‘ಕೊರೋನ ಹರಡುತ್ತಿದ್ದಾನೆ’ ಎಂದು ಆರೋಪಿಸಿ ಯುವಕನ ಮೇಲೆ ಹಲ್ಲೆ; ಮೂವರ ಬಂಧನ

Update: 2020-04-09 16:23 GMT

ಹೊಸದಿಲ್ಲಿ, ಎ.6: ನೋವೆಲ್ ಕೊರೋನಾ ವೈರಸ್ ಸೋಂಕು ಹರಡುವ ಸಂಚು ಹೂಡಿದ್ದಾನೆಂದು ಆರೋಪಿಸಿ, ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬುಧವಾರ ದಿಲ್ಲಿಯ ಬಾವನಾ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಹಲ್ಲೆಗೊಳಗಾದಾತನನ್ನು 22 ವರ್ಷ ವಯಸ್ಸಿನ ಮೆಹಬೂಬ್ ಅಲಿ ಎಂದು ಗುರುತಿಸಲಾಗಿದೆ. ಬಾವಾನಾದ ಹರೆವಾಲಿ ಗ್ರಾಮದ ನಿವಾಸಿಯಾದ ಈತನನ್ನು ನಗರದ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಅಲಿಯನ್ನು ಆಸ್ಪತ್ರೆಯ ಕೊರೋನಾ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಆತನ ಆರೋಗ್ಯ ಉತ್ತಮವಾಗಿದೆ ಎಂದು ಎಫ್‌ಐಆರ್ ವರದಿ ತಿಳಿಸಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದ ತಬ್ಲಿಗಿ ಜಮಾಅತ್‌ನ ಸಮಾವೇಶಕ್ಕೆ ಅಲಿ ತೆರಳಿದ್ದು, ಕೆಲವು ದಿನಗಳ ಹಿಂದೆ ಆತ ದಿಲ್ಲಿಗೆ ವಾಪಸಾಗಿದ್ದ. ಆನಂತರ ಪೊಲೀಸರು ಅಝಾದ್‌ಪುರ ಮಾರುಕಟ್ಟೆ ಪ್ರದೇಶದಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಅಲಿ ಬಿಡುಗಡೆ ಗೊಂಡಿದ್ದ.

ತನ್ನ ಗ್ರಾಮಕ್ಕೆ ವಾಪಸಾಗಿದ್ದ ಅಲಿ ವಾಪಾಸಾದಾಗ, ಆತ ಕೊರೋನ ವೈರಸ್ ಸೋಂಕು ಹರಡುವ ಸಂಚು ಹೂಡಿದ್ದನೆಂಬ ವದಂತಿಗಳು ಹರಡಿದ್ದವು. ರವಿವಾರ ಗ್ರಾಮದ ಹೊಲವೊಂದರ ಬಳಿ ಕಿಡಿಗೇಡಿಗಳ ಗುಂಪೊಂದು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News