ಮುಂಬೈನ ಧಾರಾವಿಯಲ್ಲಿ ಇನ್ನೆರಡು ಕೊರೋನಾ ಪ್ರಕರಣಗಳು ಪತ್ತೆ,ಒಟ್ಟು ಸಂಖ್ಯೆ 9ಕ್ಕೇರಿಕೆ

Update: 2020-04-08 16:22 GMT

ಮುಂಬೈ,ಎ.8: ಮುಂಬೈನ ಕೊಳಗೇರಿ ಧಾರಾವಿಯಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಈ ಪ್ರದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಒಂಭತ್ತಕ್ಕೇರಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ಅಧಿಕಾರಿಯೋರ್ವರು ಬುಧವಾರ ತಿಳಿಸಿದರು.

ಮುಕುಂದ ನಗರದ 25ರ ಹರೆಯದ ಯುವಕ ಈ ಹಿಂದೆ ಸೋಂಕು ದೃಢಪಟ್ಟು ಕ್ವಾರಂಟೈನ್‌ನಲ್ಲಿರಿಸಲಾಗಿದ್ದ 49ರ ಹರೆಯದ ರೋಗಿಯ ಸಂಪರ್ಕಕ್ಕೆ ಬಂದಿದ್ದ. 35ರ ಹರೆಯದ ಇನ್ನೋರ್ವ ವ್ಯಕ್ತಿ ಧನವಾಡಾ ಚಾಳ್ ನಿವಾಸಿಯಾಗಿದ್ದು,ಆತನ ಸಂಪರ್ಕ ಹೊಂದಿದ್ದವರ ಪತ್ತೆ ಕಾರ್ಯ ನಡೆಯುತ್ತಿದೆ. ಇಡೀ ಪ್ರದೇಶವನ್ನು ಸೀಲ್ ಮಾಡಲಾಗುತ್ತಿದೆ ಎಂದರು.

ವಿಶ್ವದ ಅತ್ಯಂತ ದೊಡ್ಡ ಕೊಳಗೇರಿಗಳಲ್ಲೊಂದಾಗಿರುವ ಧಾರಾವಿ ನಿಬಿಡ ಜನಸಾಂದ್ರತೆಯನ್ನು ಹೊಂದಿದ್ದು,ಸಾಂಕ್ರಾಮಿಕ ರೋಗಗಳು ಹರಡಲು ಪ್ರಶಸ್ತ ಸ್ಥಳವಾಗಿದೆ.

ಮುಂಬೈನಲ್ಲಿ ಕೊರೋನ ವೈರಸ್ ಪಿಡುಗು ಸಮುದಾಯ ಪ್ರಸರಣ ಹಂತವನ್ನು ಪ್ರವೇಶಿಸಿದೆ. ಮುಂಬೈನಲ್ಲಿ ಈವರೆಗೆ 34 ಜನರು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದು,ಈ ಪೈಕಿ 11 ಜನರಿಗೆ ಯಾವುದೇ ಪೂರ್ವ ಕಾಯಿಲೆಗಳಿರಲಿಲ್ಲ ಎಂದು ಬಿಎಂಸಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಬುಧವಾರ ಬೆಳಗ್ಗೆ ಬಿಎಂಸಿ ವ್ಯಾಪ್ತಿಯಲ್ಲಿ 44 ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,ಒಟ್ಟು ಪ್ರಕರಣಗಳ ಸಂಖ್ಯೆ 569ಕ್ಕೇರಿದೆ.

ನಗರದಲ್ಲಿ ಹೊಸದಾಗಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ರೋಗಿಗಳು ಸೋಂಕಿತರ ಸಂಪರ್ಕ ಹೊಂದಿರುವುದು ಅಥವಾ ಯಾವುದೇ ಪ್ರವಾಸ ಇತಿಹಾಸ ಹೊಂದಿರುವುದು ಕಂಡು ಬರುತ್ತಿಲ್ಲ ಎಂದು ಬಿಎಂಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News