ಸಾಮಾಜಿಕ ಅಂತರ ಮತ್ತು ಲಾಕ್‌ಡೌನ್ ಕೊರೋನ ವಿರುದ್ಧದ ಅತ್ಯಂತ ಪ್ರಭಾವೀ ಲಸಿಕೆ : ಹರ್ಷವರ್ಧನ್

Update: 2020-04-09 17:58 GMT

 ಹೊಸದಿಲ್ಲಿ, ಎ.9: ಕೊರೋನ ವೈರಸ್‌ಗೆ ಈ ಸಂದರ್ಭ ಯಾವುದೇ ಲಸಿಕೆ ಸಿದ್ಧವಾಗಿಲ್ಲದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಲಾಕ್‌ಡೌನ್ ಈಗ ಇರುವ ಅತ್ಯಂತ ಪ್ರಭಾವೀ ಲಸಿಕೆಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಕೊರೋನ ಸೋಂಕಿತರ ಅಂಕಿ ಅಂಶವನ್ನು ಗಮನಿಸಿದರೆ ಭಾರತ ಇತರ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ. ಸರಕಾರ ಸೂಚಿಸಿರುವ ಕಠಿಣ ಕ್ರಮಗಳನ್ನು ಜನತೆ ಪಾಲಿಸಿದರೆ ಕೊರೋನ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಬಹುದು ಎಂದು ಹರ್ಷವರ್ಧನ್ ಹೇಳಿದರು. ಕೋವಿಡ್-19 ಸೋಂಕಿನ ಬಗ್ಗೆ ಬೆನ್ನೆಟ್ ವಿವಿ ಆಯೋಜಿಸಿದ್ದ ಆನ್‌ಲೈನ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ದೇಶದ 133 ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ಗಳೆಂದು ಸರಕಾರ ಗುರುತಿಸಿದೆ. ಈಗ ದೇಶದಲ್ಲಿ ಪ್ರತೀ 4- 5 ದಿನಕ್ಕೆ ಕೊರೋನ ಸೋಂಕಿತರ ಪ್ರಮಾಣ ದ್ವಿಗುಣವಾಗುತ್ತಿದೆ. ಆದರೆ ದೇಶದ ಹೆಚ್ಚಿನ ಜಿಲ್ಲೆಗಳು ಸೋಂಕಿನ ಪ್ರಭಾವಕ್ಕೆ ಒಳಗಾಗಿಲ್ಲ. ರಾಜ್ಯಗಳ ಜತೆಗೂಡಿ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ರೂಪಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಆಮ್ಲಜನಕ ಪೂರೈಸುವ ವ್ಯವಸ್ಥೆ, ವೆಂಟಿಲೇಟರ್‌ಗಳು, ಪ್ರತ್ಯೇಕ ವಾರ್ಡ್‌ಗಳಲ್ಲಿ ಹಾಸಿಗೆ, ತೀವ್ರ ನಿಗಾ ಘಟಕಗಳ ನ್ನು ಸರಕಾರ ವ್ಯವಸ್ಥೆ ಮಾಡಿದೆ. ಆದರೆ ದೇಶದಲ್ಲಿ ದಾಖಲಾಗಿರುವ 85% ಪ್ರಕರಣಗಳು ಸೌಮ್ಯ ಸ್ವರೂಪದ್ದಾಗಿದ್ದು ಇಂತಹ ವ್ಯವಸ್ಥೆಗಳ ಅಗತ್ಯವಿಲ್ಲ ಎಂದವರು ಹೇಳಿದ್ದಾರೆ.

   ಸ್ವಯಂ ಸೋಂಕು ತಗುಲುವ ಅಪಾಯದ ಮಧ್ಯೆಯೂ ಮುಂಚೂಣಿಯಲ್ಲಿ ನಿಂತು ಆರೈಕೆ ಮಾಡುವ ಆರೋಗ್ಯ ಕಾರ್ಯಕರ್ತರನ್ನು ದೇಶದ ಜನತೆ ಬೆಂಬಲಿಸಬೇಕು. ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್‌ಗಳೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸುವವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹರ್ಷವರ್ಧನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News