ಲಾಕ್‌ಡೌನ್ ಬಳಿಕ ಪ.ಬಂಗಾಳದ ಆರ್ಥಿಕತೆಯ ಪುನಃಶ್ಚೇತನಕ್ಕಾಗಿ ಅಭಿಜಿತ್ ಬ್ಯಾನರ್ಜಿ ನೇತೃತ್ವದ ಸಮಿತಿ ರಚನೆ
ಕೋಲ್ಕತಾ,ಎ.7: ಲಾಕ್‌ಡೌನ್ ಅವಧಿ ಮುಗಿದ ನಂತರ ಎದುರಾಗಲಿರುವ ವಿಪತ್ತಿನಿಂದ ರಾಜ್ಯದ ಆರ್ಥಿಕತೆಯನ್ನು ರಕ್ಷಿಸಿ, ಪುನಃಶ್ಚೇತನಗೊಳಿಸಲು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಜಾಗತಿಕ ಸಲಹಾ ಮಂಡಳಿಯ ಸ್ಥಾಪನೆಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಕಟಿಸಿದ್ದಾರೆ.
‘ವಿಪತ್ತೊಂದು ಅಥವಾ ಸಾಂಕ್ರಾಮಿಕ ಪಿಡುಗು ಎದುರಾದಾಗ ಯೋಜನೆಯೊಂದನ್ನು ಸಿದ್ಧವಾಗಿರಿಸಬೇಕು. ಆರ್ಥಿಕ ಅಭಿವೃದ್ಧಿಗೆ ಭವಿಷ್ಯದ ಮಾರ್ಗವನ್ನು ಸೂಚಿಸಲು ನಾವು ಜಾಗತಿಕ ಸಲಹಾ ಮಂಡಳಿಯೊಂದನ್ನು ರಚಿಸಿದ್ದೇವೆ ಮತ್ತು ಇದು ಬಂಗಾಳದಲ್ಲಿ ಕೊರೋನ ವೈರಸ್ ಪ್ರತಿಕ್ರಿಯಾ ನೀತಿಯನ್ನು ರೂಪಿಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಸ್ವರೂಪ ಸರ್ಕಾರ್ ಅವರೂ ಮಂಡಳಿಯಲ್ಲಿರುತ್ತಾರೆ. ವಿಶ್ವಮಟ್ಟದಲ್ಲಿ ಹೆಸರಾಗಿರುವ ಒಂದಿಬ್ಬರು ತಜ್ಞರನ್ನೂ ನಾವು ಈ ತಂಡದಲ್ಲಿ ಸೇರ್ಪಡೆಗೊಳಿಸುತ್ತೇವೆ ’ಎಂದು ಮಮತಾ ಹೇಳಿದರು.
ಲಾಕಡೌನ್ ಆರಂಭಗೊಂಡ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ಅಭಿಜಿತ್ ಬ್ಯಾನರ್ಜಿ,ರಾಜ್ಯಕ್ಕೆ ನೆರವಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ರಾಜ್ಯ ಸರಕಾರದಲ್ಲಿನ ಮೂಲಗಳು ತಿಳಿಸಿವೆ.