ನಮ್ಮಲ್ಲಿ ಉಗುಳುವವರೆಲ್ಲರೂ ಪಿಎಚ್ಡಿ ಮಾಡಿದ್ದಾರೆ...

Update: 2020-04-10 18:14 GMT

ಕೊರೊನ ಸೋಂಕಿನ ಸಂಕಟದ ನಡುವೆಯೇ ಅಲ್ಲಲ್ಲಿ ಹರಡುತ್ತಿರುವ ಕೋಮು ದ್ವೇಷದ ಸೋಂಕು ಸಮಾಜದ ಪಾಲಿಗೆ ಕಂಟಕವಾಗಿದೆ. ಆದರೆ ಈ ಸೋಂಕನ್ನು ತಮಗೂ ಹಂಚಲು ಬಂದ ಟ್ರೋಲ್ ಒಬ್ಬನಿಗೆ ಆಹಾರ ಪದಾರ್ಥಗಳ ಸರಬರಾಜು ಕಂಪೆನಿಯೊಂದು ಸೊಪ್ಪು ಹಾಕದೆ ಸರಿಯಾಗಿ ತಿರುಗೇಟು ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದ್ದು ಕಂಪೆನಿಯ ನಿಲುವಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 

ಆಗಿದ್ದಿಷ್ಟು. ದಿಲ್ಲಿ ಮೂಲದ ಮಸಾಲಾ ಮಾಂಕ್ ಎಂಬ ಆಹಾರ ಪದಾರ್ಥಗಳ ಸರಬರಾಜು ಕಂಪೆನಿಯೊಂದಿದೆ.  ಈ ಕಂಪೆನಿ ದೇಶದೆಲ್ಲೆಡೆಯಿಂದ ವೈವಿಧ್ಯಮಯ ಉಪ್ಪಿನಕಾಯಿ, ಸಾಂಬಾರ ಪದಾರ್ಥಗಳು, ಮಸಾಲೆಗಳು ಇತ್ಯಾದಿ ವಿಶೇಷ ಆಹಾರ ಪದಾರ್ಥಗಳನ್ನು ಆನ್ ಲೈನ್ ನಲ್ಲಿ ಖರೀದಿಸುವವರಿಗೆ ತಲುಪಿಸುತ್ತದೆ. 

ಕೊರೊನ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಅದಕ್ಕೆ ಮುಸ್ಲಿಮರೇ ಕಾರಣ ಎಂಬ ವ್ಯಾಪಕ ಅಪಪ್ರಚಾರ ಆನ್ ಲೈನ್ ನಲ್ಲಿ ನಡೆಯುತ್ತಿದೆ. ಅದೇ ಅಪಪ್ರಚಾರದ ಭಾಗವಾಗಿ ರಾಜೀವ್ ಸೇಥಿ ಎಂಬ ಟ್ರೋಲ್ ಒಬ್ಬ ಮಸಾಲಾ ಮಾಂಕ್ ನ ಫೇಸ್ ಬುಕ್ ಪೇಜ್ ನಲ್ಲಿ ಒಂದು ಕೋಮು ದ್ವೇಷಿ ಕಮೆಂಟ್ ಹಾಕಿದ. "ನಿಮ್ಮಲ್ಲಿ ಯಾರೂ ಮುಸ್ಲಿಂ ಉದ್ಯೋಗಿಗಳಿಲ್ಲ ಹಾಗು ನಿಮ್ಮ ಆಹಾರ ಪದಾರ್ಥಗಳಲ್ಲಿ ಯಾರೂ ಉಗುಳಿಲ್ಲ ಎಂದು ಘೋಷಿಸಬೇಕು" ಎಂದು ಸೇಥಿ ಹೇಳಿದ್ದ. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಮಸಾಲಾ ಮಾಂಕ್ " ಸರ್, ನಿಮಗೆ ಹೀಗೆ ದ್ವೇಷ ಹರಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಎಂದು ಕಾಣುತ್ತದೆ. ನಿಮಗೆ ನಿಮ್ಮ ಬಗ್ಗೆ ನಾಚಿಕೆಯಾಗಬೇಕು" ಎಂದು ಖಾರವಾಗಿಯೇ ಪ್ರತಿಕ್ರಿಯಿಸಿತು. ಆದರೆ ವಿಷಯ ಅಲ್ಲಿಗೆ ಮುಗಿಯಲಿಲ್ಲ. 

ಮತ್ತೆ ಸೇಥಿಗೆ ವಿವರವಾದ ಪ್ರತಿಕ್ರಿಯೆ ಬರೆದ ಮಸಾಲಾ ಮಾಂಕ್ ನ ಸ್ಥಾಪಕ ಶಶಾಂಕ್ ಅಗರ್ವಾಲ್ ಅವರು ಸೇಥಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಆ ಪ್ರತಿಕ್ರಿಯೆ ಈಗ ಎಲ್ಲೆಡೆ ಚರ್ಚೆಯ ವಸ್ತುವಾಗಿದ್ದು ಹಾಗು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 

ಶಶಾಂಕ್ ಬರೆದ ಪ್ರತಿಕ್ರಿಯೆ ಇಲ್ಲಿದೆ: 

ಆತ್ಮೀಯ ಸೇಥಿ ಅವರೇ, 

MasalaMonk.com ನ ಸ್ಥಾಪಕನಾಗಿ ನಾವು ಗುಣಮಟ್ಟದ ವಿಷಯದಲ್ಲಿ ಕೆಲವು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತೇವೆ ಎಂದು ನಿಮಗೆ ಸ್ಪಷ್ಟಪಡಿಸಬಯಸುತ್ತೇವೆ. ಆ ವಿಷಯದಲ್ಲಿ ಬಹುಶ ನಿಮ್ಮ ಹಾಗೆ ಅಲ್ಲ ನಾವು. ನಿಮ್ಮ ವಿಷಯ ಬಿಡಿ. ಈಗ ಮುಖ್ಯ ವಿಷಯದಿಂದ ವಿಚಲಿತರಾಗುವುದು ಬೇಡ. 

ಮಸಾಲಾ ಮಾಂಕ್ ನಲ್ಲಿ ನಮ್ಮ ಜೊಲ್ಲು ISO9002 ದೃಢೀಕೃತವಾಗಿದೆ. ಹಾಗೆಯೆ ನಮ್ಮ ಎಲ್ಲ ಉಗುಳುವವರು ಉಗುಳುವಿಕೆಯಲ್ಲಿ ಪಿಎಚ್ಡಿ ಮಾಡಿದ್ದಾರೆ. ಅವರು ತಮ್ಮ ಲಾಲಾರಸ ಗ್ರಂಥಿಗಳಿಂದ ಉಗುಳುವಾಗ ಆ ಉಗುಳುವಿಕೆಯಲ್ಲಿ ಅಹ್ಮದಾಬಾದ್ ಸಮಾವೇಶದಲ್ಲಿ ಅಳವಡಿಸಿಕೊಂಡಿರುವ ಅತ್ಯಂತ ಉತ್ತಮ ರೀತಿಯಲ್ಲೇ ಉಗುಳುತ್ತಾರೆ. ನಮ್ಮ ಉತ್ಪನ್ನಗಳು ಜೊಲ್ಲು ಸುರಿಸುವಷ್ಟು ಚೆನ್ನಾಗಿರುತ್ತವೆ ಎಂಬುದು ನಿಮಗೆ ಈಗಲೇ ಖಚಿತವಿರುವಾಗೆ ಕಾಣುತ್ತದೆ. ಆದರೆ ನಾವು ಉಗುಳಿದ್ದರಲ್ಲೂ ಯಾವುದೇ ಗುಣಮಟ್ಟದ ರಾಜಿ ಇಲ್ಲ ಎಂದು ನಿಮಗೆ ಖಾತರಿಪಡಿಸಬಯಸುತ್ತೇನೆ. 

ಹಾಗೇಯೇ , ನಮ್ಮಲ್ಲಿ ಯಾರೂ ಮುಸ್ಲಿಮರು ಉದ್ಯೋಗದಲ್ಲಿಲ್ಲ ಎಂದು ನಿಮಗೆ ತಿಳಿಸಬಯಸುತ್ತೇನೆ. ನಿಜವಾಗಿ ಹೇಳಬೇಕೆಂದರೆ ಮಸಾಲಾ ಮಾಂಕ್ ನಲ್ಲಿ ಯಾರೂ ಉದ್ಯೋಗಿಗಳಿಲ್ಲ. ಇಲ್ಲಿರುವ ಎಲ್ಲರೂ ಅದೆಷ್ಟು ಖುಷಿಯಲ್ಲಿ ಇಲ್ಲಿನ ಚಟುವಟಿಕೆಯಲ್ಲಿ ತೊಡಗಿದ್ದಾರೆಂದರೆ ಅವರೆಲ್ಲರೂ ಇದನ್ನು ಹವ್ಯಾಸ ಎಂದೇ ಪರಿಗಣಿಸಿದ್ದಾರೆ. ಬೇಕಿದ್ದರೆ, ಅಕ್ಬರ್, ರಫಿ, ಆಯೇಷಾ, ಫಿರ್ದೋಸ್, ಮಲಿಕ್ , ತಬಸ್ಸುಮ್ ... ಇವರಲ್ಲಿ ಕೇಳಿ ನೋಡಿ. ನಮ್ಮ ಉತ್ಪನ್ನಗಳನ್ನು ಅತ್ಯಂತ ಪ್ರೀತಿಯಿಂದ ಖರೀದಿಸುವ ಮತ್ತು ಅವುಗಳನ್ನು ಯಾರು ಪ್ಯಾಕ್ ಮಾಡಿದ್ದಾರೆ ಎಂದು ತಲೆಕೆಡಿಸಿಕೊಳ್ಳದ ನಮ್ಮ ಗ್ರಾಹಕರಿಗಾಗಿ ಇವರೆಲ್ಲ ಅತ್ಯಂತ ಪ್ರೀತಿ ಹಾಗು ಖುಷಿಯಿಂದ ಉತ್ಪನ್ನಗಳನ್ನು ಜೋಡಿಸಿ ಕಳಿಸುತ್ತಾರೆ. 

ಆದರೆ ನಾನು ಅರ್ಥಮಾಡಿಕೊಳ್ಳಬಲ್ಲೆ. ನೀವು ಬೆಳೆಯುವಾಗ ಇಂತಹ ಒಳ್ಳೆಯ ಅಭಿರುಚಿಯ ಅನುಭವ ಅಷ್ಟಾಗಿ ನಿಮಗೆ ಆಗಿರಲಿಕ್ಕಿಲ್ಲ. ಅದೇ ಹೇಳುತ್ತಾರಲ್ಲ, ನಮ್ಮ ಆಹಾರ ನಮ್ಮನ್ನು ರೂಪಿಸುತ್ತದೆ ಎಂದು, ಹಾಗೆ. ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ ಬಿಡಿ. ನೀವು ನಮ್ಮ ಪಟ್ಟಿಯಲ್ಲಿರುವ ಎಲ್ಲ ತಿಂಡಿಗಳನ್ನು ಖರೀದಿಸಿ ಎಂದು ನಿಮಗೆ ಸಲಹೆ ನೀಡಬಯಸುತ್ತೇನೆ. ಅದರಿಂದ ಬಹಳ ಬೇಗ ನಿಮ್ಮ ವ್ಯಕ್ತಿತ್ವ ಹಾಗು ಚಾರಿತ್ರ್ಯ ಎರಡೂ ಬದಲಾಗುವ ಸಾಧ್ಯತೆ ಇದೆ. ಇದರಿಂದ ಭಾರತವನ್ನು ಒಂದುಗೂಡಿಸುವ ಇಲ್ಲಿನ ವೈವಿಧ್ಯತೆಯನ್ನು ಖುಷಿಯಿಂದ ಸ್ವೀಕರಿಸಲು ನಿಮಗೆ ಸಾಧ್ಯವಾಗಬಹುದು. 

ಅಲ್ಲಿಯವರೆಗೆ... 

ಖುದಾ ಹಾಫಿಜ್ಹ್ 

ಶಶಾಂಕ್ ಅಗರ್ವಾಲ್ 

www.MasalaMonk.com

ಶಶಾಂಕ್ ಅವರ ಈ ಪ್ರತಿಕ್ರಿಯೆ ಈಗ ಫೇಸ್ ಬುಕ್ , ಟ್ವಿಟ್ಟರ್ ನಲ್ಲಿ ಭಾರೀ ವೈರಲ್ ಆಗಿದೆ. ಅವರಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ಲಾಕ್ ಡೌನ್ ಮುಗಿದ ಕೂಡಲೇ ಹೊಸ ಗ್ರಾಹಕರು ಹೆಚ್ಚಾಗುವ ಸಾಧ್ಯತೆ ಕಂಡು ಬಂದಿದೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News