ಕೊರೋನ ಸೋಂಕಿತರು ಸಂಪೂರ್ಣ ಗುಣಮುಖರಾಗುತ್ತಾರೆಯೇ ?

Update: 2020-04-06 14:08 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ. 6: ಕೊರೋನ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಪ್ರಶ್ನೆ, ಅನುಮಾನ, ಆತಂಕಗಳಿದ್ದು, ಈ ಬಗ್ಗೆ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಆರೋಗ್ಯ ಇಲಾಖೆ ನೀಡಿರುವ ಉತ್ತರ ಇಲ್ಲಿದೆ.

ಕೊರೋನ ವೈರಸ್ ಎಂದರೇನು ?

ಕೊರೋನ ವೈರಸ್‌ಗಳು ಮಾನವರು ಮತ್ತು ಪ್ರಾಣಿಗಳಲ್ಲಿ ಅನಾರೋಗ್ಯ ಉಂಟು ಮಾಡಬಹುದಾದ ವೈರಾಣು. ಹಲವಾರು ಕೊರೋನ ವೈರಸ್‌ಗಳು ಮಾನವರಲ್ಲಿ ನೆಗಡಿಯಿಂದ ಹಿಡಿದು ತೀವ್ರತೆರನಾದ ಉಸಿರಾಟ ಸಂಬಂಧಿ ರೋಗಗಳನ್ನು ಉಂಟು ಮಾಡುತ್ತವೆ.

ಕೋವಿಡ್ - 19 ಎಂದರೇನು?

ಕೋವಿಡ್- 19 ಇತ್ತೀಚೆಗಷ್ಟೆ ಪತ್ತೆ ಹಚ್ಚಲಾದ ಕೊರೋನ ವೈರಸ್‌ನಿಂದ ಉಂಟಾಗುವ ಒಂದು ಸಾಂಕ್ರಾಮಿಕ ರೋಗ. ಡಿಸೆಂಬರ್ 2019ರಲ್ಲಿ ಚೈನಾದ ವುಹಾನ್‌ನಲ್ಲಿ ಈ ಹೊಸ ವೈರಾಣು ಮೊದಲ ಬಾರಿಗೆ ಮಾನವರಲ್ಲಿ ಕಾಣಿಸಿಕೊಂಡಿತು.

ಗುಣ ಲಕ್ಷಗಳೇನು ?

ಜ್ವರ, ಆಯಾಸ, ಒಣ ಕೆಮ್ಮು ಅಥವಾ ಕಫದಿಂದ ಕೂಡಿದ ಕೆಮ್ಮು, ಕಟ್ಟಿದ ಅಥವಾ ಸೋರುವ ಮೂಗು, ಗಂಟಲು ನೋವು ಅಥವಾ ಕೆರೆತ, ಬೇಧಿ.

ಕೋವಿಡ್- 19 ಸೋಂಕು ಹೊಂದಿದ ವ್ಯಕ್ತಿಗಳೆಲ್ಲರಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಯೇ ?

ಸೋಂಕು ತಗುಲಿದ 14 ದಿನಗಳ ಒಳಗೆ ಮೇಲೆ ಹೇಳಿದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿಯೂ ಸೋಂಕು ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಈ ಸಮಯದ ಅವಧಿಯನ್ನು ಕೊರೋನ ಇನ್‌ಕ್ಯುಬೇಶನ್ ಅವಧಿ ಎನ್ನಲಾಗುತ್ತದೆ. ಕೆಲವು ವ್ಯಕ್ತಿಗಳು ಸೋಂಕಿತರಾದರೂ ಕೂಡಾ ಅವರು ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಅನಾರೋಗ್ಯದಿಂದ ಬಳಲುವುದಿಲ್ಲ. ಈ ಕಾರಣ ಕ್ಕಾಗಿಯೇ ಒಬ್ಬರಿಂದೊಬ್ಬರು ಸೋಂಕು ತಗಲದಂತೆ ಅಂತರ ಮತ್ತು ಸುಚಿತ್ವವನ್ನು ಕಾಪಾಡಿಕೊಳ್ಳಬೇಕು.

ಕೋವಿಡ್- 19 ಸೋಂಕಿತರು ಸಂಪೂರ್ಣ ಗುಣಮುಖರಾಗುತ್ತಾರೆಯೇ ?

ಬಹುತೇಕ ಜನರು ಅಂದಾಜು ಶೇ. 80ರಷ್ಟು ಮಂದಿ ಯಾವುದೇ ವಿಶೇಷ ಚಿಕಿತ್ಸೆ ಇಲ್ಲದೆ ಗುಣಮುಖರಾಗುತ್ತಾರೆ. ಕೋವಿಡ್ -19ರಿಂದ ಬಾಧಿತರಾದ ಅಂದಾಜು ಶೇ. 15ರಿಂದ 18 ಜನರು ತೀವ್ರತರ ಅಸ್ವಸ್ಥರಾಗಬಹುದು ಮತ್ತು ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆಯ ಅಗತ್ಯ ಬೀಳಬಹುದು. ಶೇ. 2ರಿಂದ ಶೇ. 5ರಷ್ಟು ಜನರು ಮರಣ ಹೊಂದುವ ಸಾಧ್ಯತೆ ಇರುತ್ತದೆ. ವಯಸ್ಸಾದವರು ಮತ್ತು ಈಗಾಗಲೇ ಯಾವುದಾದರೂ ವೈದ್ಯಕೀಯ ತೊಂದರೆಗಳಾದ ಹೆಚ್ಚಿನ ರಕ್ತದೊತ್ತಡ, ಹೃದಯ ಸಮಸ್ಯೆಗಳು ಅಥವಾ ಮಧುಮೇಹ ಮುಂತಾದವುಗಳನ್ನು ಹೊಂದಿದವರು ತೀವ್ರತೆರನಾದ ಅನಾರೋಗ್ಯವನ್ನು ಅನುಭವಿಸುವ ಸಾಧ್ಯತೆ ಇದೆ. ಜ್ವರ, ಕೆಮ್ಮು ಮತ್ತು ಉಸಿರಾಟ ತೊಂದರೆ ಅನುಭವಿಸುವವರು ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ.

ಕೋವಿಡ್ -19 ಹೇಗೆ ಹರಡುತ್ತದೆ ?

ಸೋಂಕು ಹೊಂದಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಉಸಿರಾಡುವಾಗ ಮೂಗು ಅಥವಾ ಬಾಯಿಯ ಮೂಲಕ ಹೊರಬರುವ ಚಿಕ್ಕ ಚಿಕ್ಕ ಹನಿಗಳ ಮೂಲಕ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಹನಿಗಳು ಇನ್ನೊಬ್ಬರ ಮುಖದ ಮೇಲೆ ಬಿದ್ದಾಗ ಕಣ್ಣು, ಮೂಗು ಅಥವಾ ಬಾಯಿಯ ಮೇಲ್ಪದರಗಳ ಮೂಲಕ ಹರಡಬಹುದು. ಈ ಚಿಕ್ಕ ಚಿಕ್ಕ ಹನಿಗಳನ್ನು ಇತರರು ಉಸಿರಿನ ಮೂಲಕ ಒಳಪಡೆದರೂ ಸಹಿತ ಸೋಂಕಿತರಾಗುತ್ತಾರೆ. ಈ ಹನಿಗಳು ಕೆಮ್ಮು ಅಥವಾ ಸೀನಿದ ವ್ಯಕ್ತಿಯ ಸಮುತ್ತಲೂ ಇರುವ ವಸ್ತುಗಳು ಹಾಗೂ ಮೆಲ್ಮೈಗಳ ಮೇಲೆ ಬೀಳುತ್ತವೆ. ಇತರರು ಅವುಗಳನ್ನು ಮುಟ್ಟಿ ನಂತರ ಅವರ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿದಾಗ ಅವರೂ ಸಹಿತ ಸೋಂಕಿತರಾಗುತ್ತಾರೆ. ಈ ಕಾರಣಕ್ಕಾಗಿಯೇ ಸೋಂಕಿತ ವ್ಯಕ್ತಿಯಿಂದ ಕನಿಷ್ಠ 1 ಮೀಟರ್ ದೂರು ಇರುವುದು ಮತ್ತು ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯ.

ಈ ವೈರಸ್‌ನ ಚಿಕಿತ್ಸೆಯಲ್ಲಿ ಆ್ಯಂಟಿಬಯೋಟಿಕ್‌ಗಳ ಪಾತ್ರವೇನು ?

ಆ್ಯಂಟಿ ಬಯೋಟಿಕ್‌ಗಳು ವೈರಸ್‌ಗಳ ವಿರುದ್ಧ ಕಾರ್ಯ ನಿರ್ವಹಿಸುವುದಿಲ್ಲ. ಅವು ಬ್ಯಾಕ್ಟೀರಿಯಾಗಳ ಮೇಲೆ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಆದ್ದರಿಂದ ಆ್ಯಂಟಿಬಯೋಟಿಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಇವುಗಳನ್ನು ವೈದ್ಯರು ಸೂಚಿಸಿದರೆ ಮಾತ್ರ ಬಳಸಬೇಕು.

ಸೋಂಕು ಗುಣಪಡಿಸಲು ಯಾವುದಾದರೂ ಔಷಧಿ ಅಥವಾ ಚಿಕಿತ್ಸಾ ಕ್ರಮಗಳಿವೆಯೇ?

ಯಾವುದೇ ಔಷಧಿ, ಸಾಂಪ್ರದಾಯಿಕ ಅಥವಾ ಮನೆ ಔಷಧಿಗಳು ಕೋವಿಡ್ 19ನ್ನು ತಡೆಯುವ ಅಥವಾ ಗುಣ ಪಡಿಸುತ್ತವೆ ಎಂಬುದಕ್ಕೆ ಯಾವುದೇ ಸಾಕ್ಷಗಳಿಲ್ಲ.

ಸೋಂಕಿಗೆ ಲಸಿಗೆ ಲಭ್ಯವೇ ?

ಇದುವರೆಗೆ ಯಾವುದೇ ಲಸಿಕೆ ಅಥವಾ ಔಷಧಿಗಳಿಲ್ಲ.

ನಾನು ನನ್ನನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕೇ ?
 

ನಿಮಗೆ ಕೆಮ್ಮು ಅಥವಾ ನೆಗಡಿ ಅಥವಾ ಇನ್ಯಾವುದೇ ಸೋಂಕಿನ ಲಕ್ಷಣಗಳು ಇದ್ದಲ್ಲಿ ಅಥವಾ ಕೋವಿಡ್- 19 ಹೊಂದಿರುವ/ ಶಂಕಿತ ವ್ಯಕ್ತಿಗಳನ್ನು ನೋಡಿಕೊಳ್ಳುತ್ತಿದ್ದಲ್ಲಿ ಮಾತ್ರ ಮಾಸ್ಕ್ ಧರಿಸಬೇಕು. ನೀವು ಕಾಯಿಲೆಯಿಂದ ಬಳಲದೇ ಇದ್ದಲ್ಲಿ ಅಥವಾ ರೋಗ ಪೀಡಿತರನ್ನು ನೋಡಿಕೊಳ್ಳದೇ ಇದ್ದಲ್ಲಿ, ನೀವು ಇಂದು ಮಾಸ್ಕ್ ಧರಿಸುತ್ತಿದ್ದರೆ ನೀವು ಅದನ್ನು ಅಪವ್ಯಯ ಮಾಡುತ್ತಿದ್ದೀರಿ. ಜಾಗತಿಕವಾಗಿ ಮಾಸ್ಕ್‌ಗಳ ಕೊರತೆ ಎದುರಾಗಿದ್ದು ನಾವು ಮಾಸ್ಕ್ ನ್ನು ಜಾಣ್ಮೆಯಿಂದ ಬಳಸಬೇಕು.

ಮಾಂಸಾಹಾರ ಸೇವನೆಯಿಂದ ಸೋಂಕು ಹರಡುವುದೇ ?

ಇಲ್ಲ, ಆದರೆ ಹಸಿ ಮಾಂಸ, ಹಾಲು ಅಥವಾ ಮಾಂಸಾಹಾರಗಳನ್ನು ಸೇವಿಸುವಾಗ ಶುಚಿತ್ವ ಕಾಪಾಡಿಕೊಂಡು ಸರಿಯಾಗಿ ಬೇಯಿಸಿ/ ಕುದಿಸಿ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News