ಎಪ್ರಿಲ್ 14ರ ನಂತರ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ: ಕೇಂದ್ರ ಸರಕಾರದ ಮೂಲಗಳು

Update: 2020-04-07 14:10 GMT

 ಹೊಸದಿಲ್ಲಿ,ಎ.7: ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ವಿಧಿಸಲಾಗಿರುವ 21 ದಿನಗಳ ಲಾಕ್‌ಡೌನ್ ಅನ್ನು ಎ.14ರ ನಂತರವೂ ಮುಂದುವರಿಸುವಂತೆ ಹಲವಾರು ರಾಜ್ಯ ಸರಕಾರಗಳು ಮತ್ತು ತಜ್ಞರು ಕೋರಿಕೊಂಡಿದ್ದು,ಕೇಂದ್ರ ಸರಕಾರವು ಈ ಕೋರಿಕೆಯನ್ನು ಪರಿಶೀಲಿಸುತ್ತಿದೆ ಎಂದು ಉನ್ನತ ಸರಕಾರಿ ಮೂಲಗಳು ಮಂಗಳವಾರ ತಿಳಿಸಿವೆ.

 ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಡೆದ ಸಂಪುಟ ಸಭೆಯಲ್ಲಿ ‘ಶ್ರೇಣೀಕೃತ ಯೋಜನೆ ’ಯೊಂದನ್ನು ಸಿದ್ಧಪಡಿಸುವಂತೆ ಸಚಿವರಿಗೆ ಸೂಚಿಸಿದ್ದು,ಇದು ಲಾಕ್‌ಡೌನ್ ಅನ್ನು ಹಂತಹಂತವಾಗಿ ಹಿಂದೆಗೆದುಕೊಳ್ಳುವಿಕೆಯನ್ನು ಸೂಚಿಸುತ್ತಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು,ಸೂಕ್ತ ಸಮಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ನಿರ್ಧಾರವೊಂದನ್ನು ಕೈಗೊಳ್ಳಲಾಗುವುದು. ಅಧಿಕಾರಿಗಳ ಅಧಿಕಾರಯುತ ತಂಡವೊಂದು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ ಎಂದು ತಿಳಿಸಿದ್ದರು.

 ಲಾಕ್‌ಡೌನ್ ವಿಸ್ತರಣೆಗೆ ಒತ್ತು ನೀಡಿರುವವರ ಪೈಕಿ ಓರ್ವರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು, ‘ಲಾಕ್‌ಡೌನ್ ಇನ್ನಷ್ಟು ಸಮಯ ಮುಂದುವರಿಯಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನಾವು ಜೀವಗಳನ್ನು ರಕ್ಷಿಸುವ ಅಗತ್ಯವಿದೆ, ನಂತರ ಆರ್ಥಿಕತೆಯನ್ನು ರಕ್ಷಿಸಬಹುದು’ಎಂದು ಹೇಳಿದ್ದಾರೆ. ಕೊರೋನ ವೈರಸ್ ಪ್ರಕರಣಗಳ ಪಟ್ಟಿಯಲ್ಲಿ ತೆಲಂಗಾಣ ನಾಲ್ಕನೇ ಸ್ಥಾನದಲ್ಲಿದೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಿರ್ಬಂಧಗಳನ್ನು ಹಂತಹಂತವಾಗಿ ಹಿಂದೆಗೆದುಕೊಳ್ಳಲು ಒಲವು ವ್ಯಕ್ತಪಡಿಸಿದ್ದಾರೆ. ‘ನಾವು ಲಾಕ್‌ಡೌನ್ ಅನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತಿಲ್ಲ, ಅದನ್ನು ಹಂತ ಹಂತವಾಗಿ ಮಾಡಬೇಕು ’ ಎಂದು ಅವರು ಹೇಳಿದ್ದಾರೆ.

ದೇಶವ್ಯಾಪಿ ಲಾಕ್‌ಡೌನ್ ಅನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಹಿಂದೆಗೆದುಕೊಳ್ಳಲು ಕೇಂದ್ರ ಸರಕಾರದ ಯಾವುದೇ ಪ್ರಸ್ತಾವಕ್ಕೆ ತನ್ನ ಬೆಂಬಲವಿದೆ ಎಂದು ಬಿಜೆಪಿ ನೇತೃತ್ವದ ಅಸ್ಸಾಂ ಸರಕಾರವು ಹೇಳಿದೆ.

ಕಟ್ಟೆಚ್ಚರವನ್ನು ವಹಿಸಲಾಗಿರುವ ಮತ್ತು ರೆಡ್ ಝೋನ್‌ಗಳೆಂದು ಘೋಷಿಸಲಾಗಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಈ ತಿಂಗಳ ಅಂತ್ಯದವರೆಗೆ,ಕನಿಷ್ಠ ಎರಡು ವಾರಗಳ ಕಾಲ ಮುಂದುವರಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೆ. ಅವರು,ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

‘ರಾಜ್ಯವು ಕೊರೋನ ವೈರಸ್ ಮುಕ್ತವಾಗಿದೆ ಎನ್ನುವುದು ಖಚಿತಗೊಂಡ ಬಳಿಕವೇ ನಾವು ಲಾಕ್‌ಡೌನ್ ಹಿಂದೆಗೆದು ಕೊಳ್ಳುತ್ತೇವೆ. ಒಬ್ಬನೇ ಒಬ್ಬ ಕೊರೋನ ವೈರಸ್ ಪಾಸಿಟಿವ್ ವ್ಯಕ್ತಿಯಿದ್ದರೂ ಲಾಕ್‌ಡೌನ್ ತೆರವು ಕಷ್ಟವಾಗಲಿದೆ,ಹೀಗಾಗಿ ಅದು ಇನ್ನಷ್ಟು ಸಮಯವನ್ನು ತೆಗೆದುಕೊಳ್ಳಬಹುದು ’ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ ಅವಸ್ಥಿ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ವೀಡಿಯೊ ಲಿಂಕ್ ಮೂಲಕ ನಡೆದಿದ್ದ ಸೋಮವಾರದ ಸಂಪುಟ ಸಭೆಯಲ್ಲಿ ಮೋದಿ ಅವರು,ಕೊರೋನ ವೈರಸ್ ಪರಿಣಾಮಗಳನ್ನು ಶಮನಗೊಳಿಸಲು ಸರಕಾರವು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಹಾಗೂ ಹಾಟ್‌ಸ್ಪಾಟ್‌ಗಳಿಲ್ಲದಿರುವ ಇಲಾಖೆಗಳನ್ನು ನಿಧಾನವಾಗಿ ಪುನರಾರಂಭಿಸಲು ಸಚಿವಾಲಯಗಳು ಶ್ರೇಣೀಕೃತ ಯೋಜನೆಯನ್ನು ಸಿದ್ದಗೊಳಿಸಬೇಕು ಎಂದು ಹೇಳಿದ್ದರು.

ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 4,400ಕ್ಕೇ ರಿದ್ದು,114 ಜೀವಗಳು ಈ ಪಿಡುಗಿಗೆ ಬಲಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News