ಎ. 30ರವರೆಗೆ ಐಆರ್‌ಸಿಟಿಸಿ ರೈಲುಗಳು ಬಂದ್

Update: 2020-04-08 09:20 GMT

ಹೊಸದಿಲ್ಲಿ : ಭಾರತೀಯ ರೈಲ್ವೆಯ ಸಹಸಂಸ್ಥೆಯಾಗಿರುವ ಐಆರ್‌ಸಿಟಿಸಿ ತನ್ನ ಪ್ರಯಾಣಿಕ ರೈಲು ಸೇವೆಗಳನ್ನು ಈ ತಿಂಗಳ 30ರವರೆಗೆ ರದ್ದುಪಡಿಸಿರುವುದಾಗಿ ಪ್ರಕಟಿಸಿದೆ.

ಐಆರ್‌ಸಿಟಿಸಿ ಮೂರು ಪ್ರಯಾಣಿಕ ರೈಲುಗಳನ್ನು ಓಡಿಸುತ್ತಿದ್ದು, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಆದರೆ ಐಆರ್‌ಸಿಟಿಸಿ ರೈಲುಗಳು ರದ್ದಾಗಿದ್ದರೂ, ಭಾರತೀಯ ರೈಲ್ವೆಯ ಸೇವೆ ಈ ಅವಧಿಯವರೆಗೆ ಸ್ಥಗಿತಗೊಂಡಿರುತ್ತದೆ ಎಂದು ಭಾವಿಸಬೇಕಿಲ್ಲ ಎಂದು ಭಾರತೀಯ ರೈಲ್ವೆ ಹೇಳಿಕೆ ನೀಡಿದೆ.

ಕಾಶಿ ಮಹಾಕಾಲ ಎಕ್ಸ್‌ಪ್ರೆಸ್ (ವಾರಣಾಸಿಯಿಂದ ಇಂಧೋರ್) ಹಾಗೂ ಲಕ್ನೋ- ದೆಹಲಿ, ಅಹ್ಮದಾಬಾದ್- ಮುಂಬೈ ಮಾರ್ಗದದಲ್ಲಿ ಸಂಚರಿಸುವ ರೈಲುಗಳ ಸೇವೆಯನ್ನು ರದ್ದು ಮಾಡಲು ಐಆರ್‌ಸಿಟಿಸಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಇತರ ಪ್ರಯಾಣಿಕ ರೈಲುಗಳಿಗೆ ಸಂಬಂಧಿಸಿದಂತೆ ಇದುವರೆಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಲಾಕ್‌ಡೌನ್ ಮುಗಿಯಲು ಇನ್ನೂ ಒಂದು ವಾರ ಇದೆ. ಲಾಕ್‌ಡೌನ್ ತೆರವುಗೊಳಿಸಲಾಗುತ್ತದೆಯೇ ಅಥವಾ ಮುಂದುವರಿಸಲಾಗುತ್ತದೆಯೇ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ತನ್ನ ಸೇವೆ ಪುನರಾರಂಭಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ರೈಲ್ವೆ ಸಚಿವಾಲಯ ಸರಣಿ ಸಭೆಗಳನ್ನು ನಡೆಸುತ್ತಿದೆ. ರೈಲು ಬೋಗಿಯೊಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲ ಅಗತ್ಯ ರೈಲುಗಳನ್ನು ಓಡಿಸುವುದು ಸೇರಿದಂತೆ ಹಲವು ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News