ತಬ್ಲೀಗಿ ಜಮಾಅತ್ ಬಗ್ಗೆ ಸುಳ್ಳು ಸುದ್ದಿ ಹರಡಿದ ಎ ಎನ್ ಐ ಸುದ್ದಿ ಸಂಸ್ಥೆಗೆ ಡಿಸಿಪಿಯಿಂದ ಮಂಗಳಾರತಿ

Update: 2020-04-08 06:30 GMT

ಹೊಸದಿಲ್ಲಿ : ತಬ್ಲೀಗಿ ಜಮಾಅತ್ ಜತೆ ಸಂಪರ್ಕ ಹೊಂದಿದವರೆಂದು ಸೆಕ್ಟರ್ 5 ಹರೋಲಾ ಎಂಬಲ್ಲಿನ  ಜನರ ಒಂದು ಗುಂಪನ್ನು ನೊಯ್ಡಾದ ಪೊಲೀಸರು ಕ್ವಾರೆಂಟೈನ್‍ ನಲ್ಲಿರಿಸಿದ್ದಾರೆ ಎಂಬ ನಕಲಿ ಸುದ್ದಿಯನ್ನು ಮಂಗಳವಾರ ರಾತ್ರಿ  ಟ್ವಿಟ್ಟರ್ ನಲ್ಲಿ ಪ್ರಕಟಿಸಿದ ಸುದ್ದಿ ಸಂಸ್ಥೆ ಎಎನ್‍ಐ ಸಾಮಾಜಿಕ ಜಾಲತಾಣಿಗರ ಆಕ್ರೋಶಕ್ಕೆ ಗುರಿಯಾಗಿದೆ. ಎಎನ್‍ಐ ಪ್ರಕಟಿಸಿದ ಈ ಸುದ್ದಿಯ ಬೆನ್ನಿಗೇ ಸ್ಪಷ್ಟೀಕರಣ ನೀಡಿದ ನೊಯ್ಡಾ ಡಿಸಿಪಿ, ಈ ನಿರ್ದಿಷ್ಟ ಎಎನ್‍ಐ ಸುದ್ದಿ ನಕಲಿ, ತಬ್ಲೀಗಿ ಜಮಾಅತ್ ಸಂಘಟನೆಯ ಉಲ್ಲೇಖವೇ ಇಲ್ಲ ಎಂದು ಟ್ವೀಟ್ ಮಾಡಿದ್ದರು.

ಮಂಗಳವಾರ ರಾತ್ರಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಎಎನ್‍ಐ ಹೀಗೆಂದು ಬರೆದಿತ್ತು- ''ತಬ್ಲೀಗಿ ಜಮಾಅತ್ ಸದಸ್ಯರ ಜತೆ ಸಂಪರ್ಕಕ್ಕೆ ಬಂದಿದ್ದ ನೊಯ್ಡಾದ ಸೆಕ್ಟರ್ 5 ಹರೋಲ ಇಲ್ಲಿಯವರನ್ನು ಕ್ವಾರೆಂಟೈನ್ ನಲ್ಲಿರಿಸಲಾಗಿದೆ : ಸಂಕಲ್ಪ್ ಶರ್ಮ, ಗೌತಮ್ ಬುದ್ಧ್ ನಗರ್ (ಡಿಸಿಪಿ) #ಕೋವಿಡ್19.''

ಇದರ ಬೆನ್ನಿಗೇ ಎಎನ್‍ಐ ಮುಖ್ಯಸ್ಥೆ ಸ್ಮಿತಾ ಪ್ರಕಾಶ್ ''ಬೀ ಸೇಫ್ ನೊಯ್ಡಾ...'' ಎಂದು ಟ್ವೀಟ್ ಮಾಡಿದ್ದರು.

ನಂತರ ಟ್ವೀಟ್ ಮಾಡಿದ ನೊಯ್ಡಾದ ಡಿಸಿಪಿ  ''ಕೊರೋನ ಪಾಸಿಟಿವ್ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ್ದ ಉ.ಪ್ರ. ಜನರನ್ನು ಕ್ವಾರೆಂಟೈನ್ ನಲ್ಲಿರಿಸಲಾಗಿದೆ. ತಬ್ಲೀಗಿ ಜಮಾಅತ್ ಉಲ್ಲೇಖವಿಲ್ಲ. ನೀವು ತಪ್ಪಾಗಿ ವರದಿ ಮಾಡಿದ್ದೀರಿ ಹಾಗು ನಕಲಿ ಸುದ್ದಿ ಹರಡುತ್ತಿದ್ದೀರಿ,'' ಎಂದು ಬರೆದಿದ್ದರು. ಈ ನಿರ್ದಿಷ್ಟ ಟ್ವೀಟನ್ನು ನೊಯ್ಡಾ ಪೊಲೀಸ್ ಆಯುಕ್ತರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಕೂಡ ರಿಟ್ವೀಟ್ ಮಾಡಿತ್ತು.

ಇದರ ಬೆನ್ನಿಗೇ ಹಲವರು ಎಎನ್‍ಐ ವಿರುದ್ಧ ಆಕ್ರೋಶಭರಿತ ಟ್ವೀಟ್ ಮಾಡಲಾರಂಭಿಸಿದಂತೆಯೇ ಆ ನಿರ್ದಿಷ್ಟ ಟ್ವೀಟ್ ಅನ್ನು ಎಎನ್‍ಐ ಡಿಲೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News