ಸೂಚಿಸಿ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ ನ್ಯೂಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‍ಡಿಟಿವಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಆಂಗೀಕರಿಸಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅನ್ವಯ ಮೌಲ್ಯಮಾಪನ ಅಧಿಕಾರಿ ನೋಟಿಸ್ ನೀಡಿದ್ದು, ದೊಡ್ಡ ಪ್ರಮಾಣದ ಆದಾಯವನ್ನು ಅಸೆಸ್‍ಮೆಂಟ್‍ನಿಂದ ತಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 642 ಕೋಟಿ ರೂಪಾಯಿಗಳನ್ನು ಖಾತೆಗೆ ಹೆಚ್ಚುವರಿಯಾಗಿ ಸೇರಿಸಬೇಕು ಎಂದು ಸೂಚಿಸಿದ್ದರು.

ಈ ನೋಟಿಸ್‍ಗಳನ್ನು 2015ರಲ್ಲಿ ನೀಡಲಾಗಿದ್ದು, ಇದರ ಅವಧಿ ಮುಗಿದಿದೆ ಹಾಗೂ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಆದಾಯ ತೆರಿಗೆ ಪಾವತಿದಾರರಿಗೆ ಅಸೆಸ್‍ಮೆಂಟ್ ಮರು ತೆರೆಯುವಂತೆ ಸೂಚಿಸಲು ಸಕಾರಣವಿದೆ ಎನ್ನುವುದು ಮನವರಿಕೆಯಾಗಬೇಕು ಮತ್ತು ಅಘೋಷಿತ ಆದಾಯದ ಬಗ್ಗೆ ನಾಲ್ಕು ವರ್ಷಗಳ ಬಳಿಕ ಏಕೆ ನೋಟಿಸ್ ನೀಡಲಾಗಿದೆ ಎನ್ನುವುದು ಸ್ಪಷ್ಟವಾಗಬೇಕು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟು, ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ.

ಆದರೆ ಈ ಆದಾಯ ಮೇಲೆ ಹೇಳಿದ ಕಾಯ್ದೆಯ ಸೆಕ್ಷನ್ 147ರ ಅನ್ವಯ ವಿನಾಯಿತಿ ಪಡೆಯಲು ಅರ್ಹವಾಗಿದೆಯೇ ಎಂಬ ಬಗ್ಗೆ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News