ಜಗತ್ತಿಗೇ ಪಾಠ ಕಲಿಸುತ್ತಿರುವ ಕೊರೋನ

Update: 2020-04-08 06:19 GMT

ಇಡೀ ಜಗತ್ತೇ ಈಗ ಹೊಸ ವೈರಾಣುವಿನ ಗಂಡಾಂತರದಲ್ಲಿ ಸಿಲುಕಿಕೊಂಡಿದೆ. ಎಗ್ಗಿಲ್ಲದೆ ನಡೆಯುತ್ತಿದ್ದ ಪರಿಸರ ಮಾಲಿನ್ಯ ಮತ್ತು ಭೂಸಂಪನ್ಮೂಲಗಳ ಕೊಳ್ಳೆಯನ್ನು ಈ ಸೂಕ್ಷ್ಮ ವೈರಾಣುಗಳು ತಡೆಗಟ್ಟಿ ನಿಲ್ಲಿಸಿವೆ ಎಂದರೆ ಸೋಜಿಗವಾಗುತ್ತದೆ. ಮನುಷ್ಯ ಈಗಲಾದರೂ ನಿಸರ್ಗದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದನ್ನು ಕಲಿತುಕೊಳ್ಳದೇ ಹೋದರೆ ಬದುಕಿ ಉಳಿಯಲಾರ...

ಎಲ್ಲರ ಆಸೆಗಳನ್ನು ಪೂರೈಸುವ ಶಕ್ತಿ ನಿಸರ್ಗಕ್ಕಿದೆ. ಆದರೆ ಎಲ್ಲರ ದುರಾಸೆಗಳನ್ನಲ್ಲ -ಮಹಾತ್ಮಾ ಗಾಂಧಿ ಇಡೀ ಜಗತ್ತೇ ಈಗ ಕೊರೋನ ವೈರಾಣುವಿನಿಂದ ತತ್ತರಿಸಿ ಹೋಗಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ವೈರಾಣುವಿಗೆ ಎಷ್ಟು ಮುಖಗಳಿವೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲದಾಗಿದೆ. ದೂರದರ್ಶನ, ಮುದ್ರಣ ಮಾಧ್ಯಮ, ವಾಟ್ಸ್‌ಆ್ಯಪ್, ಫೇಸ್ಬುಕ್, ಟ್ವಿಟರ್ ಎಲ್ಲವನ್ನೂ ಆವರಿಸಿಕೊಂಡು ಬಿಟ್ಟಿದೆ. ಜಗತ್ತನ್ನೇ ಲಾಕ್‌ಡೌನ್ ಮಾಡಿದ್ದಲ್ಲದೆ ಇಡೀ ಆರ್ಥಿಕತೆಯನ್ನು ಕುಸಿದು ಬೀಳಿಸಿದೆ. ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆಧುನಿಕ ಜಗತ್ತಿನ 780 ಕೋಟಿ ಜನರು ಒಮ್ಮೆಲೆ ಭೀತಿಗೊಂಡು ಮನೆಗಳ ಒಳಗೆ ಸೇರಿಕೊಂಡಿರುವ ಉದಾಹರಣೆ ಮನುಷ್ಯನ ಇತಿಹಾಸದಲ್ಲಿ ಇನ್ನೊಂದಿಲ್ಲ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಹತ್ತಿರಕ್ಕೆ ಸೇರಿಸಿಕೊಳ್ಳದೆ ಮನೆಯ ಒಳಗಡೆಯೆ ದೂರದೂರ ಕುಳಿತುಕೊಂಡು ಮಿಕಿಮಿಕಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಶ್ಚರ್ಯವೆಂದರೆ ಈ ರೋಗದ ಸೋಂಕು ಪಕ್ಷಿ-ಪ್ರಾಣಿಗಳಿಗೆ (ಈ ಲೇಖನ ಬರೆಯುವ ವೇಳೆಗೆ ಅಮೆರಿಕದಲ್ಲಿ ಹುಲಿಗೆ ಕೊರೋನ ಸೋಂಕು ತಗಲಿರುವ ಸುದ್ದಿ ಬಂದಿದೆ) ಹರಡುತ್ತಿಲ್ಲ ಎನ್ನುವುದು ಸೋಜಿಗ ಉಂಟುಮಾಡಿದೆ. ಈ ವೈರಾಣು ಮನುಷ್ಯನನ್ನೇ ಯಾಕೆ ಗುರಿ ಮಾಡಿಕೊಂಡಿದೆ ಎಂಬ ಪ್ರಶ್ನೆ ಎದ್ದಿದೆ. ಬಹುಶಃ ಭೂಮಿಯ ಮೇಲಿರುವ ಎಲ್ಲ ಪ್ರಾಣಿ-ಪಕ್ಷಿಗಳು ನಿಸರ್ಗದ ಜೊತೆಗೆ ಹೊಂದಿಕೊಂಡು ಬದುಕು ನಡೆಸುತ್ತಿದ್ದರೆ ಮನುಷ್ಯ ಮಾತ್ರ ನಿಸರ್ಗದ ವಿರುದ್ಧ ನಡೆಸಿದ ಅಟ್ಟಹಾಸದ ಫಲಿತಾಂಶ ಈಗ ಮನುಷ್ಯನ ಎದುರಿಗೆ ನಿಂತುಕೊಂಡಿದೆ. ಈಗ ಭೂಮಿಯ ವಯಸ್ಸು ಸುಮಾರು ನಾನೂರು ಅರವತ್ತೈದು ಕೋಟಿ ವರ್ಷಗಳಾದರೆ ಜನಸಂಖ್ಯೆ ಏಳುನೂರು ಎಪ್ಪತ್ತು ಕೋಟಿ ದಾಟಿದೆ. ಇಷ್ಟು ಜನರ ಅಗತ್ಯಗಳನ್ನು ಪೂರೈಸಲು ಭೂಮಿ ಹೆಣಗಾಡುತ್ತಿದೆ. ಪೃಥ್ವಿಯ ತೀರಾ ಇತ್ತೀಚಿನ ಇತಿಹಾಸವನ್ನು ಕೆದಕಿ ನೋಡಿದಾಗ ಕನಿಷ್ಠ 5 ಜೈವಿಕ ಸಾಮೂಹಿಕ ಅಳಿವುಗಳು ಉಂಟಾಗಿವೆ. ಜೊತೆಗೆ ಭೂಮಿಯಲ್ಲಿ ಕಾಣಿಸಿಕೊಂಡ ಇತರ ವಿಪತ್ತುಗಳಿಂದ ಭೂಮಿಯ ಮೇಲೆ ವಿಕಾಸ ಹೊಂದಿದ್ದ ಶೇ.99ರಷ್ಟು ಪ್ರಾಣಿಸಮೂಹ ಈಗಾಗಲೇ ಭೂಮಿಯಿಂದ ಅಳಿದುಹೋಗಿದೆ. ಸುಮಾರು 75 ಭಾಗದಷ್ಟು ಸಸ್ಯ ಸಂಕುಲವೂ ಮಾಯವಾಗಿದೆ. ಮುಖ್ಯವಾಗಿ ಕಳೆದ 13,000 ವರ್ಷಗಳಿಂದ ಅಂದರೆ ಹಾಲೋಸೀನ್ ಯುಗದಿಂದ ಮನುಷ್ಯನು ನಿಸರ್ಗದ ಮೇಲೆ ನಡೆಸಿದ ಅಟ್ಟಹಾಸದಿಂದ ಈಗ ಆರನೇ ಜೈವಿಕ ಸಾಮೂಹಿಕ ಅಳಿವು ಪ್ರಾರಂಭವಾಗಿದೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಭೂಮಿಗೆ ದೊಡ್ಡ ಗಂಡಾಂತರ ಪ್ರಾರಂಭವಾಗಿದ್ದು ಅರಣ್ಯ ನಾಶ ಮತ್ತು ಅಪಾರ ಹಸಿರುಮನೆ ಅನಿಲಗಳ ಬಿಡುಗಡೆಯಿಂದ. ಪ್ರಸ್ತುತ ವರ್ಷಕ್ಕೆ ಸರಾಸರಿ 1,40,000 ಪ್ರಾಣಿಸಮೂಹಗಳು ಭೂಮಿಯಿಂದ ಮಾಯವಾಗುತ್ತಿವೆ. ಮನುಷ್ಯನೆಂಬ ಪ್ರಾಣಿ ಭೂಮಿಯ ಮೇಲೆ ಇರಲಿ ಇಲ್ಲದೆ ಹೋಗಲಿ, ಭೂಮಿ ಉಳಿಯುತ್ತದೆ. ಆದರೆ ಅದೇ ಭೂಮಿಯ ಮೇಲಿರುವ ಸಮಸ್ತ ಹುಳ, ಹುಪ್ಪಟೆ, ಪಕ್ಷಿ ಪ್ರಾಣಿಗಳು, ಬ್ಯಾಕ್ಟೀರಿಯ-ವೈರಾಣುಗಳು ಇಲ್ಲದೆ ಇದ್ದರೆ ಮನುಷ್ಯ ಖಂಡಿತ ಉಳಿಯಲಾರ. ಇದು ವೈಜ್ಞಾನಿಕ ಸತ್ಯ. ಭೂಮಿಯ ಮೇಲಿರುವ ಎಲ್ಲಾ ಜೀವಸಂಕುಲ (ಮನುಷ್ಯನನ್ನು ಬಿಟ್ಟು) ಸರಾಸರಿ ಸಾಮಾನ್ಯ ಪ್ರಮಾಣಕ್ಕಿಂತ 100-114 (ಹಿಂದಿನ ಮಾಹಿತಿಯ ಆಧಾರದ ಮೇಲೆ) ಪಟ್ಟು ವೇಗವಾಗಿ ನಾಶವಾಗುತ್ತಿವೆ. ಇದು ಹೀಗೇ ಮುಂದುವರಿದರೆ ಭೂಮಿ ಮತ್ತೆ ಚೇತರಿಸಿಕೊಳ್ಳಲು ಲಕ್ಷಾಂತರ ವರ್ಷಗಳೇ ಹಿಡಿಯಬಹುದು? ಒಮ್ಮೆ ನಶಿಸಿಹೋದ ಪ್ರಾಣಿಸಮೂಹಗಳು ಮತ್ತೆ ಮರುಹುಟ್ಟು ಪಡೆಯಲಾರವು! ಈ ಪ್ರಕ್ರಿಯೆಯಲ್ಲಿ ಮನುಷ್ಯ ಖಂಡಿತ ಉಳಿಯಲಾರ. ಕಳೆದ ಐದು ವಿಪತ್ತುಗಳು ನೈಸರ್ಗಿಕವಾಗಿ ಘಟಿಸಿದ್ದರೆ ಈ ಆರನೇ ವಿಪತ್ತು ಮನುಷ್ಯನ ಸ್ವಯಂಅಪರಾಧದಿಂದ ಸೃಷ್ಟಿಯಾಗಿದೆ. ಇದಕ್ಕೆಲ್ಲ ಕಾರಣ ಮನುಷ್ಯ ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆದು ಬಳಸಿ ಬಿಸಾಕುತ್ತಿರುವುದು ಮತ್ತು ಭೂಮಿಯನ್ನು ಬಂಜರು ಮಾಡುತ್ತಿರುವುದು. ಇದರಿಂದ ಸ್ವಾಭಾವಿಕ ಆವಸಸ್ಥಾನಗಳು ನಾಶ ಹೊಂದುತ್ತಿವೆ. ಕೃಷಿಗಾಗಿ ಅರಣ್ಯನಾಶ ಮಾಡಿ ವಸತಿಗಳನ್ನು ಕಟ್ಟಿಕೊಳ್ಳುತ್ತಿರುವುದರಿಂದ ಪ್ರಾಣಿಗಳು ನಾಡಿಗೆ ಬಂದು ಸಾವನ್ನಪ್ಪುತ್ತಿವೆ. ಇಂಗಾಲದ ಬಿಡುಗಡೆಯಿಂದ ಹವಾಮಾನ ಬದಲಾಗುತ್ತಿದ್ದು ಸಮುದ್ರ ಆಮ್ಲೀಕರಣಗೊಳ್ಳುತ್ತಿದೆ. ಭೂಮಿ ಮತ್ತು ಸಮುದ್ರಗಳು ಪ್ಲಾಸ್ಟಿಕ್ ತಿಪ್ಪೆಗಳಾಗುತ್ತಿವೆ. ವಿಷಪೂರಿತ ರಾಸಾಯನಿಕಗಳ ವಿಸರ್ಜನೆಯಿಂದ ಪರಿಸರ ವಿಷವಾಗಿ ಪರಿವರ್ತನೆಯಾಗುತ್ತಿದೆ. ಇದೆಲ್ಲದರ ಕಾರಣದಿಂದ ಶೇಕಡ 41ರಷ್ಟು ಉಭಯಚರಗಳು ಮತ್ತು ಶೇಕಡ 26ರಷ್ಟು ಸಸ್ತನಿಗಳು ನಾಶದ ಬಲೆಗೆ ಸಿಲುಕಿಕೊಂಡಿವೆ. ಇವುಗಳನ್ನು ಈಗ walking dead ಪ್ರಾಣಿಗಳು ಮತ್ತು ಭೂಮಿಯನ್ನು broken earth ಎಂದು ಕರೆಯಲಾಗುತ್ತಿದೆ.

ಅಗಾಧ ಆಹಾರ ಬೆಳೆಯಲು ಲಕ್ಷಾಂತರ ಟನ್ ಸಾರಜನಕವನ್ನು ರಸಗೊಬ್ಬರಕ್ಕೆ ಸೇರಿಸಿ ಫಲವತ್ತು ಭೂಮಿಯನ್ನು ಬಂಜರು ಮಾಡುತ್ತಿದ್ದೇವೆ. ಅಷ್ಟೇ ಫಾಸ್ಪೇಟನ್ನು ನೆಲದಿಂದ ತೆಗೆದು ಮುಗಿಸುತ್ತಿದ್ದೇವೆ. ಇದರಿಂದ ಬೆಳೆಯುವ ಬೆಳೆಗಳನ್ನು ಪ್ರಾಣಿಗಳಿಗೆ ತಿನ್ನಿಸಿ, ನಾವೂ ಕೂಡ ಅಂತಹ ಬೆಳೆಗಳನ್ನು, ಪ್ರಾಣಿಗಳನ್ನು ಅಗಾಧವಾಗಿ ಭಕ್ಷಿಸುತ್ತಿದ್ದೇವೆ. ಸಾಲದ್ದಕ್ಕೆ ಅದರ ಜೊತೆಗೆ ಹತ್ತಾರು ರೀತಿಯ ವಿಷ ರಾಸಾಯನಿಕಗಳನ್ನು ಮಿಶ್ರಣ ಮಾಡಿ ನಮ್ಮ ದೇಹದ ವ್ಯವಸ್ಥೆಯನ್ನೇ ನಿಸರ್ಗದಿಂದ ಪ್ರತ್ಯೇಕ ಮಾಡಿಬಿಟ್ಟಿದ್ದೇವೆ. ಲಕ್ಷಾಂತರ ವರ್ಷಗಳಿಂದ ನಿಸರ್ಗದಲ್ಲಿ ಬೆಳೆದು ಬಂದ ಪರಿಸರದ ಕೊಂಡಿಗಳನ್ನೇ ಛಿದ್ರಛಿದ್ರವಾಗಿಸುತ್ತಿದ್ದೇವೆ. ಪ್ರಾಣಿ ಸಮೂಹದ ಅಳಿವಿಗೆ ಇದು ಮುಖ್ಯ ಕಾರಣವಾಗಿದೆ.

ಭೂಮಿಯಲ್ಲಿ ಹುದುಗಿರುವ ಹೈಡ್ರೋಕಾರ್ಬನ್ ಅನ್ನು ಮೊಗೆದು ಯಂತ್ರಗಳಿಗೆ ತುಂಬಿಸಿ(online digital environment) ಓಡಿಸುತ್ತಿದ್ದೇವೆ. ಇದು ಆಂತರಿಕ ಕ್ರಿಯಾಶೀಲತೆಯಿಂದ ಹೊರಹೊಮ್ಮುವ ತಂತ್ರಾಂಶವಾಗಿದ್ದು ಮನುಷ್ಯ ಪ್ರಸ್ತುತ ಚಾಲನೆ ಮಾಡುತ್ತಿದ್ದರೂ, ನಿಜವಾಗಿಯೂ ಅದು ಅವನ ಹಿಡಿತದಲ್ಲಿಲ್ಲ. ಇದು ಜೀವಮಂಡಲದ ಮಗ್ಗುಲ ಪರಿಣಾಮವಾಗಿದೆ. ನಿಸರ್ಗಕ್ಕೆ ತನ್ನದೇ ಆದ ಒಂದು ವ್ಯವಸ್ಥೆ ಇದೆ. ಅದನ್ನು ನಮ್ಮ ಪೂರ್ವಿಕರು ಅರಿತು ನಿಸರ್ಗ ದೇವತೆಯನ್ನು ಆರಾಧಿಸುವುದರ ಜೊತೆಗೆ ಹೊಂದಿಕೊಳ್ಳುತ್ತ ತಮಗೆ ಎಷ್ಟುಬೇಕೊ ಅಷ್ಟನ್ನು ಮಾತ್ರ ನಿಸರ್ಗದಿಂದ ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಆಧುನಿಕ ಬದುಕು ಮತ್ತು ಕೊಳ್ಳುಬಾಕತನದೊಂದಿಗೆ ಜನರು ಭೂಮಿಯನ್ನು ಅಡಿಯಾಳಾಗಿಸಿಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ. ಸೃಷ್ಟಿಯ ಒಂದು ಕಣವಾಗಿರುವ ಅಲ್ಪ ಮಾನವ ಜೀವವಿಕಾಸವನ್ನೇ ನಿರ್ದೇಶಿಸಲು ಪ್ರಾರಂಭಿಸಿಬಿಟ್ಟಿದ್ದಾರೆ. ಹೊಸಹೊಸ ತಳಿಗಳನ್ನು ಸೃಷ್ಟಿಸುತ್ತಾ ಜೆನಿಟಿಕ್ ಇಂಜಿನಿಯರಿಂಗ್ ನಕ್ಷೆ ಬದಲಿಸಲು ಹೊರಟಿದ್ದಾರೆೆ. ಕೋವಿಡ್-19 ರೋಗಕ್ಕೆ ನಾಲ್ಕು ಹಂತಗಳಿವೆ. ಒಂದು, ಒಂದು ದೇಶದ ಒಬ್ಬಿಬ್ಬರಿಂದ (ವಿಮಾನ ಸಂಚಾರ ಮೂಲಕ) ಇನ್ನೊಂದು ದೇಶಕ್ಕೆ ರೋಗ ಹರಡುವುದು. ಎರಡನೇ ಹಂತ, ಒಂದು ದೇಶದಲ್ಲಿ ಸೋಂಕು ತಗಲಿ ಅದು ಅವರಿಂದ ಇತರರಿಗೆ ಹರಡುವುದು. ಮೂರನೇ ಹಂತ, ಆಯಾ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಸೋಂಕು ಹರಡಿಕೊಳ್ಳುವುದು. ಅಲ್ಲಿಗೆ ಪರಿಸ್ಥಿತಿ ತೀರಾ ಗಂಭೀರವಾಗಿ ಪರಿವರ್ತನೆಗೊಳ್ಳುತ್ತದೆ. ನಮ್ಮ ದೇಶದಲ್ಲಿ ಈ ಹಂತ ತಲುಪಲು ಬಿಡಬಾರದು ಎನ್ನುವುದು ಎಲ್ಲರ ಕಳಕಳಿಯ ಮನವಿ. ಆದರೆ ಜನರು ಗಂಭೀರತೆಯನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾಲ್ಕನೇ ಹಂತ, ಸಮುದಾಯಗಳು, ಹಳ್ಳಿಗಳಲ್ಲಿ ರೋಗ ಹರಡಿಕೊಂಡು ಕಾಲರಾ, ಫ್ಲೂ ರೀತಿಯಲ್ಲಿ ಎಂದೆಂದಿಗೂ ಜನರಲ್ಲಿ ಉಳಿದುಕೊಳ್ಳುವುದು. ದೇಶದಲ್ಲಿ ಈಗ ಎರಡನೇ ಹಂತ ದಾಟಿ ಮೂರನೇ ಹಂತ ತಲುಪಿಯೇ ಬಿಟ್ಟಿತೆ ಎನ್ನುವ ಆತಂಕ ಕಾಣಿಸಿಕೊಂಡಿದೆ. ಜನರು ಈಗಲಾದರೂ ಮನೆಗಳಲ್ಲಿ ಉಳಿದುಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ವೈದ್ಯರು, ವಿಜ್ಞಾನಿಗಳು, ರಾಜಕಾರಣಿಗಳು ಎಲ್ಲರೂ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದಾರೆ. ಭೂಮಿಯ ಮೇಲೆ ಮೊದಲಿಗೆ ವೈರಾಣು ಕಾಣಿಸಿಕೊಂಡಿದ್ದು ಸುಮಾರು ನೂರಾಐವತ್ತು ಕೋಟಿ ವರ್ಷಗಳ ಹಿಂದೆ. ಇವು ಮೊದಲಿಗೆ ಸುಮಾರು 66 ವೈರಸ್ ನಿರ್ದಿಷ್ಟ ಪ್ರೊಟೀನ್ ಮಡಿಕೆಗಳಲ್ಲಿ ಕಾಣಿಸಿಕೊಂಡವು. ಮಂಗನಿಂದ - ಓರಾಂಗುಟನ್ - ಆದಿಮಾನವ - ಮನುಷ್ಯ ಭೂಮಿಗೆ ಬಂದಿದ್ದು ಕೇವಲ 50 ಲಕ್ಷ ವರ್ಷಗಳ ಹಿಂದೆ. ನೂರಾಐವತ್ತು ಕೋಟಿ ವರ್ಷಗಳಿಂದ ಭೂಮಿಯ ಮೇಲೆ ಉಳಿದುಕೊಂಡು ಬಂದಿರುವ ಈ ವೈರಾಣುಗಳ ಎದುರಿಗೆ ಅಲ್ಪ ಮಾನವ ನಿಲ್ಲಲು ಸಾಧ್ಯವೇ. ಮನುಷ್ಯನಿಗಿಂತ ಪಕ್ಷಿ ಪ್ರಾಣಿಗಳು ವೈರಾಣುಗಳನ್ನು ಮೆಟ್ಟಿ ನಿಲ್ಲುವಂತಹ ಅತಿ ಹೆಚ್ಚು ಪ್ರತಿರಕ್ಷೆಯನ್ನು ಪಡೆದಿವೆ. ಕಾರಣ ಅವು ನಿಸರ್ಗದೊಂದಿಗೆ ಸಂಧಾನ ಮಾಡಿಕೊಂಡು ಬದುಕುತ್ತಿರುವುದು. ವೈರಾಣುಗಳು ಪಕ್ಷಿ ಪ್ರಾಣಿ ಅಥವಾ ಮನುಷ್ಯನ ಕೋಶಗಳಲ್ಲಿ ಸೇರಿಕೊಂಡು ಕೋಟಿಕೋಟಿ ಸಂಖ್ಯೆಯಲ್ಲಿ ಆವರ್ತನಗೊಂಡು ಒಡೆಯಲು ಪ್ರಾರಂಭಿಸಿ ರೋಗಿಯನ್ನು ದುರ್ಬಲಗೊಳಿಸಿ ಸಾಯಿಸುತ್ತವೆ. ಈ ವೈರಾಣುಗಳು ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತಾ (mutation)ಹೋಗುತ್ತವೆ. ಆಧುನಿಕ ಜಗತ್ತು ವೈರಾಣುಗಳನ್ನು ಕೊಲ್ಲಲು ಹೊಸಹೊಸ ಔಷಧಿಗಳನ್ನು ಕಂಡುಹಿಡಿದರೂ ಅವು ಕೆಲವೇ ವರ್ಷಗಳಲ್ಲಿ ಔಷಧಿಗಳನ್ನು ತಿಂದುಕೊಂಡು ಪ್ರತಿರಕ್ಷಣೆಯನ್ನು ಬೆಳೆಸಿಕೊಳ್ಳುತ್ತವೆ. ಈಗ ಕಾಣಿಸಿಕೊಂಡಿರುವ ಕೊರೋನ ವೈರಾಣು 2002ರಲ್ಲಿ ಕಾಣಿಸಿಕೊಂಡ ಸಾರ್ಸ್‌ನ ರೂಪಾಂತರಿತ ವೈರಾಣಾಗಿದೆ. ಇದರ ಬಗ್ಗೆ ವೈದ್ಯರಿಗೂ ಇನ್ನೂ ಅನೇಕ ಅನುಮಾನಗಳಿವೆ. ಒಟ್ಟಿನಲ್ಲಿ ಇದಕ್ಕೆ ಔಷಧಿಯನ್ನು ಕಂಡುಹಿಡಿದು ಕೊಲ್ಲುವಷ್ಟರಲ್ಲಿ ಅದು ಬೇರೆ ರೂಪದಲ್ಲಿ ನಮ್ಮ ಮುಂದೆ ಬಂದು ನಿಂತುಕೊಳ್ಳುತ್ತದೆ. ಇಡೀ ಜಗತ್ತೇ ಈಗ ಗಂಡಾಂತರದಲ್ಲಿ ಸಿಲುಕಿಕೊಂಡಿದೆ. ಎಗ್ಗಿಲ್ಲದೆ ನಡೆಯುತ್ತಿದ್ದ ಪರಿಸರ ಮಾಲಿನ್ಯ ಮತ್ತು ಭೂಸಂಪನ್ಮೂಲಗಳ ಕೊಳ್ಳೆಯನ್ನು ಈ ಸೂಕ್ಷ್ಮ ವೈರಾಣುಗಳು ತಡೆಗಟ್ಟಿ ನಿಲ್ಲಿಸಿವೆ ಎಂದರೆ ಸೋಜಿಗವಾಗುತ್ತದೆ. ಮನುಷ್ಯ ಈಗಲಾದರೂ ನಿಸರ್ಗದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದನ್ನು ಕಲಿತುಕೊಳ್ಳದೇ ಹೋದರೆ ಇಂದಲ್ಲ, ಮುಂದೊಂದು ದಿನ ಭೂಮಿಯ ಮೇಲೆ ಬದುಕಿ ಉಳಿಯಲಾರ ಎನ್ನುವುದು ಇಂದಿನ ನಿಸರ್ಗದ ಸಂದೇಶವಾಗಿದೆ.

Writer - ಡಾ.ಎಂ.ವೆಂಕಟಸ್ವಾಮಿ

contributor

Editor - ಡಾ.ಎಂ.ವೆಂಕಟಸ್ವಾಮಿ

contributor

Similar News