ಕೋವಿಡ್-19: ಭಾರತ ಎರಡನೇ ನಿರ್ಣಾಯಕ ವಾರ ಪ್ರವೇಶಿಸಿದೆ: ಚಿದಂಬರಂ

Update: 2020-04-06 05:31 GMT

  ಹೊಸದಿಲ್ಲಿ,ಎ.6: ಕೋವಿಡ್-19 ಸೋಂಕು ಹರಡುವುದನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಭಾರತ ಇಂದು ನಿರ್ಣಾಯಕ ಎರಡು ವಾರಗಳ ಅವಧಿಯನ್ನು ಪ್ರವೇಶಿಸಿದೆ ಎಂದು ಕಾಂಗ್ರಸ್ ಮುಖಂಡ ಪಿ.ಚಿದಂಬರಂ ಇಂದು ಬೆಳಗ್ಗೆ ಹೇಳಿದ್ದಾರೆ. ರವಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಪಕ್ಷ ನಾಯಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದನ್ನು ತಮ್ಮ ಟ್ವಿಟರ್‌ನಲ್ಲಿ ಉಲ್ಲೇಖಿಸಿದರು.

ಸೋಮವಾರ ಸರಣಿ ಟ್ವೀಟ್ ಮಾಡಿದ 74 ಹರೆಯದ ಮಾಜಿ ಕೇಂದ್ರ ಸಚಿವ ಚಿದಂಬರಂ ಭಾರತದಲ್ಲಿ 4,000ಕ್ಕೂ ಅಧಿಕ ಜನರನ್ನು ಬಾಧಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕೇಂದ್ರ ಸರಕಾರ ತೆಗೆದುಕೊಂಡ ಕ್ರಮದ ಕುರಿತು ಬರೆದಿದ್ದಾರೆ. ಭಾರತ ಇಂದು ನಿರ್ಣಾಯಕ ಎರಡು ವಾರಗಳ ಅವಧಿಯನ್ನು ಪ್ರವೇಶಿಸಿದೆ. ಪ್ರಧಾನಿ ಮೋದಿ ವಿಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದು ಉತ್ತಮ ಹೆಜ್ಜೆ. ಕೋವಿಡ್-19ರ ಹರಡುವುದರ ವಿರುದ್ಧ ಹೋರಾಡಲು ಸರಕಾರದ ಪ್ರಯತ್ನಕ್ಕೆ ಪ್ರತಿಯೊಬ್ಬರು ಬೆಂಬಲದ ಭರವಸೆ ನೀಡುವುದರಲ್ಲಿ ಸಂಶಯವಿಲ್ಲ ಎಂದು ಟ್ವೀಟ್ ಮಾಡಿದರು.

ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ಸರಕಾರದ ನ್ಯೂನತೆ ಎತ್ತಿ ತೋರಿಸಿದ್ದರೆ ಅದು  ರಚನಾತ್ಮಕ ಟೀಕೆ ಹಾಗೂ ಸಹಕಾರದ ಮನೋಭಾವದಲ್ಲಿತ್ತು. ಎಪ್ರಿಲ್ 2 ರಂದು ನಡೆದ ಸಿಡಬ್ಲುಸಿ ನಿರ್ಣಯದಲ್ಲಿ ಇಂತಹ ಅಂಶವನ್ನು ಎತ್ತಲಾಗಿದೆ ಎಂದರು.

ವಿಶ್ವದಾದ್ಯಂತ ವೇಗವಾಗಿ ಹರಡುತ್ತಿರುವ ವೈರಸ್‌ನ ವಿರುದ್ಧ  ಆಕ್ರಮಣಕಾರಿ ಪರೀಕ್ಷೆಯ ಅಗತ್ಯವಿದೆ. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು, ವೈದ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಒಗ್ಗಟ್ಟಾಗಿ ಕ್ಷಿಪ್ರಗತಿಯಲ್ಲಿ ವ್ಯಾಪಕ ಪರೀಕ್ಷೆ ನಡೆಸುವ ಅಗತ್ಯವಿದೆ. ಇಂದು ಸರಕಾರ ಆ ನಿಟ್ಟಿನಲ್ಲಿ ಪ್ರಯತ್ನಪಡಲು ಆರಂಭಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News