×
Ad

ತಬ್ಲೀಗಿ ಸದಸ್ಯರನ್ನು ಕರೆದೊಯ್ಯುತ್ತಿದ್ದ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಎಂಬ 'ಝೀ ನ್ಯೂಸ್' ವರದಿ ಸುಳ್ಳು

Update: 2020-04-06 16:57 IST

#"ನೀವು ಸುಳ್ಳು ಹಾಗೂ ದಾರಿತಪ್ಪಿಸುವ ಸುದ್ದಿ ಹರಡುತ್ತಿದ್ದೀರಿ"

ಹೊಸದಿಲ್ಲಿ: ತಬ್ಲೀಗಿ ಜಮಾಅತ್ ಸದಸ್ಯರ ಪೈಕಿ ಕೊರೋನ ಸೋಂಕು ದೃಢಪಟ್ಟವರನ್ನು ಕರೆದುಕೊಂಡು ಹೋಗುತ್ತಿದ್ದ ವೈದ್ಯಕೀಯ ಸಿಬ್ಬಂದಿ ಮೇಲೆ ಉತ್ತರ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದೆ ಎಂಬ ಮಾಧ್ಯಮ ವರದಿಯನ್ನು ಫಿರೋಝಾಬಾದ್ ಪೊಲೀಸರು ನಿರಾಕರಿಸಿದ್ದಾರೆ.

ಎಪ್ರಿಲ್ 6ರಂದು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸುದ್ದಿಯಲ್ಲಿ 'ಝೀ ನ್ಯೂಸ್' ಈ ಕುರಿತಂತೆ ವರದಿ ಮಾಡಿತ್ತಲ್ಲದೆ ಸುದ್ದಿ ಕುರಿತ ವಿವರಗಳನ್ನು ಫೇಸ್ ಬುಕ್‍ ನಲ್ಲೂ ಶೇರ್ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ ಫಿರೋಝಾಬಾದ್ ಪೊಲೀಸರು, "ನೀವು ಸುಳ್ಳು ಹಾಗೂ ದಾರಿತಪ್ಪಿಸುವಂತಹ ಸುದ್ದಿಯನ್ನು ಹರಡುತ್ತಿದ್ದೀರಿ, ಫಿರೋಝಾಬಾದ್ ಜಿಲ್ಲೆಯಲ್ಲಿ ಯಾವುದೇ ವೈದ್ಯಕೀಯ ತಂಡ ಅಥವಾ ಆ್ಯಂಬುಲೆನ್ಸ್ ಗೆ ಕಲ್ಲು ತೂರಾಟ ನಡೆದಿಲ್ಲ'' ಎಂದು ಬರೆದಿದ್ದಾರಲ್ಲದೆ "ನಿಮ್ಮ ಟ್ವೀಟ್ ಕೂಡಲೇ ಡಿಲೀಟ್ ಮಾಡಿ'' ಎಂಬ ಸೂಚನೆಯನ್ನೂ ಝೀ ನ್ಯೂಸ್‍ ಗೆ ನೀಡಿದ್ದಾರೆ.

'ಝೀ ನ್ಯೂಸ್‍'ನ ಆ ನಿರ್ದಿಷ್ಟ ಟ್ವೀಟ್ ಇದೀಗ ಡಿಲೀಟ್ ಆಗಿದೆ ಹಾಗೂ ಸಂಬಂಧಿತ ವರದಿಗೆ ತಿದ್ದುಪಡಿ ಮಾಡಲಾಗಿದೆ.  ಫಿರೋಝಾಬಾದ್‍ ನಲ್ಲಿ ಏಳು ಜಮಾಅತ್ ಸದಸ್ಯರ ಪೈಕಿ ಐದು ಮಂದಿಯ ಕೊರೋನ ವೈದ್ಯಕೀಯ ವರದಿ ಪಾಸಿಟಿವ್ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

"ಈ ಎಲ್ಲಾ ಜಮಾಅತಿಗಳು ಬಿಹಾರದವರಾಗಿದ್ದು ಅವರು ಫಿರೋಝಾಬಾದ್‍ ನ ರಸೂಲ್ಪುರ್ ಪ್ರದೇಶದ ದುರ್ಗೇಶ್ ನಗರ್ ಎಂಬಲ್ಲಿನ ಸಲ್ಮಾನ್ ಫರ್ಸಿ ಮಸೀದಿಯಲ್ಲಿ ಅಡಗಿಕೊಂಡಿದ್ದರು. ಇವರ ಹೊರತಾಗಿ ರಾಮಘರ್ ಪ್ರದೇಶದ  ಮಸೀದಿಯಲ್ಲಿದ್ದ ಗುಜರಾತ್ ರಾಜ್ಯದ 11 ಜಮಾತಿಗಳನ್ನೂ ಪರೀಕ್ಷೆಗೊಳಪಡಿಸಲಾಗಿದೆ. ಇವರೆಲ್ಲಾ ಕೊರೋನದಿಂದ ಬಚಾವಾಗಿದ್ದಾರೆ, ಅವರ ವರದಿಗಳು ನೆಗೆಟಿವ್ ಆಗಿವೆ'' ಎಂದು ಝೀ ನ್ಯೂಸ್ ಪರಿಷ್ಕರಿಸಿದ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News