‘ಪಟ್ರಮೆ’ಯ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಗೆ ಅಡ್ಡಿ: ಅರೋಪ

Update: 2020-04-04 14:22 GMT

ಮಂಗಳೂರು, ಎ.4: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಗರದ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್‌ಐಎಫ್) ವತಿಯಿಂದ ಆಹಾರದ ಕಿಟ್ ವಿತರಿಸಲು ಅಡ್ಡಿಪಡಿಸಿದ ಘಟನೆ ಶುಕ್ರವಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಕರಣವು ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಾತುಕತೆಯ ಮೂಲಕ ಇತ್ಯರ್ಥಪಡಿಸಲಾಯಿತು ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ ಹಲವು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ‘ಎಚ್‌ಐಎಫ್’ ಸಂಘಟನೆಯು ಲಾಕ್‌ಡೌನ್‌ನಿಂದಾಗಿ ತತ್ತರಿಸಿದ ಹಲವು ಕುಟುಂಬಗಳಿಗೆ ಮಾನವೀಯತೆಯ ನೆಲೆಯಲ್ಲಿ ಸಹಾಯ ಮಾಡುತ್ತಾ ಬಂದಿದೆ. ಅದರಂತೆ ಶಾಸಕ ವೇದವ್ಯಾಸ ಕಾಮತ್‌ ಅವರ ಮನವಿಯ ಮೇರೆಗೆ ‘ಎಚ್‌ಐಎಫ್’ ಸಂಘಟನೆ ಜಾತಿ, ಮತ ಭೇದವಿಲ್ಲದೆ ಅರ್ಹ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆಯನ್ನು ಜಿಲ್ಲಾದ್ಯಂತ ವಿಸ್ತರಿಸಿತ್ತು.

ಶುಕ್ರವಾರ ‘ಎಚ್‌ಐಎಫ್’ ವತಿಯಿಂದ ನೀಡಲಾದ ಆಹಾರದ ಕಿಟ್ ಅನ್ನು ನೆಲ್ಯಾಡಿ ಸಮೀಪದ ಪಟ್ರಮೆ ಗ್ರಾಮದಲ್ಲಿ ವಿತರಿಸಲಾಗುತ್ತಿತ್ತು. ‘ಎಚ್‌ಐಎಫ್’ ಪರವಾಗಿ ನೆಲ್ಯಾಡಿಯ ಬದ್ರಿಯಾ ಜುಮಾ ಮಸ್ಜಿದ್‌ ಆಡಳಿತ ಕಮಿಟಿಯ ಸದಸ್ಯ ಅಬ್ದುರ್ರಹ್ಮಾನ್, ಟಿಪ್ಪು ಸುಲ್ತಾನ್ ಮತ್ತು ಸ್ಥಳೀಯರಾದ ಸಿದ್ದೀಕ್ ಎಂಬವರು ಆಹಾರದ ಕಿಟ್ ವಿತರಿಸುತ್ತಿದ್ದರು.

ಈ ಸಂದರ್ಭ ಪಟ್ರಮೆಯಲ್ಲಿ ಸಂಕಷ್ಟದಲ್ಲಿರುವ 6 ಹಿಂದೂ ಕುಟುಂಬಗಳಿಗೆ ಆಹಾರದ ಕಿಟ್‌ನ ಆವಶ್ಯಕತೆ ಇದೆ ಎಂಬ ಗ್ರಾಪಂ ಸದಸ್ಯ ಶ್ಯಾಮರಾಜ್ ಪಟ್ರಮೆಯ ವಿನಂತಿಯ ಮೇರೆಗೆ ಮತ್ತೋರ್ವ ಸದಸ್ಯ ಮುಸ್ತಫಾ ಮತ್ತು ಗ್ರಾಪಂ ಪಿಡಿಒ ಅವರ ಸಮ್ಮುಖ ಆಹಾರದ ಕಿಟ್ ವಿತರಣೆಯ ಸಂದರ್ಭ ಅಲ್ಲಿಗೆ ಧಾವಿಸಿ ಬಂದ ಕೆಲವು ಕಿಡಿಗೇಡಿಗಳು ಕಿಟ್ ವಿತರಣೆಗೆ ಅಡ್ಡಿಪಡಿಸಿದರು ಎನ್ನಲಾಗಿದೆ.

‘ಮುಸ್ಲಿಮರು ಕೊರೋನ ಹರಡುವವರು. ಅವರು ಕೊಡುವ ಕಿಟ್‌ನಲ್ಲಿ ವಿಷವಿದೆ. ಅದನ್ನು ಸ್ವೀಕರಿಸಬೇಡಿ’ ಎಂದು ರಾದ್ಧಾಂತ ಮಾಡಿದರಲ್ಲದೆ, ಕಿಟ್ ವಿತರಿಸುವಾಗ ಗ್ರಾಪಂನಿಂದ ಅನುಮತಿ ಪಡೆದಿಲ್ಲ ಮತ್ತು ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿಲ್ಲ ಎಂದೂ ಈ ಕಿಡಿಗೇಡಿಗಳು ಆಕ್ಷೇಪಿಸಿದರು ಎನ್ನಲಾಗಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಸ್ಥಳದಲ್ಲೇ ಇದ್ದ ‘ಪಿಡಿಒ’ ಕಿಟ್ ವಿತರಣೆಗೆ ಅಡ್ಡಿಪಡಿಸದಂತೆ ಸೂಚಿಸಿದರೂ ಕಿಡಿಗೇಡಿಗಳ ಅಡ್ಡಿ ಮುಂದುವರಿಯಿತು. ಕೊನೆಗೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನೂ ಕರೆದೊಯ್ದು ಮಾತುಕತೆ ನಡೆಸಿ ಪ್ರಕರಣ ಸುಖಾಂತ್ಯಗೊಳಿಸಿದರು.

ಲಾಕ್‌ಡೌನ್ ಆದ ತಕ್ಷಣ ನಾನು ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರದ ಕಿಟ್ ನೀಡುವ ಬಗ್ಗೆ ಗ್ರಾಪಂ ಅಧ್ಯಕ್ಷ, ಪಿಡಿಒ ಅವರ ಗಮನ ಸೆಳೆದಿದ್ದೆ. ಖುದ್ದು ಮನವಿಯನ್ನೂ ಮಾಡಿದ್ದೆ. ಮಾ.26ಕ್ಕೆ ಕೊರೋನ ಜಾಗೃತಿ ಕಾರ್ಯಪಡೆ ಮೀಟಿಂಗ್ ನಡೆಸಿದಾಗಲೂ ನಾನು ಈ ವಿಚಾರ ಹೇಳಿದ್ದೆ. ಈ ಮಧ್ಯೆ ಒಂದು ಮನೆಯಲ್ಲಿ ತೀವ್ರ ಸಂಕಷ್ಟವಿರುವ ಬಗ್ಗೆ ಅನುಮಾನಗೊಂಡು ಅಲ್ಲಿಗೆ ತೆರಳಿ ವಿಚಾರಿಸಿದೆ. ಅದನ್ನೂ ಅಧ್ಯಕ್ಷರ ಗಮನಕ್ಕೆ ತಂದೆ. ಆದರೆ, ಯಾವುದೇ ಸ್ಪಂದನೆ ಸಿಗದಿದ್ದಾಗ ಸ್ವತಃ ನಾನೇ ಅಕ್ಕಿ, ಸಾಮಗ್ರಿ ಖರೀದಿಸಿ ಅವರಿಗೆ ಕೊಟ್ಟೆ. ಈ ಮಧ್ಯೆ ಶುಕ್ರವಾರ ಮಂಗಳೂರಿನ ಸಂಸ್ಥೆಯೊಂದು ಆಹಾರದ ಕಿಟ್ ವಿತರಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಗ್ರಾಪಂ ಪಿಡಿಒ ಸಮ್ಮುಖ ಪಟ್ರಮೆಯ 6 ಕುಟುಂಬಗಳಿಗೆ ಕಿಟ್ ವಿತರಿಸಲು ಮನವಿ ಮಾಡಿಕೊಂಡೆ. ತಕ್ಷಣ ಅವರು ಸ್ಪಂದಿಸಿದರು. ಅಲ್ಲದೆ ನನ್ನ ಕಾರಲ್ಲೇ ಕಿಟ್ ವಿತರಿಸಲು ಮುಂದಾದೆವು. ಈ ವೇಳೆ ಕೆಲವು ಮಂದಿ ಯುವಕರು ಆಗಮಿಸಿ ಕಿಟ್ ವಿತರಿಸದಂತೆ ಅಡ್ಡಿಪಡಿಸಿದರು. ಮುಸ್ಲಿಮರು ಕೊರೋನ ವೈರಸ್ ಹರಡುವವರು. ಅವರ ಕಿಟ್ ಸ್ವೀಕರಿಸಬೇಡಿ ಎಂದು ಒತ್ತಡ ಹಾಕಿದರು. ಅದಕ್ಕೆ ನಾನೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರಲ್ಲಿ ಮತೀಯವಾದ ಬೇಡ. ರಾಜಕೀಯ ಬೇಡ. ನನ್ನ ವಿನಂತಿಯರ ಮೇರೆಗೆ ಅವರು ಕಿಟ್ ವಿತರಿಸುತ್ತಿದ್ದಾರೆ. ನೀವು ಯಾವ ಕಾರಣಕ್ಕೂ ಅಡ್ಡಿಪಡಿಸಬಾರದು ಎಂದೆ. ಕೊನೆಗೆ ಪೊಲೀಸರು ಬರಬೇಕಾಯಿತು. ಕಷ್ಟದಲ್ಲಿರುವಾಗ ಜಾತಿ, ಮತ ನೋಡಬಾರದು ಎಂಬ ಕನಿಷ್ಟ ಪ್ರಜ್ಞೆ ಇವರಿಗೆ ಇದ್ದಿದ್ದರೆ ಹೀಗೆಲ್ಲಾ ಮಾಡುತ್ತಿರಲಿಲ್ಲ. ಆಹಾರದ ಕಿಟ್ ಕೊಟ್ಟವರು ಮುಸ್ಲಿಮರೆಂಬ ಅಸಹನೆ ಅವರಲ್ಲಿತ್ತು. ಕಿಟ್ ಕೊಡಲು ಬಂದವರು ಮಾಸ್ಕ್ ಧರಿಸಿಲ್ಲ ಎಂದೂ ಕೆಲವರು ಆಕ್ಷೇಪಿಸಿದರು. ಆದರೆ, ಹಾಗೇ ಆಕ್ಷೇಪಿಸಿದವರೂ ಮಾಸ್ಕ್ ಧರಿಸಿಲ್ಲ ಎಂಬುದು ಗಮನಾರ್ಹ. ಆದಾಗ್ಯೂ ಸ್ಥಳೀಯ ವೆಬ್‌ಪೋರ್ಟಲ್‌ವೊಂದರಲ್ಲಿ ಈ ಬಗ್ಗೆ ಸುಳ್ಳು ಸುದ್ದಿ ಪ್ರಕಟವಾಗಿದೆ. ಇದು ಖಂಡನೀಯ. ವಸ್ತುಸ್ಥಿತಿ ಏನು ಎಂದು ಅರಿಯದೆ ಸುಳ್ಳು ಸುದ್ದಿ ಪ್ರಕಟಿಸಬಾರದಿತ್ತು. ಮಂಗಳೂರಿನ ಸಂಘಟನೆಯೊಂದರ ವತಿಯಿಂದ ಕಿಟ್ ವಿತರಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಸ್ವತಃ ನಾನೇ ಅವರನ್ನು ಸಂಪರ್ಕಿಸಿ ಕಿಟ್ ಸಿಗುವಂತೆ ಮಾಡಿದೆ. ನಾನು ಮನವಿ ಮಾಡಿದಾಗ ಅವರು ಜಾತಿ, ಧರ್ಮ ಕೇಳಲಿಲ್ಲ. ಮಾನವೀಯ ನೆಲೆಯಲ್ಲಿ ಮಾತ್ರ ಅವರು ಕೊಟ್ಟಿದ್ದು, ಅರ್ಹರನ್ನು ಗುರುತಿಸಿ ಕೊಡಿಸಿದ ತೃಪ್ತಿ ನನಗಿದೆ.

- ಶ್ಯಾಮರಾಜ್ ಪಟ್ರಮೆ
ಗ್ರಾಪಂ ಸದಸ್ಯ

ನಮ್ಮದು ಜನಪರ ಸಂಘಟನೆ. ನಾವು ಯಾವತ್ತೂ ಕೂಡ ಧರ್ಮ ನೋಡಿ ಯಾರಿಗೂ ನೆರವು ನೀಡಿಲ್ಲ. ಅನೇಕ ಜನಪರ ಕಾರ್ಯಕ್ರಮಗಳನ್ನು ನಾವು ಮಾನವೀಯ ನೆಲೆಯಲ್ಲೇ ಮಾಡಿದ್ದೇವೆ. ಈ ಹಿಂದೆ ಮಂಗಳೂರಿನಲ್ಲಿ ನೀರಿನ ಅಭಾವವಾದಾಗ, ದ.ಕ., ಕೊಡಗು ಜಿಲ್ಲೆಯಲ್ಲಿ ಪ್ರವಾಹ ಬಂದಾಗ, ಎಲ್ಲರ ಸಹಕಾರದಲ್ಲಿ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದಕ್ಕೆ ಸ್ಥಳೀಯ ಶಾಸಕರ, ಕಾರ್ಪೊರೇಟರ್‌ಗಳ, ಜಿಲ್ಲಾಡಳಿತದ ಸಹಕಾರವೂ ಸಿಕ್ಕಿದೆ. ಮೊನ್ನೆ ಶಾಸಕ ವೇದವ್ಯಾಸ ಕಾಮತ್‌ರ ಮನವಿಯ ಮೇರೆಗೆ ನಾವು ನಮ್ಮ ಆಹಾರ ಕಿಟ್ ವಿತರಣೆ ವ್ಯವಸ್ಥೆಯನ್ನು ಜಿಲ್ಲಾದ್ಯಂತ ಅರ್ಹ ಕುಟುಂಬಗಳಿಗೆ ಜಾತಿ, ಮತ ಭೇದವಿಲ್ಲದೆ ನೀಡುತ್ತಿದ್ದೇವೆ. ಮುಂದೆಯೂ ನೀಡಲಿದ್ದೇವೆ. ಈ ಬಾರಿ ಸುಮಾರು 4 ಸಾವಿರ ಕಿಟ್ ವಿತರಿಸುವ ಗುರಿ ಇದೆ. ಅದನ್ನು ಯಶಸ್ವಿಯಾಗಿ ಪೂರೈಸುವ ವಿಶ್ವಾಸವಿದೆ. ಇಂತಹ ವಿಷಯದಲ್ಲಿ ಕೆಲವರು ‘ಮತೀಯವಾದಿ’ಗಳಾಗುವುದು ಮತ್ತು ಮಾಧ್ಯಮವೊಂದು ವಸ್ತುಸ್ಥಿತಿ ಅರಿಯದೆ ಬೇಕಾಬಿಟ್ಟಿ ಸುದ್ದಿ ಪ್ರಕಟಿಸುತ್ತಿರುವುದು ವಿಷಾದನೀಯ.
- ರಿಝ್ವಾನ್, 
ಕೋವಿಡ್-19 ಫುಡ್‌ಕಿಟ್ ಉಸ್ತುವಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News