ಪಡಿತರ ಅಕ್ಕಿಯ ಕಳ್ಳತನ: ಅಧಿಕಾರಿಯ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತರ ಬಂಧನ
ಗುವಾಹಟಿ,ಎ.8: ಸಾರ್ವಜನಿಕ ವಿತರಣೆಗಾಗಿರುವ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಕದ್ದು ಸಾಗಿಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದ ಗೋಲಾಘಾಟ್‌ನ ಮಾನವ ಹಕ್ಕುಗಳ ಸಂಸ್ಥೆ ‘ಜೀಪಾಲ್ ಕೃಷಕ ಶ್ರಮಿಕ ಸಮಿತಿ (ಜೆಕೆಎಸ್‌ಎಸ್)’ಯ ಸಲಹೆಗಾರ ಸೋಮೇಶ್ವರ ನಾರಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಣಬ್ ಡೋಲೆ ಅವರನ್ನು 2018ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
800 ಕ್ವಿಂಟಲ್ ಅಕ್ಕಿ ‘ನಾಪತ್ತೆ’ಯಾಗಿರುವ ಕುರಿತು ಕಾಝಿರಂಗ ಸಹಕಾರಿ ಗೋದಾಮಿನ ಅಧಿಕಾರಿಗಳ ವಿರುದ್ಧ ಎ.6ರಂದು ಪೊಲೀಸರಲ್ಲಿ ದೂರು ದಾಖಲಿಸಿದ್ದ ನಾರಾ ಮತ್ತು ಡೋಲೆ ಅವರನ್ನು ಎ.7ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಆದರೆ 2018ರ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅವರನ್ನು ಪೊಲೀಸರ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ ಆರೋಪಿಗಳೆಂದು ಹೆಸರಿಸಲಾಗಿದೆ. ನ್ಯಾಯಾಲಯವು ಇಬ್ಬರಿಗೂ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ.
ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಕೆಲವು ಸ್ಥಳೀಯ ರಾಜಕೀಯ ನಾಯಕರ ಕೈವಾಡವಿರಬಹುದು ಮತ್ತು ಪೊಲೀಸರು ರಾಜಕೀಯ ಒತ್ತಡದಲ್ಲಿ ಕಾರ್ಯಾಚರಿಸಿರಬಹುದು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜೆಕೆಎಸ್‌ಎಸ್‌ನ ಜಿಲ್ಲಾ ಸಂಘಟಕ ಪುತುಲ್ ನಾರಾ ತಿಳಿಸಿದರು.
ನಾರಾ ಮತ್ತು ಡೋಲೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ನಿಷ್ಠೂರ ಸ್ವಭಾವದ ನಾರಾ ಭ್ರಷ್ಟಾಚಾರ ಮತ್ತು ಅಕೃತ್ಯಗಳ ವಿರುದ್ಧ ನೇರವಾಗಿ ಮಾತನಾಡುತ್ತಿದ್ದರು. ಇತ್ತೀಚಿಗೆ ಪೊಲೀಸರು ಅವರನ್ನು ಕರೆಸಿ ಫೇಸ್‌ಬುಕ್ ಪೋಸ್ಟ್‌ಗಳ ವಿರುದ್ಧ ಎಚ್ಚರಿಕೆಯನ್ನು ನೀಡಿದ್ದರು ಎಂದು ಅವರು ಹೇಳಿದರು.