ಭಟ್ಕಳ: ತುರ್ತು ಸೇವೆಗಾಗಿ ಹೋಗುವವರನ್ನು ಮುಟ್ಟಿ ಆತಂಕ ಸೃಷ್ಟಿಸಿದ ಕ್ವಾರೆಂಟೈನ್‍ ವ್ಯಕ್ತಿ

Update: 2020-04-04 16:46 GMT

ಭಟ್ಕಳ :  ಕೊರೋನ ವೈರಸ್ ಭೀತಿಯಿಂದ ಹೋಮ್ ಕ್ವಾರೆಂಟೈನ್‍ನಲ್ಲಿ ಇದ್ದ ವ್ಯಕ್ತಿಯೋರ್ವ ಕಾರಿನಲ್ಲಿ ಬಂದು ರಸ್ತೆಯ ಪಕ್ಕದಲ್ಲಿ ತುರ್ತು ಸೇವೆಗೆ ಹೋಗುವವರು, ಔಷಧ ಅಂಗಡಿಯ ಎದುರು ಕಾಯುತ್ತಿದ್ದವರನ್ನು ಅನಾವಶ್ಯಕವಾಗಿ ಮುಟ್ಟಿ ಆತಂಕ ಸೃಷ್ಟಿಸಿದ ಘಟನೆ ಇಂದು ಮಧ್ಯಾಹ್ನ ನಗರದಲ್ಲಿ ನಡೆದಿದೆ.

ವ್ಯಕ್ತಿಯನ್ನು ಶಂಮ್ಸ್ ಶಾಲೆಯ ಹತ್ತಿರದ ನಿವಾಸಿಯೆಂದು ಜನರು ಗುರುತಿಸಿದ್ದು, ಈತನ ಬಲಗೈಯ ಮೇಲೆ ಸೀಲ್ ಹಾಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಗತ್ಯದ ಔಷಧವನ್ನು ಕೊಂಡುಕೊಳ್ಳಲು ಬಂದಿದ್ದ ಕೆಲವರನ್ನು ಈ ವ್ಯಕ್ತಿ ಮುಟ್ಟಿ ಪರಾರಿಯಾದ ಎನ್ನಲಾಗಿದೆ. ಈ ರೀತಿಯ ಕೃತ್ಯದಿಂದ ಜನರು ಕಂಗಾಲಾಗಿದ್ದು ಅಲ್ಲಿದ್ದವರೆಲ್ಲಾ ತಕ್ಷಣ ಅಲ್ಲಿಂದ ಓಡಿ ಹೋಗಿದ್ದು ತುರ್ತು ಔಷಧಿ ಕೊಡಬೇಕಾದ ಅಂಗಡಿಯವರೂ ಕೂಡಾ ಬಾಗಿಲು ಹಾಕಿಕೊಂಡ ಪ್ರಸಂಗ ನಡೆಯಿತು. ಒಟ್ಟಾರೆ ಹೋಮ್ ಕ್ವಾರೆಂಟೈನ್‍ನಲ್ಲಿರುವ ವ್ಯಕ್ತಿ ಕೇವಲ ಆತಂಕ ಸೃಷ್ಟಿಸಲೆಂದೇ ಬಂದಿರುವುದು ಆತನ ಕೃತ್ಯದಿಂದ ಸಾಬೀತಾದಂತಾಗಿದೆ.  ಇದು ಉದ್ದೇಶ ಪೂರ್ವಕವಾಗಿ ಮಾಡಿದ ಕೃತ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News