ಸಮುದಾಯ ಸೋಂಕು ಹರಡುವಿಕೆ ತಡೆಗೆ ಹೆಚ್ಚೆಚ್ಚು ಜನರ ತಪಾಸಣೆಯೇ ಏಕೈಕ ಮಾರ್ಗ

Update: 2020-04-06 16:54 GMT

ಹೊಸದಿಲ್ಲಿ,ಎ.6: ಕೊರೋನ ವೈರಸ್‌ನ ಸಮುದಾಯ ಹರಡುವಿಕೆಯನ್ನು ತಡೆಯಲು ಹೆಚ್ಚೆಚ್ಚು ಜನರನ್ನು ತಪಾಸಣೆಗೊಳಪಡಿಸುವುದು ಹೆಚ್ಚು ಪರಿಣಾಮಕಾರಿಯಾದ ಮಾರ್ಗವಾಗುತ್ತದೆ ಎನ್ನುತ್ತಾರೆ ಬ್ರೂಕಿಂಗ್ಸ್ ಇಂಡಿಯಾದ ಸಂಶೋಧನಾ ನಿರ್ದೇಶಕಿ ಹಾಗೂ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆ ಶಮಿಕಾ ರವಿ.

 ‘ಔಟ್‌ ಲುಕ್’ ಮ್ಯಾಗಝಿನ್‌ಗೆ ನೀಡಿರುವ ಸಂದರ್ಶನದಲ್ಲಿ ಕೊರೋನ ವೈರಸ್ ಪಿಡುಗು,ಸಮುದಾಯ ಪ್ರಸರಣ ಮತ್ತು 21 ದಿನಗಳ ದೇಶವ್ಯಾಪಿ ಲಾಕ್‌ಡೌನ್ ಬಗ್ಗೆ ಮಾತನಾಡಿರುವ ಶಮಿಕಾ, ನಾವಿನ್ನೂ ಕೊರೋನ ವೈರಸ್ ಬೆಳವಣಿಗೆಯ ಹಂತದಲ್ಲಿದ್ದೇವೆ. ಮಾ.23ರವರೆಗೆ ಪ್ರತಿ ಮೂರು ದಿನಗಳಿಗೆ ಪ್ರಕರಣಗಳು ಇಮ್ಮಡಿಯಾಗುತ್ತಿದ್ದರೆ ಅದರ ಬಳಿಕ ಐದು ದಿನಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಕರಣಗಳು ಹೆಚ್ಚುವ ಗತಿ ಈಗ ಸ್ವಲ್ಪ ಕಡಿಮೆಯಾಗಿದೆ, ನಿಜ. ಆದರೆ ಈಗಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುವುದನ್ನು ನಾವು ಗಮನಿಸಬೇಕು. ಸರಕಾರವು ಕೈಗೊಂಡ ದೇಶವ್ಯಾಪಿ ಲಾಕ್‌ಡೌನ್ ಮತ್ತು ಇತರ ಹಲವಾರು ಕ್ರಮಗಳು ಏರಿಕೆ ದರ ಇಳಿಯಲು ಕಾರಣವಾಗಿರಬಹುದು. ಆದರೆ ಬೆಳವಣಿಗೆಯ ದರವನ್ನು ಖಚಿತಪಡಿಸಿಕೊಳ್ಳಲು ಇನ್ನೂ ಏಳು ದಿನಗಳ ಕಾಲ ನಾವು ಕಾಯಬೇಕಾಗುತ್ತದೆ ಎಂದಿದ್ದಾರೆ.

  ಯುರೋಪ್, ಬ್ರಿಟನ್ ಮತ್ತು ಅಮೆರಿಕದಂತಹ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ತೀರ ಕಡಿಮೆಯಿದೆ. ಆ ರಾಷ್ಟ್ರಗಳು ನಿಜಕ್ಕೂ ನಿರ್ಬಂಧಗಳನ್ನು ಹೇರಿರಲಿಲ್ಲ ಅಥವಾ ಪ್ರಮುಖ ಬದಲಾವಣೆಗಳನ್ನು ತಂದಿರಲಿಲ್ಲ. ಆರಂಭದ ಹಂತದಲ್ಲಿ ಅವು ಕಾದು ನೋಡುವಲ್ಲಿಯೇ ಸಮಯ ವ್ಯರ್ಥಗೊಳಿಸಿದ್ದವು. ಆದರೆ ಭಾರತದಲ್ಲಿ ತಪಾಸಣೆಯ ಪ್ರಶ್ನೆ ಉದ್ಭವವಾಗುತ್ತದೆ. ಈಗ ನಾವು ಕೆಲವರನ್ನಷ್ಟೇ ಗುರಿಯಾಗಿಸಿಕೊಂಡು ಕೊರೋನ ವೈರಸ್ ತಪಾಸಣೆಯನ್ನು ನಡೆಸುತ್ತಿದ್ದೇವೆ. ಆರಂಭದ ಹಂತದಲ್ಲಿ ಇದು ಒಳ್ಳೆಯ ಪರಿಕಲ್ಪನೆ. ಭಾರತವು ಆರಂಭದಿಂದಲೇ ಪ್ರಮುಖ ಪ್ರಯತ್ನಗಳನ್ನು ಮಾಡಿದ್ದು ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಆದರೆ ಜನರು ಕ್ವಾರಂಟೈನ್‌ನ್ನು ಉಲ್ಲಂಘಿಸಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಸಮುದಾಯ ಸೋಂಕು ಹರಡುವಿಕೆಯನ್ನು ತಡೆಯಲು ನಾವು ಇನ್ನಷ್ಟು ಹೆಚ್ಚೆಚ್ಚು ಜನರನ್ನು ಯಾದ್ರಚ್ಛಿಕವಾಗಿ ತಪಾಸಣೆಗೆ ಒಳಪಡಿಸಬೆಕು. ಸೋಂಕು ಸಂಪೂರ್ಣವಾಗಿ ಹರಡಿದ ಬಳಿಕ ಇಂತಹ ತಪಾಸಣೆಗೆ ಯಾವುದೇ ಅರ್ಥವಿಲ್ಲ,ಏಕೆಂದರೆ ಪಿಡುಗನ್ನು ನಿರ್ವಹಿಸಲು ನಮ್ಮ ಬಳಿ ಅಗತ್ಯ ಆರೋಗ್ಯ ಮೂಲಸೌಕರ್ಯ ಗಳಿಲ್ಲ. ಹೀಗಾಗಿ ಈಗಲೇ ತಪಾಸಣೆಗಳನ್ನು ಹೆಚ್ಚಿಸುವುದು ಮಿತವ್ಯಯಕರ ಕ್ರಮವಾಗುತ್ತದೆ ಎಂದು ಶಮಿಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News