ಕೊರೋನ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ಮಾದರಿಯಾದ ನಗರವಿದು...

Update: 2020-04-07 10:42 GMT

ಜೈಪುರ್: ರಾಜಸ್ಥಾನದ ಭಿಲ್ವಾರ ಎಂಬಲ್ಲಿ ಮಾರ್ಚ್ 19ರಂದು 27 ಕೊರೋನ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದ ನಂತರ ಕೊರೋನ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಅಲ್ಲಿ ಕೈಗೊಳ್ಳಲಾಗಿರುವ ಕಠಿಣ ಕ್ರಮಗಳನ್ನು ಕೇಂದ್ರ ಸರಕಾರ ಕೂಡ  ಮಾನ್ಯ ಮಾಡಿದೆ. ಸದ್ಯದಲ್ಲಿಯೇ ಇದೇ ಮಾದರಿಯನ್ನು ಇತರೆಡೆಗಳಲ್ಲಿ ಅನುಸರಿಸುವ ಸಾಧ್ಯತೆಯೂ ಇದೆ.

ರವಿವಾರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆಗೆ ನಡೆಸಿದ ವೀಡಿಯೋ ಕಾನ್ಫರೆನ್ಸಿನಲ್ಲೂ ಭಿಲ್ವಾರ ಮಾದರಿಯನ್ನು ಉಲ್ಲೇಖಿಸಿದ್ದರು.

ಜವುಳಿ ನಗರಿಯಾಗಿರುವ ಭಿಲ್ವಾರದಲ್ಲಿನ ಕೋವಿಡ್-19 ನಿಯಂತ್ರಣಾ ಕಾರ್ಯದ ಮುಂದಾಳತ್ವ ವಹಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ರೋಹಿತ್ ಕುಮಾರ್ ಸಿಂಗ್  ಹಾಗೂ ಜಿಲ್ಲಾ ಕಲೆಕ್ಟರ್ ರಾಜೇಂದ್ರ ಭಟ್ಟ್  ಅವರು ತಿಳಿಸಿದಂತೆ ನಗರದಲ್ಲಿ  ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಕೊರೋನ ಪಾಸಿಟಿವ್ ಆದ 14 ದಿನಗಳಲ್ಲಿ 28 ಲಕ್ಷ ಜನರ ತಪಾಸಣೆಯನ್ನು ಆರೋಗ್ಯ ಇಲಾಖೆಯ ತಂಡಗಳು ಕೈಗೊಂಡಿದ್ದವು. ಇವರ ಪೈಕಿ 2,816 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರೆ, 27 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಇಲ್ಲಿಯ ತನಕ ಎರಡು ಕೊರೋನ ಸಾವುಗಳು ದಾಖಲಾಗಿವೆ.

ವೈದ್ಯರೊಬ್ಬರು ಮೊದಲ ಕೊರೋನ ರೋಗಿಯಾಗಿದ್ದರಿಂದ ಅತ್ಯಂತ ಮುಂಜಾಗರೂಕತೆಯಿಂದ ಹೆಜ್ಜೆಯಿರಿಸಿದ್ದ ಆಡಳಿತ ಮೊದಲ ಹಂತದಲ್ಲಿ ನಗರದಲ್ಲಿ ಸೆಕ್ಷನ್ 144 ಅನ್ವಯ ಕರ್ಫ್ಯೂ ಹೇರಿತ್ತು. ಅಗತ್ಯ ಸೇವೆಗಳು ಆಗ ಲಭ್ಯವಿದ್ದವು. ನಂತರ ಸಂಪೂರ್ಣ ಲಾಕ್‍ಡೌನ್ ಘೋಷಿಸಿ  ನಗರದ ಗಡಿಯನ್ನು ಹಾಗೂ ಜಿಲ್ಲೆಯ ಗಡಿಯನ್ನು ಮುಚ್ಚಲಾಯಿತು. ರೈಲು, ರಸ್ತೆ ಸಂಚಾರ ಬಂದ್ ಮಾಡಲಾಯಿತು. ಕೋವಿಡ್-19 ಕ್ಲಸ್ಟರ್  ಮ್ಯಾಪಿಂಗ್ ನಡೆಸಿ ಆರು ಪ್ರದೇಶಗಳನ್ನು ಗುರುತಿಸಿ  ಶಂಕಿತ ಪ್ರಕರಣಗಳಲ್ಲಿ ಸತತ ತಪಾಸಣೆಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು. ಈ ತಂಡಗಳಿಗೆ ವಿಶೇಷ  ತರಬೇತಿಯನ್ನೂ ನೀಡಲಾಗಿತ್ತು,. ನಗರದಲ್ಲಿ 24 ಗಂಟೆ ಕಾರ್ಯಾಚರಿಸುವ ವಾರ್ ರೂಂ, ವಿಶೇಷ ಸ್ಕ್ರೀನಿಂಗ್ ಹಾಗೂ ತಪಾಸಣಾ ಕೇಂದ್ರವನ್ನೂ ಆರಂಭಿಸಲಾಗಿತ್ತು. ಸುಮಾರು 2000 ತಂಡಗಳು 28 ಲಕ್ಷ ನಿವಾಸಿಗಳ ತಪಾಸಣೆ ನಡೆಸಿತ್ತು.

ಇಲ್ಲಿ ಕಳೆದ ಶನಿವಾರ ದಾಖಲಾದ ಒಂದು ಕೊರೋನ ಪ್ರಕರಣ ಹೊರತುಪಡಿಸಿ ಕಳೆದೆರಡು ದಿನಗಳಲ್ಲಿ ಯಾವುದೇ ಹೊಸ ಪ್ರಕರಣ  ದಾಖಲಾಗಿಲ್ಲ.  ಕೊರೋನ ಹರಡುವಿಕೆಯನ್ನು ತಡೆಗಟ್ಟುವ ಯತ್ನವನ್ನು ಅಧಿಕಾರಿಗಳು ಮುಂದುವರಿಸುತ್ತಲೇ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News