ಕೊರೋನ ವಿರುದ್ಧ ಹೋರಾಟ: 2 ವರ್ಷಗಳ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅಮಾನತು

Update: 2020-04-06 15:20 GMT

ಹೊಸದಿಲ್ಲಿ, ಎ.6: ಮುಂದಿನ ಒಂದು ವರ್ಷದ ಅವಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದ ಸಚಿವರು ಮತ್ತು ಸಂಸತ್ತಿನ ಎಲ್ಲ ಸದಸ್ಯರು ಶೇ.30ರಷ್ಟು ಕಡಿಮೆ ವೇತನಗಳನ್ನು ಪಡೆಯಲಿದ್ದಾರೆ. ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ತತ್ತರಿಸಿರುವ ದೇಶದ ಆರ್ಥಿಕತೆ ಚೇತರಿಸಿಕೊಳ್ಳಲು ಬಹುದೂರ ಸಾಗಬೇಕಾಗಿದೆ ಎನ್ನುವುದನ್ನು ಸರಕಾರದ ಈ ಹೆಜ್ಜೆಯು ಬೆಟ್ಟು ಮಾಡಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಎಲ್ಲ ರಾಜ್ಯಗಳ ರಾಜ್ಯಪಾಲರೂ ತಮ್ಮ ವೇತನಗಳಲ್ಲಿ ಶೇ.30ರಷ್ಟು ಕಡಿತಕ್ಕೆ ಸ್ವಯಂಇಚ್ಛೆಯಿಂದ ನಿರ್ಧರಿಸಿದ್ದಾರೆ. ಸೋಮವಾರ ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಒಂದು ವರ್ಷದ ಅವಧಿಗೆ ಸಂಸದರ ವೇತನಗಳು, ಭತ್ಯೆಗಳು ಮತ್ತು ಪಿಂಚಣಿಗಳನ್ನು ಶೇ.30ರಷ್ಟು ತಗ್ಗಿಸುವ ಅಧ್ಯಾದೇಶಕ್ಕೆ ಸಭೆಯು ಒಪ್ಪಿಗೆಯನ್ನು ನೀಡಿದೆ. ಈ ಕಡಿತಗಳಿಂದ ಲಭ್ಯವಾಗುವ ಹಣವನ್ನು ಕೊರೋನ ವೈರಸ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ವರ್ಷದ ಎಪ್ರಿಲ್ 1ರಿಂದ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ಶೇ.30ರಷ್ಟು ಕಡಿತಗೊಳಿಸಿ ‘ಸಂಸತ್ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ಕಾಯ್ದೆ, 1954’ಕ್ಕೆ ತಿದ್ದುಪಡಿ ತರುವ ಅಧ್ಯಾದೇಶಕ್ಕೆ ಸಂಪುಟವು ಒಪ್ಪಿಗೆ ನೀಡಿದೆ. ಈ ಹಣವು ಭಾರತದ ಸಂಚಿತ ನಿಧಿಗೆ ಜಮೆಯಾಗಲಿದೆ ಎಂದರು.

 2020-21 ಮತ್ತು 2021-22ನೇ ಸಾಲುಗಳಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿ ಸುವ ನಿರ್ಧಾರಕ್ಕೂ ಸಂಪುಟವು ಒಪ್ಪಿಗೆಯನ್ನು ನೀಡಿದೆ. 7,900 ಕೋ.ರೂ.ಗಳ ಈ ಮೊತ್ತವನ್ನು ದೇಶದಲ್ಲಿ ಆರೋಗ್ಯ ಸೇವೆಗಳನ್ನು ಮತ್ತು ಕೊರೋನ ವೈರಸ್ ಪಿಡುಗಿನ ಪ್ರತಿಕೂಲ ಪರಿಣಾಮಗಳನ್ನು ನಿಭಾಯಿಸಲು ಬಳಸಿಕೊಳ್ಳಲಾಗುವುದು ಎಂದು ಜಾವಡೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News