​ಕೊರೋನ ಎಫೆಕ್ಟ್ : ವಿಮಾನಯಾನ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ನಷ್ಟ ಭೀತಿ

Update: 2020-04-08 03:56 GMT

ಹೊಸದಿಲ್ಲಿ : ವಿಶ್ವಾದ್ಯಂತ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ವಿಮಾನಯಾನ ಕ್ಷೇತ್ರವೊಂದರಲ್ಲೇ ಎರಡೂವರೆ ಕೋಟಿ ಉದ್ಯೋಗ ನಷ್ಟವಾಗುವ ಭೀತಿ ಇದೆ ಎಂದು ಅಂತರ್ ರಾಷ್ಟ್ರೀಯ ವಾಯುಸಾರಿಗೆ ಸಂಘ (ಐಎಟಿಎ) ಅಂದಾಜಿಸಿದೆ.

ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯ ಉದ್ಯೋಗ ನಷ್ಟವಾಗಲಿದೆ. ಏಷ್ಯಾ ಫೆಸಿಫಿಕ್ ಪ್ರದೇಶದಲ್ಲೇ 11.2 ದಶಲಕ್ಷ ಉದ್ಯೋಗಕ್ಕೆ ಅಪಾಯ ಕಾದಿದೆ ಎಂದು ಸ್ಪಷ್ಟಪಡಿಸಿದೆ.

ಭಾರತದ ವಿಮಾನಯಾನ ಕ್ಷೇತ್ರಕ್ಕೆ ಈ ಸೋಂಕಿನಿಂದಾಗಿ 8838 ದಶಲಕ್ಷ ಡಾಲರ್ ನಷ್ಟವಾಗುವ ಸಾಧ್ಯತೆ ಇದ್ದು, ಸರ್ಕಾರ ನೆರವು ನೀಡದಿದ್ದಲ್ಲಿ ದೇಶದಲ್ಲಿ ವಿಮಾನಯಾನ ಕ್ಷೇತ್ರದಲ್ಲಿರುವ 22 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ ಎಂದು ಐಎಟಿಎ ಅಂದಾಜಿಸಿದೆ.

ಜಾಗತಿಕವಾಗಿ ಸುಮಾರು ಆರೂವರೆ ಕೋಟಿ ಮಂದಿ ವಿಮಾನಯಾನ ಉದ್ಯಮವನ್ನು ಅವಲಂಬಿಸಿದ್ದು, ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯಗಳು ತೀವ್ರ ಸಂಕಷ್ಟಕ್ಕೀಡಾಗಲಿವೆ. 

ಕೋವಿಡ್-19ನಿಂದಾಗಿ ವಿಮಾನಯಾನ ಕ್ಷೇತ್ರದ ಮೇಲೆ ಆಗುವ ವಿನಾಶಕಾರಿ ಪರಿಣಾಮವನ್ನು ವಿವರಿಸಲು ಪದಗಳೇ ಸಾಕಾಗುತ್ತಿಲ್ಲ. ಸುಮಾರು 25 ದಶಲಕ್ಷ ಮಂದಿ ವಿಮಾನಯಾನ ಕ್ಷೇತ್ರದಲ್ಲಿ ಆಗುವ ಉದ್ಯೋಗ ನಷ್ಟದ ಆರ್ಥಿಕ ನೋವನ್ನು ಅನುಭವಿಸಬೇಕಾಗುತ್ತದೆ. ವಿಮಾನಯಾನ ಕ್ಷೇತ್ರದ ಕಾರ್ಯಾಚರಣೆ ಪುನರಾರಂಭವಾಗಬೇಕಾದರೆ ಸೋಂಕು ಸಂಪೂರ್ಣ ನಿವಾರಣೆಯಾಗಬೇಕು. ಈ ಹಿನ್ನೆಲೆಯಲ್ಲಿ ವಿಮಾನಯಾನ ಕ್ಷೇತ್ರಕ್ಕೆ ಜೀವಬೆಂಬಲ ವ್ಯವಸ್ಥೆ ಅಗತ್ಯವಿದೆ ಎಂದು ಐಎಟಿಎ ಮಹಾನಿರ್ದೇಶಕ ಮತ್ತು ಸಿಇಒ ಅಲೆಕ್ಸಾಂಡರ್ ಡೆ ಜುನೈಕ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News