ಪುತ್ತೂರಿನಲ್ಲಿ ಮಧ್ಯಾಹ್ನದವರೆಗೆ ತೆರೆದಿದ್ದ ಬೇಕರಿಗಳು

Update: 2020-04-07 06:57 GMT

ಪುತ್ತೂರು, ಎ.7: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 13 ದಿನಗಳಿಂದ ಬಂದ್ ಆಗಿದ್ದ ಬೇಕರಿಗಳು ಮಂಗಳವಾರ ಮದ್ಯಾಹ್ನದ ತನಕ ತೆರೆದುಕೊಂಡಿವೆ. ಆದರೆ ಬೇಕರಿಗೆ ಆಗಮಿಸುವ ಗ್ರಾಹಕರು ಅಲ್ಲಿ ಯಾವುದೇ ಪಾನೀಯ ಕುಡಿಯಲು ಅಥವಾ ಇತರ ಆಹಾರ ಪದಾರ್ಥಗಳನ್ನು ತಿನ್ನಲು ಅವಕಾಶವಿರಲಿಲ್ಲ. ಖರೀದಿ ನಡೆಸಿ ಮನೆಗೆ ಕೊಂಡೊಯ್ಯಲು ಮಾತ್ರ ಅವಕಾಶಗಳನ್ನು ಕಲ್ಪಿಸಲಾಗಿತ್ತು. ಎಲ್ಲ ಬೇಕರಿ ಮುಂಭಾಗದಲ್ಲಿಯೂ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. 

ಪುತ್ತೂರು ನಗರದಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಮಂಗಳವಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ. ಅನಗತ್ಯವೆಂದು ಕಂಡುಬಂದ ಯಾವುದೇ ವಾಹನಗಳನ್ನೂ ನಗರ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ನಗರದ ಬೊಳುವಾರು, ದರ್ಬೆ ವೃತ್ತ ಹಾಗೂ ಸುಳ್ಯದಿಂದ ನಗರ ಪ್ರವೇಶಿಸುವ ದರ್ಬೆ ಬೈಪಾಸ್ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಟ್ ಅಳವಡಿಸಿ ಬಿಗು ಬಂದೋಬಸ್ತ್ ಮಾಡಿದ್ದಾರೆ.

ಗ್ರಾಮೀಣ ಭಾಗದಿಂದ ದಿನಸಿ ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮಧ್ಯಾಹ್ನದ ತನಕ ಅವಕಾಶ ನೀಡಲಾಗಿದ್ದರೂ, ಅಗನತ್ಯ ಸಂಚಾರಕ್ಕೆ ನಿಯಂತ್ರ ಹೇರಿದ್ದಾರೆ.

ನಗರದಲ್ಲಿ ಮೆಡಿಕಲ್, ತರಕಾರಿ ಹಣ್ಣುಹಂಪಲುಗಳ ಅಂಗಡಿಗಳಲ್ಲಿ ಜನರು ಕಂಡುಬರುತ್ತಿದ್ದರು. ಆನ್ ಲೈನ್ ಪಾಸುಗಳನ್ನು ವಾಹನಗಳಿಗೆ ಅಂಟಿಸಿಕೊಂಡು ಬರುವ ಹಾಗೂ ಹಳೆಯ ಮೆಡಿಕಲ್ ಚೀಟಿಗಳನ್ನು ಹಿಡಿದುಕೊಂಡು ಬರುವ ಜನತೆ ಪೊಲೀಸರ ತಾಳ್ಮೆ ಕೆಡಿಸುತ್ತಿದ್ದಾರೆ.

ನಗರ ಸಂಪರ್ಕ ರಸ್ತೆಯಾದ ಬೊಳುವಾರು, ದರ್ಬೆ ವೃತ್ತ, ಪರ್ಲಡ್ಕ ಬೈಪಾಸ್ ಹಾಗೂ ದರ್ಬೆಯ ಬೈಪಾಸ್ ರಸ್ತೆ ಬಳಿ ಬ್ಯಾರಿಕೇಟ್ ಅಳವಡಿಸಲಾಗಿದ್ದು, ಅನಗತ್ಯವಾಗಿ ಆಗಮಿಸುವವರನ್ನು ಇಲ್ಲಿಂದಲೇ ವಾಪಸ್ ಕಳುಹಿಸುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ತೀರಾ ಅತ್ಯಗತ್ಯ ಎಂದು ಕಂಡುಬಂದರೆ ಮಾತ್ರ ಅಂತವರಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಖಾಸಗಿ ವಾಹನಗಳ ಓಡಾಟವನ್ನು ಸಂಪೂರ್ಣ ನಿಯಂತ್ರಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News