ಲಾಕ್‌ಡೌನ್ ನಿಯಮಗಳ ಉಲ್ಲಂಘನೆ: ಪ.ಬಂಗಾಳ ಸರಕಾರಕ್ಕೆ ಕೇಂದ್ರದ ಎಚ್ಚರಿಕೆ

Update: 2020-04-11 18:31 GMT

ಹೊಸದಿಲ್ಲಿ, ಎ.11: ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಪಶ್ಚಿಮ ಬಂಗಾಳ ಸರಕಾರಕ್ಕೆ ಕೇಂದ್ರ ಗೃಹ ಇಲಾಖೆ ಶನಿವಾರ ಪತ್ರ ಬರೆದು ಎಚ್ಚರಿಕೆ ನೀಡಿದೆ. ಲಾಕ್‌ಡೌನ್ ಉಲ್ಲಂಘಿಸದಂತೆ ಈ ವಾರದಲ್ಲಿ ಪ.ಬಂಗಾಳ ಸರಕಾರಕ್ಕೆ ಕೇಂದ್ರ ಸರಕಾರ ನೀಡಿರುವ ಎರಡನೇ ಎಚ್ಚರಿಕೆ ಇದಾಗಿದೆ.

ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರಕಾರ ಲಾಕ್‌ಡೌನ್ ನಿಯಮಗಳಿಗೆ ನೀಡುತ್ತಿರುವ ವಿನಾಯಿತಿಗಳು ಹೆಚ್ಚುತ್ತಿದ್ದು ಲಾಕ್‌ಡೌನ್ ನಿಯಮ ಕ್ರಮೇಣ ದುರ್ಬಲಗೊಳ್ಳುತ್ತಿರುವ ಬಗ್ಗೆ ವರದಿ ಬಂದಿದೆ. ದಿನಬಳಕೆಯ ಅಗತ್ಯ ವಸ್ತುಗಳ ಅಂಗಡಿಯನ್ನು ಹೊರತುಪಡಿಸಿ ಇತರ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ತರಕಾರಿ, ಮೀನು, ಮಾಂಸದ ಮಾರುಕಟ್ಟೆಯಲ್ಲಿ ಯಾವುದೇ ನಿಬರ್ಂಧವಿಲ್ಲ. ಇಲ್ಲಿ ಜನರು ಸಾಮಾಜಿಕ ಅಂತರದ ನಿಯಮವನ್ನೂ ಪಾಲಿಸುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಗೃಹ ಇಲಾಖೆ ಆಕ್ಷೇಪ ಎತ್ತಿದೆ.

ಅಲ್ಲದೆ ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಜನರ ಮಾಹಿತಿ ಸಂಗ್ರಹಿಸಲೂ ರಾಜ್ಯ ಸರಕಾರ ನಿರಾಸಕ್ತಿ ತೋರಿದೆ. ಇದುವರೆಗೆ 200 ಜನರನ್ನು ಗುರುತಿಸಿದ್ದರೂ ಈ ಮಾಹಿತಿಯನ್ನು ಕೇಂದ್ರ ಸರಕಾರದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿದೆ. ಅಲ್ಲದೆ ರಾಜ್ಯದಲ್ಲಿ ಧಾರ್ಮಿಕ ಸಭೆಗಳು ನಡೆಯಲು ಅವಕಾಶ ನೀಡಲಾಗಿದೆ. ರಾಜಕಾರಣಿಗಳು ಪಡಿತರವನ್ನು ಇಲಾಖೆಯ ಮೂಲಕ ವಿತರಿಸದೆ ಸ್ವತಃ ವಿತರಿಸುತ್ತಿದ್ದಾರೆ . ಈ ಬಗ್ಗೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News