ಕೊರೋನ ಸೋಂಕು : ತೊಕ್ಕೊಟ್ಟು ಜಂಕ್ಷನ್, ವಸತಿ ಸಂಕೀರ್ಣ ಸಂಪೂರ್ಣ ಕ್ವಾರೆಂಟೈನ್

Update: 2020-04-04 16:51 GMT

ಉಳ್ಳಾಲ, ಎ.4: ದೆಹಲಿಗೆ ತೆರಳಿದ್ದ ತೊಕ್ಕೊಟ್ಟು ನಿವಾಸಿಯಾಗಿರುವ 52ರ ಹರೆಯದ ವ್ಯಕ್ತಿಗೆ ಕೊರೋನ ಸೋಂಕು ದೃಢಗೊಂಡ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದಲೇ ಜಿಲ್ಲಾ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಈ ವ್ಯಕ್ತಿ ವಾಸವಿದ್ದ ವಸತಿ ಸಂಕೀರ್ಣ ಹಾಗೂ ಜಂಕ್ಷನ್‌ನ್ನು ಸಂಪೂರ್ಣ ಕ್ವಾರೆಂಟೈನ್‌ನಲ್ಲಿಡಲಾಗಿದೆ.

ವಸತಿ ಸಂಕೀರ್ಣದ ನಿವಾಸಿಗಳಲ್ಲಿ ಹೊರಬಾರದಂತೆ ಪೊಲೀಸರು ಕಟ್ಟೆಚ್ಚರ ನೀಡಿದ್ದಾರೆ.

ಫೆ.6ರಂದು ಮುಂಬೈಗೆ ತೆರಳಿದ್ದ ಈ ವ್ಯಕ್ತಿ ಬಳಿಕ ಅಲ್ಲಿಂದ ದಿಲ್ಲಿಗೆ ಪ್ರಯಾಣಿಸಿದ್ದರು. ದಿಲ್ಲಿಯಿಂದ ಮಾ.20ರಂದು ತೊಕ್ಕೊಟ್ಟಿಗೆ ಆಗಮಿಸಿದ್ದರು. ಲಾಕ್‌ಡೌನ್ ಘೋಷಣೆಯಾದ ಬಳಿಕ ಮಾ.31 ರಂದು ಮಾರ್ನಮಿಕಟ್ಟೆಯ ರೇಶನ್ ಅಂಗಡಿಗೆ ತೆರಳಿದ್ದರು. ದೆಹಲಿಗೆ ತೆರಳಿರುವ ಕುರಿತು ಎ.1ರಂದು ಪೊಲೀಸರು ದೃಢಪಡಿಸಿದ ಬಳಿಕ ಉಳ್ಳಾಲ ಪೊಲೀಸರು ಆರೋಗ್ಯ ಇಲಾಖೆಯ ಮೂಲಕ ಈ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಮುಂದಿನ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಎರಡು ದಿನ ಇರಿಸಿದ್ದರು. ಅವರ ಗಂಟಲ ದ್ರವ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ಇದೀಗ ವೆನ್ಲಾಕ್‌ಗೆ ಸ್ಥಳಾಂತರಿಸಲಾಗಿದೆ.

ವಸತಿ ಸಂಕೀರ್ಣ ಕ್ವಾರೆಂಟೈನ್: ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದ ಪೊಲೀಸ್ ತಂಡವು ತೊಕ್ಕೊಟ್ಟು ಜಂಕ್ಷನ್‌ನ ಮುಖ್ಯಭಾಗದಲ್ಲಿರುವ ವಸತಿ ಸಂಕೀರ್ಣದ ಕ್ವಾರೆಂಟೈನ್ ನಡೆಸುತ್ತಿದ್ದಾರೆ. ಅಲ್ಲದೆ ಪೊಲೀಸರು ಸೋಂಕು ದೃಢಪಡಿಸಿದ ವ್ಯಕ್ತಿಯ ಟ್ರಾವೆಲ್ ರೂಟನ್ನು ಪಡೆಯುತ್ತಿದ್ದು, ನೆರೆಮನೆಯವರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.
ತೊಕ್ಕೊಟ್ಟು ಜಂಕ್ಷನ್‌ನ ಸ್ಮಾರ್ಟ್ ಸಿಟಿ ಮತ್ತು ಅದರ ಸುತ್ತಲಿನ 100 ಮೀ ಅಂತರದಲ್ಲಿ ಎಲ್ಲಾ ರೀತಿಯ ವ್ಯಾಪಾರ, ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಶನಿವಾರದಿಂದ ಈ ವ್ಯಾಪ್ತಿಯೊಳಗಿನ ಯಾವುದೇ ದಿನಸಿ ಸಹಿತ ಇನ್ನಿತರ ಅಂಗಡಿಗಳು ವ್ಯಾಪಾರ ಮಾಡದಂತೆ ಇಲಾಖೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News