ಮುಸ್ಲಿಂ ಎಂಬ ಕಾರಣಕ್ಕೆ ಹೆರಿಗೆಗೆ ಅವಕಾಶ ನೀಡದ ವೈದ್ಯ : ಆರೋಪ

Update: 2020-04-05 07:22 GMT
(Photo: Twitter)

ಜೈಪುರ : ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆ ವೈದ್ಯನೊಬ್ಬ ನಿರಾಕರಿಸಿದ ಎನ್ನಲಾದ ಘಟನೆ ರಾಜಸ್ಥಾನದ ಭರತಪುರ ಜಿಲ್ಲೆಯಲ್ಲಿ ನಡೆದಿದೆ. ಪರಿಣಾಮ ಆಸ್ಪತ್ರೆಯಿಂದ ಹೊರಟ ಮಹಿಳೆ ಆ್ಯಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶು ಮೃತಪಟ್ಟಿದೆ.

ನನ್ನ ಗರ್ಭಿಣಿ ಪತ್ನಿಯ ಹೆರಿಗೆಗಾಗಿ ಹೋದಾಗ ಸಿಕ್ರಿಯಿಂದ ಜಿಲ್ಲಾ ಕೇಂದ್ರದ ಜನನ ಆಸ್ಪತ್ರೆಗೆ ಹೋಗಲು ಸೂಚಿಸಲಾಯಿತು. ಆದರೆ ನೀವು ಮುಸ್ಲಿಮರಾಗಿರುವ ಕಾರಣ ಜೈಪುರಕ್ಕೆ ಹೋಗಬೇಕು ಎಂದು ವೈದ್ಯರು ಹೇಳಿದರು. ಆ್ಯಂಬುಲೆನ್ಸ್‌ನಲ್ಲಿ ಆಕೆಯನ್ನು ಕರೆದೊಯ್ಯುತ್ತಿದ್ದಾಗ ಆಕೆಗೆ ಹೆರಿಗೆಯಾಯಿತು. ಆದರೆ ಮಗು ಅಸು ನೀಗಿತು. ನವಜಾತ ಶಿಶುವಿನ ಸಾವಿಗೆ ಆಸ್ಪತ್ರೆಯ ಆಡಳಿತಾಧಿಕಾರಿಯೇ ಹೊಣೆ ಎಂದು ಪತಿ ಇರ್ಫಾನ್ ಖಾನ್ ಆಪಾದಿಸಿದ್ದಾರೆ.

ಮಹಿಳೆ ಹೆರಿಗೆಗಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಆಕೆಯನ್ನು ಜೈಪುರಕ್ಕೆ ತೆರಳುವಂತೆ ಸೂಚಿಸಲಾಗಿದೆ. ಈ ಹಂತದಲ್ಲಿ ಏನು ಲೋಪವಾಗಿದೆ ಎಂದು ತನಿಖೆ ನಡೆಸಲಾಗುತ್ತದೆ ಎಂದು ಭರತಪುರ ಜನನ ಆಸ್ಪತ್ರೆಯ ಪ್ರಾಚಾರ್ಯ ಡಾ. ರೂಪೇಂದ್ರ ಝಾ ಸ್ಪಷ್ಟನೆ ನೀಡಿದ್ದಾರೆ.

ರಾಜಸ್ಥಾನದ ಪ್ರವಾಸೋದ್ಯಮ ಖಾತೆ ಸಚಿವ ವಿಶ್ವೇಂದ್ರ ಸಿಂಗ್, ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾದ ಓಬಿಎಸ್ ಮತ್ತು ಪ್ರಸೂತಿಶಾಸ್ತ್ರ ವಿಭಾಗದ ಮುಖ್ಯಸ್ಥ ವೈದ್ಯರ ಬಗ್ಗೆ ಹರಿಹಾಯ್ದಿದ್ದಾರೆ. ಮನ್ವೀತ್ ವಾಲಿಯಾ ಎಂಬ ವೈದ್ಯ ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಭರತಪುರದ ಶಾಸಕರು ರಾಜ್ಯದ ಆರೋಗ್ಯ ಸಚಿವರೂ ಆಗಿದ್ದು, ಆಸ್ಪತ್ರೆಯ ಸ್ಥಿತಿ ನಿಜಕ್ಕೂ ನಾಚಿಕೆಗೇಡು ಎಂದು ಅವರು ಹೇಳಿದ್ದಾರೆ.

ಆರೋಪಿ ವೈದ್ಯನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭವರಸೆ ನೀಡಿರುವ ಅವರು, ಜಾತ್ಯತೀತ ರಾಜ್ಯದಲ್ಲಿ ಇದಕ್ಕಿಂತ ನಾಚಿಕೆಗೇಡು ಬೇರೇನೂ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News