ಕೊರೋನ ಪರೀಕ್ಷೆಗೆ ತೆರಳಿದ್ದ ವೇಳೆ ಮಾರಣಾಂತಿಕ ಹಲ್ಲೆಯಿಂದ ವೈದ್ಯೆ ಸಾವು ಎನ್ನುವ ಸುದ್ದಿ ಸುಳ್ಳು

Update: 2020-04-10 11:43 GMT

ಹೊಸದಿಲ್ಲಿ: "ಉತ್ತರ ಪ್ರದೇಶದಲ್ಲಿ ಕಳೆದ ವಾರ ಕೊರೋನವೈರಸ್ ಪರೀಕ್ಷೆಗಳನ್ನು ನಡೆಸಲೆಂದು ತೆರಳಿದ್ದ ವೈದ್ಯೆಯೊಬ್ಬರ ಮೇಲೆ 'ಇಸ್ಲಾಮಿಕ್ ಜಿಹಾದಿಗಳು' ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಇಂದು ಮೃತಪಟ್ಟಿದ್ದಾರೆ'' ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವರು ಈ ಬಗ್ಗೆ ಟ್ವೀಟ್ ಗಳನ್ನು ಮಾಡಿದ್ದು, ಇದು ಸಾವಿರಕ್ಕೂ ಅಧಿಕ ಬಾರಿ ರಿಟ್ವೀಟ್‍ ಆಗಿದ್ದವು. ಟ್ವಿಟರ್ ಹಾಗೂ ಫೇಸ್ ಬುಕ್‍ ನಲ್ಲಿ ಇದೇ ಚಿತ್ರ ಹಾಗೂ ಬರಹದೊಂದಿಗೆ ಹಲವಾರು ಮಂದಿ ಇದನ್ನು ಪೋಸ್ಟ್ ಮಾಡಿದ್ದಾರೆ. ಅರ್ನಬ್ ಗೋಸ್ವಾಮಿ ಹೆಸರಿನ ನಕಲಿ ಟ್ವಿಟರ್ ಖಾತೆಯೊಂದು ಈ ಟ್ವೀಟ್ ಮಾಡಿದ್ದು, ಅದರ ಫೋಟೊ ವೈರಲ್ ಆಗಿತ್ತು.

altnews.in ಈ ಚಿತ್ರದ ರಿವರ್ಸ್ ಸರ್ಚ್ ಮಾಡಿದಾಗ ಭೋಪಾಲ್ ಸಮಾಚಾರ್ ಎಪ್ರಿಲ್ 7ರಂದು ಪ್ರಕಟಿಸಿದ ವರದಿಯೊಂದು ಕಂಡು ಬಂದಿತ್ತು. ವರದಿಯ ಪ್ರಕಾರ ಮಧ್ಯ ಪ್ರದೇಶದ ಶಿವಪುರಿ ಮೆಡಿಕಲ್ ಕಾಲೇಜಿನಲ್ಲಿ ಫಾರ್ಮಸಿಸ್ಟ್ ಆಗಿದ್ದ ವಂದನಾ ತಿವಾರಿ ಕರ್ತವ್ಯದಲ್ಲಿದ್ದ ವೇಳೆ ಮಾರ್ಚ್ 31ರಂದು ಅಸೌಖ್ಯಕ್ಕೀಡಾಗಿದ್ದರು. ಆಕೆಯನ್ನು ಜಿಲ್ಲಾಸ್ಪತ್ರೆಗೆ ತಕ್ಷಣ ದಾಖಲಿಸಲಾಗಿತ್ತು. ನಂತರ ಎಪ್ರಿಲ್ 1ರಂದು ಬಿರ್ಲಾ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು.  ಮೆದುಳಿನ ರಕ್ತಸ್ರಾವಕ್ಕೊಳಗಾಗಿದ್ದರಿಂದ ಶಸ್ತ್ರಕ್ರಿಯೆ ನಡೆಲಾಯಿತಾದರೂ ನಂತರ ಕೋಮಾ ಸ್ಥಿತಿ ತಲುಪಿ ಎಪ್ರಿಲ್ 7ರಂದು ವಂದನಾ ಮೃತಪಟ್ಟಿದ್ದರು.

ಮಧ್ಯಪ್ರದೇಶದ ಘಟನೆಯ ಈ ಚಿತ್ರವನ್ನು ಬಳಸಿಕೊಂಡು ಉತ್ತರ ಪ್ರದೇಶದಲ್ಲಿ 'ಇಸ್ಲಾಮಿಕ್ ಜಿಹಾದಿಗಳು ಕೊರೋನ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಸಾಯಿಸಿದ್ದಾರೆ' ಎಂಬ ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ.

ಫಾರ್ಮಸಿಸ್ಟ್  ಮಧ್ಯ ಪ್ರದೇಶದಲ್ಲಿ ಮೃತಪಟ್ಟಿದ್ದರು. ಉತ್ತರ ಪ್ರದೇಶದಲ್ಲಿ ವೈದ್ಯೆಯ ಮೇಲೆ ಹಲ್ಲೆಯಂತಹ ಘಟನೆ ನಡೆದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರೂ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News