ಮೋದಿ ಪ್ರಸ್ತಾವಿಸಿದ ಸಾರ್ಕ್ ಕೋವಿಡ್-19 ನಿಧಿಗೆ 30 ಲಕ್ಷ ಡಾಲರ್ ದೇಣಿಗೆ ನೀಡಿದ ಪಾಕ್

Update: 2020-04-10 03:50 GMT

ಇಸ್ಲಾಮಾಬಾದ್, ಎ.10: ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಸಾರ್ಕ್ ಕೊರೋನ ವೈರಸ್ ತುರ್ತು ನಿಧಿಗೆ ಪಾಕಿಸ್ತಾನ ಸರ್ಕಾರ 30 ಲಕ್ಷ ಡಾಲರ್ ನೆರವು ನೀಡಲು ಮುಂದಾಗಿದೆ. ಸಾರ್ಕ್ ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಸಾಂಕ್ರಾಮಿಕ ನಿಯಂತ್ರಣಕ್ಕೆ ಭಾರತದ ಪ್ರಧಾನಿ 1 ಕೋಟಿ ಡಾಲರ್ ಆರಂಭಿಕ ದೇಣಿಗೆಯೊಂದಿಗೆ ಈ ನಿಧಿ ಸ್ಥಾಪಿಸಿದ್ದರು.

ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸೊಹೈಲ್ ಮಹ್ಮೂದ್ ಅವರು ಸಾರ್ಕ್ ಪ್ರಧಾನ ಕಾರ್ಯದರ್ಶಿ ಎಸಲಾ ರುವಾನ್ ವೀರಾಕೂನ್ ಅವರ ಜತೆ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಪಾಕಿಸ್ತಾನದ ಈ ನೆರವು ಘೋಷಿಸಲಾಯಿತು. ಜತೆಗೆ ಇದರ ಬಳಕೆ ಬಗೆಗಿನ ಪಾಕಿಸ್ತಾನದ ದೃಷ್ಟಿಕೋನವನ್ನು ಕೂಡಾ ಸೊಹೈಲ್ ವಿವರಿಸಿದರು.

ಸಾರ್ಕ್ ನಿಯಮಾವಳಿಗೆ ಅನುಸಾರವಾಗಿ ಎಲ್ಲ ಸದಸ್ಯ ದೇಶಗಳ ಜತೆ ಚರ್ಚಿಸಿ, ಈ ನಿಧಿಯನ್ನು ಬಳಕೆ ಮಾಡುವ ವಿಧಿವಿಧಾನವನ್ನು ಅಂತಿಮಪಡಿಸಬೇಕು ಎಂದು ಅವರು ಸಾರ್ಕ್ ಪ್ರಧಾನ ಕಾರ್ಯದರ್ಶಿಯವರಿಗೆ ಸಲಹೆ ಮಾಡಿದರು.

ಸಾರ್ಕ್ ಪ್ರದೇಶದಲ್ಲಿ ಕೋವಿಡ್-19 ವಿರುದ್ಧ ಸಂಘಟಿತ ಹೋರಾಟ ನಡೆಸಲು ಜಂಟಿ ಕಾರ್ಯತಂತ್ರ ರೂಪಿಸುವಂತೆ ಮಾರ್ಚ್ 15ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಮೋದಿ ಸಲಹೆ ಮುಂದಿಟ್ಟಿದ್ದರು. ಜತೆಗೆ ಭಾರತ ಈ ನಿಧಿಗೆ 10 ದಶಲಕ್ಷ ಡಾಲರ್ ನೆರವು ಘೋಷಿಸಿತ್ತು. ಬಳಿಕ ನೇಪಾಳ ಹಾಗೂ ಅಪ್ಘಾನಿಸ್ತಾನ ತಲಾ 10 ಲಕ್ಷ ಡಾಲರ್ ನೆರವಿನ ವಾಗ್ದಾನ ಮಾಡಿದ್ದರೆ, ಮಾಲ್ಡೀವ್ಸ್ 2 ಲಕ್ಷ ಡಾಲರ್, ಭೂತಾನ್ 1 ಲಕ್ಷ ಡಾಲರ್ ಹಾಗೂ ಬಾಂಗ್ಲಾದೇಶ 15 ಲಕ್ಷ ಡಾಲರ್, ಶ್ರೀಲಂಕಾ 50 ಲಕ್ಷ ಡಾಲರ್ ನೆರವು ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News