ಕಳವು ಆರೋಪಿಗೆ ಕೊರೋನವೈರಸ್: 17 ಪೊಲೀಸರು, ನ್ಯಾಯಾಧೀಶರಿಗೆ ಕ್ವಾರಂಟೈನ್

Update: 2020-04-10 08:39 GMT

ಲುಧಿಯಾನ: ವಾಹನಗಳ ಕಳವು ಆರೋಪದಲ್ಲಿ ಬಂಧಿತ ಆರೋಪಿಯೊಬ್ಬನಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟ ಕಾರಣದಿಂದಾಗಿ  ಲುಧಿಯಾನದ ಒಬ್ಬರು ನ್ಯಾಯಧೀಶರು ಮತ್ತು 17 ಪೊಲೀಸರನ್ನು ಕ್ವಾರಂಟೈನ್  ಗೆ ಕಳಹಿಸಲಾಗಿದೆ.

ನಗರದಲ್ಲಿ ಗುರುವಾರ ವರದಿಯಾದ ಎರಡು ಕೋವಿಡ್ -19 ಪೊಸಿಟಿವ್ ಪ್ರಕರಣಗಳಲ್ಲಿ  24ರ ಹರೆಯದ ವಾಹನ ಕಳವು ಪ್ರಕರಣದ  ಆರೋಪಿ  ಸೇರಿದ್ದಾನೆ.

ಎ.6ರಂದು ಪೊಲೀಸರು  ಗಸ್ತು  ತಿರುಗುತ್ತಿದ್ದಾಗ  ಮೋಟಾರ್ ಸೈಕಲ್ ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ವಾಹನಗಳನ್ನು ಕಳವು ಮಾಡಿ ಮಾರಾಟಕ್ಕೆ ಯತ್ನಿಸಿರುವುದನ್ನು ಒಪ್ಪಿಕೊಂಡಿದ್ದನು.  ಬಳಿಕ ಆತನನ್ನು ಬಂಧಿಸಿ  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.  ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

 ಜೈಲಿನಲ್ಲಿ ಕೆಮ್ಮು ಮತ್ತು ಶೀತದ ಬಗ್ಗೆ  ದೂರು ನೀಡಿದ ನಂತರ ಆರೋಪಿಯನ್ನು ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು  ಅಲ್ಲಿ ಪರೀಕ್ಷೆ ನಡೆಸಿದಾಗ ಆತನಲ್ಲಿ ಕೋವಿಡ್ -19 ಪೊಸಿಟಿವ್  ಕಂಡು ಬಂದಿತ್ತು.

ಆರೋಪಿ  ಜೈಪುರಕ್ಕೆ ಪ್ರಯಾಣಿಸಿದ್ದನು , ಅಲ್ಲಿ ಆತ  ವೈರಸ್ ಸೋಂಕಿಗೆ ಒಳಗಾಗಿದ್ದಾನೆಂದು ಶಂಕಿಸಲಾಗಿದೆ.

ಆರೋಪಿಯ ಬಂಧನದಲ್ಲಿ ಭಾಗಿಯಾಗಿದ್ದ 17 ಪೊಲೀಸರು, ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಧೀಶರು ಇದೀಗ ಕ್ವಾರೆಂಟೈನ್ ನಲ್ಲಿ ಇರುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News