ಹಸಿವು ನೀಗಿಸಲು ಎಲ್ಲರಿಗೂ ಪಡಿತರ ನೀಡಿ: ಕೇಂದ್ರಕ್ಕೆ ಆಹಾರ ಹಕ್ಕು ಚಳವಳಿಗಾರರ ಆಗ್ರಹ

Update: 2020-04-10 17:31 GMT

ಹೊಸದಿಲ್ಲಿ, ಎ.10: ಕೊರೋನ ವೈರಸ್ ಹರಡುವಿಕೆಗೆ ಕಡಿವಾಣ ಹಾಕಲು ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದಾಗಿ ಹಸಿವಿನಿಂದ ಕಂಗಾಲಾಗಿರುವ ಸಾವಿರಾರು ಮಂದಿಗೆ ನೆರವಾಗುವುದಕ್ಕಾಗಿ ಪಡಿತರ ವಿತರಣೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕೆಂದು ಕೇಂದ್ರ ಸರಕಾರವನ್ನು ಆಹಾರದ ಹಕ್ಕಿನ ಅಭಿಯಾನ ಸಂಘಟನೆ ಆಗ್ರಹಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಆಹಾರದ ಆಭಾವದಿಂದ ಜನರು ತೊಂದರೆಗೀಡಾಗುವುದನ್ನು ತಪ್ಪಿಸಲು, ನ್ಯಾಯಬೆಲೆ ಅಂಗಡಿಯಲ್ಲಿ ಯಾವುದೇ ವ್ಯಕ್ತಿಗೂ ಆಹಾರಧಾನ್ಯ, ಬೇಳೆಗಳು ಹಾಗೂ ಖಾದ್ಯ ತೈಲದ ಪ್ಯಾಕೇಜ್ ನೀಡುವಂತೆ ಮಾಡಬೇಕೆಂದು ಆಹಾರದ ಹಕ್ಕು ಹೋರಾಟಗಾರರು, ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ರಾಷ್ಟ್ರಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಕೋಟ್ಯಂತರ ಬಡಜನರು ಹಾಗೂ ದುಡಿಯುವ ಜನತೆಯ ಜೀವನೋಪಾಯಗಳಿಗೆ ನಷ್ಟವುಂಟಾಗಿದೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಪೂರೈಕೆ ವ್ಯವಸ್ಥೆ ಸರಪಣಿಗಳು ಮುರಿದುಬಿದ್ದಿದ್ದು, ಮಾರುಕಟ್ಟೆಗಳನ್ನು ತಲುಪುವುದು ತುಂಬಾ ಕಷ್ಟಕರವಾಗಿದೆ ಎಂದು ಅವರು ಹೇಳಿದ್ದಾರೆ. ಸಮಾಜದ ನಿರ್ದಿಷ್ಟ ವರ್ಗಗಳಿಗೆ ಆಹಾರದ ಭದ್ರತೆಯನ್ನು ಖಾತರಿಪಡಿಸಲು ಹಾಗೂ ನೇರ ನಗದು ವರ್ಗಾವಣೆಯನ್ನು ಒದಗಿಸಲು 1.70 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಒದಗಿಸಿರುವುದು ಅವಶಕತೆಗಳಿಗೆ ಸ್ಪಂದಿಸಲು ಎಷ್ಟೂ ಮಾತ್ರಕ್ಕೂ ಸಾಕಾಗದೆಂದು ಪತ್ರದಲ್ಲಿ ತಿಳಿಸಲಾಗಿದೆ. ಲಾಕ್‌ಡೌನ್ ವೇಳೆ ಉಚಿತ ವಿತರಣೆಗೆ ಇರುವ ಆಹಾರಧಾನ್ಯಗಳು ಹಾಗೂ ಬೇಳೆಕಾಳುಗಳು ಬಹುತೇಕ ರಾಜ್ಯಗಳಿಗೆ ಇನ್ನೂ ತಲುಪಿಲ್ಲವೆಂದು ಅವುರ ಹೇಳಿದ್ದಾರೆ.

‘‘ಅತ್ಯಂತ ಕಳವಳಕಾರಿಯೆಂದರೆ ಈವರೆಗೆ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಪಡಿತರ ಚೀಟಿಯನ್ನು ಹೊಂದಿರುವ ಶೇ.65ರಷ್ಟು ಮಂದಿಗೆ ಮಾತ್ರವೇ ಉಚಿತ ಪಡಿತರ ಆಹಾರಧಾನ್ಯಗಳನ್ನು ಘೋಷಿಸಲಾಗಿದ್ದು, ಒಂದು ದೊಡ್ಡ ಜನಸಂಖ್ಯೆಯನ್ನು ಈ ಸೌಲಭ್ಯದಿಂದ ಹೊರತುಪಡಿಸಲಾಗಿದೆಯೆಂದು” ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ದುರ್ಬಲ ವರ್ಗಗಳ ಒಂದು ದೊಡ್ಡ ಸಮೂಹವು ಪಡಿತರ ಕಾರ್ಡ್‌ಗಳನ್ನು ಹೊಂದಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಘೋಷಿಸಲಾದ ಪರಿಹಾರ ಕ್ರಮಗಳ ಪ್ರಯೋಜನ ಪಡೆಯಲು ಅವುಗಳಿಗೆ ಸಾಧ್ಯವಾಗುತ್ತಿಲ್ಲವೆಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News