ಅನಗತ್ಯ ಸಂಚಾರ ಕಂಡುಬಂದರೆ ವಾಹನ ಸೀಝ್: ಡಿಸಿ ಜಗದೀಶ್ ಎಚ್ಚರಿಕೆ

Update: 2020-04-04 14:40 GMT

ಉಡುಪಿ, ಎ. 4: ಜಿಲ್ಲೆಯಾದ್ಯಂತ ಬೆಳಗ್ಗೆ 7ರಿಂದ 11 ಗಂಟೆಯವರಗೆ ಅವಶ್ಯಕ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇಂದು ಎಲ್ಲ ಕಡೆ ಗಳಲ್ಲಿ ಜನ ಹಾಗೂ ವಾಹನ ಸಂಚಾರ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಜನರು ಹೀಗೆ ಅನವಶ್ಯಕವಾಗಿ ಓಡಾಟ ಮಾಡಿದರೆ ಸೂಕ್ತ ಕ್ರಮ ಜರಗಿಸ ಲಾಗುವುದು ಮತ್ತು ಖಾಸಗಿ ವಾಹನ ಸಂಚಾರವನ್ನು ನಿಷೇಧ ಮಾಡಲಾಗು ವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂವರು ಸೋಂಕಿತರು ಕೂಡ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲು ದಾಖಲಾದ ಮಣಿಪಾಲದ ರೋಗಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಅವರ ಎರಡು ಪರೀಕ್ಷ ವರದಿ ಬರಲು ಬಾಕಿ ಇದೆ. ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದರು.

ಸದ್ಯ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕಕಣಗಳು ಬಂದಿಲ್ಲ. ವಿದೇಶ ದಿಂದ ಬಂದವರ 14 ದಿನಗಳ ಕ್ವಾರಂಟೈನ್ ಅವಧಿ ಬಹುತೇಕ ಮುಗಿದಿದ್ದು, 2000ಕ್ಕೂ ಅಧಿಕ ಮಂದಿ ಕ್ವಾರಂಟೈನ್ ಪೂರೈಸಿದ್ದಾರೆ. ನಾಳೆ ಬಹುತೇಕ ಎಲ್ಲರ 14 ದಿನಗಳ ಕ್ವಾರಂಟೈನ್ ಮುಗಿಯಲಿದೆ. ನಂತರವೂ ಕೆಲವು ದಿನಗಳ ಕಾಲ ಫಾಲೋಅಪ್ ಮಾಡಬೇಕಾಗುತ್ತದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ದಿನ ನಿತ್ಯ ಫೋನ್ ಮಾಡಿ ಫಾಲೋಅಪ್ ಮಾಡಲಾಗುವುದು ಎಂದು ಅವರು ತಿಳಿಸಿದರು.

‘ಸಮುದಾಯದಲ್ಲಿ ಹರಡುವ ಆತಂಕ ಇಲ್ಲ’

ಕೊರೋನಾ ವೈರಸ್ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆಯ ಆತಂಕ ಇಲ್ಲವಾಗಿದೆ. ಪ್ರಸ್ತುತ ಕೊರೋನ ವೈರಸ್ ಪರೀಕ್ಷೆಗಾಗಿ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ದಾಖಲಾಗುವವರ ಸಂಖ್ಯೆ ಈಗ ಗಣನೀಯವಾಗಿ ಕಡಿಮೆಯಾಗಿದೆ. ಹಿಂದೆ 20-25 ಜನ ದಾಖಲಾಗುತ್ತಿದ್ದರೆ, ಈಗ ಅದರ ಸಂಖ್ಯೆ 4-5ಕ್ಕೆ ಇಳಿದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News