'ಬಿಜೆಪಿಯ ಅಸಹಿಷ್ಣು ನಾಯಕರಿಗಿಂತಲೂ ಕಠಿಣವಾಗುವ ಅಗತ್ಯ ನಿಮಗೆ ಏನಿತ್ತು ?'
ಮಂಗಳೂರು : ಬಿಜೆಪಿಯ ಅಸಹಿಷ್ಣು ನಾಯಕರಿಗಿಂತಲೂ ಕಠಿಣವಾಗುವ ಅಗತ್ಯ ನಿಮಗೆ ಏನಿತ್ತು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ಅವರ ಬಹಿರಂಗ ಪತ್ರ...
ಮಾನ್ಯ ಮಿಥುನ್ ರೈ ಅವರೆ, ನೀವು ಕಾಸರಗೋಡಿನ ರೋಗಿಗಳಿಗೆ (ಕೊರೋನ ಸೋಂಕಿತರು ಹೊರತು ಪಡಿಸಿ) ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದನ್ನು ಬಲವಾಗಿ ವಿರೋಧಿಸುತ್ತಿರುವುದು ಮಾಧ್ಯಮಗಳ ಮೂಲಕ ತಿಳಿದು ಬಂತು. ನಿಮ್ಮ ನಿಲುವುಗಳ ಕುರಿತು ಬಹಳ ಖೇದವೆನಿಸಿತು. ಈ ಹಿಂದೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ನಡೆದ ಹೋಂ ಸ್ಟೇ ದಾಳಿ, ನೈತಿಕ ಪೊಲೀಸ್ ಗಿರಿ ಮೊದಲಾದ ಬಿಜೆಪಿ ಪರಿವಾರದ ಗೂಂಡಾಗಿರಿ, ಆಡಳಿತ ವೈಫಲ್ಯದ ವಿರುದ್ಧ ಡಿವೈಎಫ್ಐ, ಯುವ ಕಾಂಗ್ರೆಸ್ ಇನ್ನಷ್ಟು ವಿದ್ಯಾರ್ಥಿ ಯುವಜನ ಸಂಘಟನೆಗಳ ಜೊತೆಗೂಡಿ ಹೋರಾಟವನ್ನು ನಡೆಸಿತ್ತು. ಆಗ ಸಂಘಟನೆಗಳ ಅಧ್ಯಕ್ಷರ ನೆಲೆಯಲ್ಲಿ ಒಟ್ಟಾಗಿ ನಾವು ದಿನಗಟ್ಟಲೆ ಕೆಲಸ ಮಾಡಿದ್ದೆವು. ಇತ್ತೀಚಿನ ದಿನಗಳಲ್ಲಿ ಸುರತ್ಕಲ್ ಟೋಲ್ ಗೇಟ್ ಅಕ್ರಮದ ವಿರುದ್ಧವೂ ಹೋರಾಟದಲ್ಲಿ ಜೊತೆಯಾಗಿದ್ದೆವು. ಆ ದೀರ್ಘ ಒಡನಾಟದ ಕಾರಣಕ್ಕಾಗಿ ನಿಮ್ಮ ಇಂದಿನ ನಿಲುವುಗಳ ಕುರಿತು ನನಗಿರುವ ತಕರಾರು, ಬೇಸರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಂತನಿಸಿತು. ಆ ಹಿನ್ನೆಲೆಯಲ್ಲಿ ನಿಮಗೆ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಪಕ್ಷ ಹಾಗೂ ಮತ್ತೊಂದಿಷ್ಟು ಜನ ನಿಮ್ಮಲ್ಲಿ ಭವಿಷ್ಯದ ನಾಯಕನನ್ನು ಕಾಣುತ್ತಿರುವುದರಿಂದ ಹಾಗೂ ಜನರ ನಡುವೆ ಈ ವಿಷಯ ಬಹು ಚರ್ಚಿತ ಆಗಿರುವುದರಿಂದ ಪತ್ರವನ್ನು ಬಹಿರಂಗವಾಗಿಯೇ ಬರೆಯುತ್ತಿದ್ದೇನೆ.
ಭಾರತ ದೇಶ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದೆ. ಒಕ್ಕೂಟ ನಿಯಮಗಳ ಪ್ರಕಾರ ಯಾವ ರಾಜ್ಯಗಳೂ ಗಡಿಗಳನ್ನು ಮುಚ್ಚಿ, ಜನರ ಓಡಾಟವನ್ನು ತಡೆಯುವಂತಿಲ್ಲ. ಆದರೆ, ಈಗ ವಿಶೇಷ ಪರಿಸ್ಥಿತಿ. ರಾಜ್ಯಗಳು ಮಾತ್ರ ಅಲ್ಲ. ರಾಜ್ಯದೊಳಗಡೆ ಜಿಲ್ಲೆಗಳ ಗಡಿಗಳನ್ನೂ ಮುಚ್ಚಲಾಗಿದೆ. ಆದರೆ ಎಂತಹ ಸಂದರ್ಭದಲ್ಲೂ ಆಹಾರ, ಆರೋಗ್ಯದಂತಹ ತುರ್ತು ಸೇವೆಗಳ ಸಂಚಾರವನ್ನು ನಿಷೇಧಿಸುವಂತಿಲ್ಲ (ಆ ಕಾರಣಕ್ಕೇ ಸುಪ್ರಿಂ ಕೋರ್ಟ್ ಗಡಿ ತೆರೆಯುವಂತೆ ಸೂಚಿಸಿರುವುದು). ಕೊರೋನದಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ರಾಜ್ಯ ಸರಕಾರದ, ಜಿಲ್ಲಾಡಳಿತದ ಕಾಳಜಿಯನ್ನು ನೀವು ಮಾತ್ರ ಅಲ್ಲ, ನಾನೂ ಅರ್ಥ ಮಾಡಿಕೊಳ್ಳಬಲ್ಲೆ. ಆ ಹಿನ್ನೆಲೆಯಲ್ಲಿ ಸಾಮಾನ್ಯ ಸಂಚಾರವನ್ನು ಗಡಿಗಳನ್ನು ಮುಚ್ವಿ ತಡೆದಿರುವುದನ್ನು ನಾನೂ ಸಮರ್ಥಿಸುತ್ತೇನೆ. ಆದರೆ ಅರೋಗ್ಯದಂತಹ ಗಂಭೀರ ವಿಷಯದಲ್ಲಿ, ಅನಿವಾರ್ಯ ಓಡಾಟವನ್ನು ವಿನಾಯತಿ ಇಲ್ಲದೆ ಪೂರ್ಣವಾಗಿ ನಿಷೇಧಿಸುವುದು ಒಕ್ಕೂಟ ವ್ಯವಸ್ಥೆಯ ನಿಯಮಕ್ಕೆ ವಿರುದ್ದ ಮಾತ್ರ ಅಲ್ಲ, ಅದು ಯಾರೂ ಒಪ್ಪದ ಅಮಾನವೀಯ ನಡೆ. ಬಿಜೆಪಿ ಪಕ್ಷದ ನೇತಾರರಿಗೆ ಈ ಪೂರ್ಣ ನಿಷೇಧದ ಹಿಂದೆ ಕೊರೋನ ಕಾರಣದ ಜೊತೆಗೆ ತಮ್ಮ ಬದ್ಧ ಸೈದ್ದಾಂತಿಕ ವಿರೋಧಿಗಳಾದ ಕಮ್ಯುನಿಸ್ಟ್ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸುವ, ಅವರ ಆಡಳಿತದ ಕೇರಳ ಸರಕಾರವನ್ನು ಜನರ ಮುಂದೆ ತಪ್ಪಾಗಿ ಬಿಂಬಿಸುವ ರಾಜಕೀಯ ದುರುದ್ದೇಶ ಇತ್ತು. ಅದರಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಗಡಿ ಭಾಗದ ರೋಗಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡದೆ ಒಂದಿಷ್ಟು ಸಾವು ನೋವುಗಳಿಗೆ ಕಾರಣರಾದರು. ಅಷ್ಟು ಮಾತ್ರ ಅಲ್ಲದೆ ಕಾಸರಗೋಡಿನಿಂದ "ಕೊರೋನ ಸೋಂಕಿತರು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಕೇರಳ ಸರಕಾರವು ಕಾಸರಗೋಡಿನ ಕೊರೋನ ಸೋಂಕಿತರನ್ನು ಕರ್ನಾಟಕದ ಆಸ್ಪತ್ರೆಗಳಿಗೆ ದಬ್ಬುತ್ತಿದೆ" ಎಂದು ವ್ಯಾಪಕವಾಗಿ ಸುಳ್ಳು ಸುದ್ದಿ ಪ್ರಚಾರ ಪಡಿಸಿದರು. ಬಿಜೆಪಿ ಆ ರೀತಿ ನಡೆದುಕೊಳ್ಳುವುದು ವಿಶೇಷ ಏನೂ ಅಲ್ಲ. ಜಾತ್ಯಾತೀತ ನಿಲುವಿನ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ತಾವು ಬಿಜೆಪಿಯ ನಿಲುವುಗಳಿಗಿಂತಲೂ ಆಕ್ರಮಣಕಾರಿಯಾಗಿ ಗಡಿ ಮುಚ್ವುವುದನ್ನು, ಅಪಘಾತ, ಗಂಭೀರ ಆರೋಗ್ಯ ಸಮಸ್ಯೆಗೊಳಗಾದ ಕಾಸರಗೋಡಿನ ರೋಗಿಗಳಿಗೆ ಪ್ರವೇಶ ನಿರಾಕರಿಸಿದ್ದನ್ನು ಸಮರ್ಥಿಸಿದ್ದು ನನಗಂತೂ ತೀರಾ ಅಚ್ಚರಿಯುಂಟು ಮಾಡಿತು. ನೀವು ವಿರೋಧ ಮಾತ್ರ ಅಲ್ಲದೆ ಸುಪ್ರೀಂ ಕೋರ್ಟ್ ವರೆಗೂ ಹೋಗಿ , ನಿಮ್ಮದೇ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಪ್ರವೇಶ ನಿಷೇಧಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ. ಉಚ್ಚ ನ್ಯಾಯಾಲಯ ಅಂತಹ ಯಾವ ಅರ್ಜಿಗಳಿಗೂ ಕಿಮ್ಮತ್ತು ನೀಡದೆ ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸುವವರಿಗೆ ಗಡಿ ತೆರೆಯುವಂತೆ ಕರ್ನಾಟಕ ಸರಕಾರಕ್ಕೆ ಸೂಚಿಸಿತ್ತು. ಕರ್ನಾಟಕ ಸರಕಾರ, ಅತ್ಯಂತ ಕಠಿಣ ನಿಯಮಗಳನ್ನು ಹೇರಿ (ಈ ನಿಯಮಗಳನ್ನು ಪಾಲಿಸಿ ರೋಗಿ ಮಂಗಳೂರಿನ ಆಸ್ಪತ್ರೆ ತಲುಪುವವರಗೆ ಬದುಕಿ ಉಳಿಯುವುದು ಕಷ್ಟ) ಕೊರೋನ ಸೋಂಕಿತರಲ್ಲದ ಗಂಭೀರ ಪ್ರಕರಣಗಳಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡಿತು. ನೀವು ಇದೀಗ ಅದಕ್ಕೂ ವಿರೋಧ ವ್ಯಕ್ತ ಪಡಿಸಿದ್ದೀರಿ. ಬಿಜೆಪಿಯ ಕಟ್ಟರ್ ವಾದಿ ನಾಯಕರಿಗಿಂತಲೂ ಕಟುವಾಗಿ ಗುಡುಗಿದ್ದೀರಿ. ನಮ್ಮದೇ ತುಳುನಾಡಿನ ಭಾಗವಾದ ಗಡಿನಾಡ ಜನರ ಕುರಿತು ಬಿಜೆಪಿಯ ಅಸಹಿಷ್ಣು ನಾಯಕರಿಗಿಂತಲೂ ಕಠಿಣವಾಗುವ ಅಗತ್ಯ ನಿಮಗೆ ಏನಿತ್ತು ಎಂದು ಜಿಲ್ಲೆಯ ಜನರಿಗೆ ಇಂದಿಗೂ ಅರ್ಥ ಆಗಿಲ್ಲ.
ಮಂಗಳೂರು ಕರಾವಳಿ, ಮಲೆನಾಡಿನ ಭಾಗದ ದೊಡ್ಡ ನಗರ. ಎಲ್ಲಾ ದೊಡ್ಡ ನಗರಗಳಲ್ಲಿ ಇರುವಂತೆ ಇಲ್ಲಿಯೂ ಹಲವು ದೊಡ್ಡ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಇವೆ. ಮಂಗಳೂರಿನಂತಹ ಬೇರೆ ನಗರಗಳಿಗೆ ಹೋಲಿಸಿದರೆ ಒಂದಿಷ್ಟು ಹೆಚ್ಚೇ ಇದೆ. ವೈದ್ಯಕೀಯ ಕ್ಷೇತ್ರದ ದೊಡ್ಡ ಕೇಂದ್ರ ಎಂದು ಗುರುತಿಸಲ್ಪಟ್ಟಿದೆ. ಆದುದರಿಂದ ಸುತ್ತಮುತ್ತಲು ಹಾಸನ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಕಡೆಗಳಿಂದ ಜನತೆ ಚಿಕಿತ್ಸೆಗಾಗಿ ಮಂಗಳೂರಿಗೆ ಬರುತ್ತಾರೆ. (ಅವರು ಬರದಿದ್ದಲ್ಲಿ ಇಲ್ಲಿನ ಮೆಡಿಕಲ್ ಕಾಲೇಜುಗಳ, ಖಾಸಗಿ ಆಸ್ಪತ್ರೆಗಳ ಸ್ಥಿತಿ ಏನಾಗುತ್ತದೆ, ಇಲ್ಲಿಯೆ ಯಾಕೆ ಇಷ್ಟೊಂದು ಮೆಡಿಕಲ್ ಕಾಲೇಜುಗಳು ಇವೆ ಎಂಬುದು ಬೇರೆ ಚರ್ಚೆ) ಕೇರಳಕ್ಕೆ ಸೇರ್ಪಡೆಯಾಗುವ ಮುನ್ನ ಕಾಸರಗೋಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗ ಆಗಿತ್ತು. ಆದುದರಿಂದ ದೊಡ್ಡ ನಗರವಾದ ಮಂಗಳೂರನ್ನು ಶಿಕ್ಷಣ, ಆರೋಗ್ಯ, ಮಾರುಕಟ್ಟೆ ವ್ಯವಹಾರಗಳಿಗೆ ಸಹಜವಾಗಿ ಅವರು ಅವಲಂಬಿಸಿದ್ದಾರೆ. ಇಲ್ಲಿನ ಮಾರುಕಟ್ಟೆ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಕಾಸರಗೋಡಿಗರು ದೊಡ್ಡ ಗ್ರಾಹಕರೂ ಹೌದು. ಹಾಗಿರುತ್ತಾ ಕೊರೋನ ಸೋಂಕಿನ ಅಪಾಯವನ್ನು ಮುಂದಿಟ್ಟು ಗಡಿನಾಡಿನ ಎಲ್ಲಾ ರೀತಿಯ ರೋಗಿಗಳಿಗು ಪ್ರವೇಶವನ್ನು ನಿರ್ಬಂಧಿಸಿದರೆ ನಿನ್ನೆ ಮೊನ್ನೆಯವರಗೆ ಕರುಳುಬಳ್ಳಿ ತರ ಬೆಸೆದು ಕೊಂಡಿದ್ದ ಜನರ ಸ್ಥಿತಿ ಹೇಗಾಗಬೇಡ ? ಒಂದೆರಡು ಉದಾಹರಣೆ ನೀಡುವೆ. ಬಿಜೆಪಿಯ ಮಾತೃ ಸಂಸ್ಥೆ ಆರ್ ಎಸ್ ಎಸ್, ಸಂಘಪರಿವಾರ ಮಂಗಳೂರಿನಲ್ಲಿ ಹಮ್ಮಿಕೊಳ್ಳುವ ವಿಭಾಗ ಮಟ್ಟದ ಸಮಾಜೋತ್ಸವ, ರಾಜಕೀಯ ಸಮಾವೇಶಗಳಿಗೆ ದೊಡ್ಡ ಸಂಖ್ಯೆಯ ಜನರನ್ನು ಕರೆತರುವುದು ಕಾಸರಗೋಡು ತಾಲೂಕಿನಿಂದ. ಅವರ ಸಂಘಟನಾ ವಿಧಾನದ ಪ್ರಕಾರ ರೂಪಿಸಿಕೊಂಡಿರುವ ಮಂಗಳೂರು ವಿಭಾಗಕ್ಕೆ ಕೊಡಗು, ಉಡುಪಿ ಜೊತೆಗೆ ಕಾಸರಗೋಡನ್ನೂ ಸೇರಿಸಿಕೊಳ್ಳಲಾಗಿದೆ. ನಿಮ್ಮ ಕಾಂಗ್ರೆಸ್ ಪಕ್ಷವಂತೂ ಕೇರಳದ ಚುನಾವಣೆ ಸಂದರ್ಭ ಮಂಜೇಶ್ವರದಲ್ಲೇ ಬೀಡು ಬಿಟ್ಟಿರುತ್ತದೆ. ನೀವು ಸೇರಿದಂತೆ ನಿಮ್ಮ ನಾಯಕರು, ಕಾರ್ಯಕರ್ತರು ಕಾಸರಗೋಡಿನ ತುಳು, ಕನ್ನಡಿಗ ಪ್ರದೇಶದಲ್ಲಿ ಬೀದಿ ಬೀದಿ ಅಲೆದು ನಿಮ್ಮ ಮಿತ್ರ ಪಕ್ಷ ಮುಸ್ಲಿಂ ಲೀಗ್ ಪರ ಮತಯಾಚಿಸುತ್ತೀರಿ. ಕಾಸರಗೋಡು ನಮ್ಮದೇ ತುಳುನಾಡಿನ ಗಂಡುಮೆಟ್ಟಿದ ನೆಲ, ನಮ್ಮದು ರಕ್ತ ಸಂಬಂಧ ಅಂತ ಭಾಷಣ ಮಾಡಿ ಗಡಿನಾಡಿನ ತುಳು, ಕನ್ನಡಿಗರನ್ನು ಭಾವನೆಗಳ ಹೊಳೆಯಲ್ಲಿ ತೇಲಿಸಿ ಬಿಡುತ್ತೀರಿ. ಅಲ್ಲಿನ ಹಣವಂತರನ್ನು ಕರೆ ತಂದು ಮಂಗಳೂರಿನಲ್ಲಿ ಹೂಡಿಕೆ ಮಾಡಿಸುತ್ತೀರಿ. ಈಗ ಮಾತ್ರ ಅವರು ಅಪಘಾತ, ಅವಘಡಕ್ಕೆ ಸಿಲುಕಿ ಪ್ರಾಣ ಉಳಿಸಲು ಆಂಬುಲೆನ್ಸ್ ನಲ್ಲಿ ಒದ್ದಾಡುತ್ತಾ ಮಂಗಳೂರಿನತ್ತ ಬಂದರೆ, ತಲಪಾಡಿಯಲ್ಲಿ ತಡೆದು ಅವರು ಪ್ರಾಣ ಬಿಡುವುದನ್ನು ನಿರ್ಲಿಪ್ತರಾಗಿ ನೋಡುತ್ತಾ ನಿಲ್ಲುತ್ತೀರಿ. ಎಷ್ಟು ಕ್ರೂರ ಅಲ್ಲವೆ ಮಿಥುನ್ ! ಬಿಜೆಪಿಯವರಿಗೆ ಸಾಧ್ಯವಾಗುವ ಈ ಕ್ರೌರ್ಯ ಕಾಂಗ್ರೆಸ್ಸಿಗರಾದ, ಹಲವು ಹೋರಾಟಗಳ ಜೊತೆಗಾರರಾದ ತಮಗೂ ಸಾಧ್ಯವಾಯಿತ್ತಲ್ಲ !
ಇರಲಿ, ಕೆಲವು ವಿಷಯ ಈ ಸಂದರ್ಭ ನಿಮಗೆ ನೆನಪಿಸಲೇ ಬೇಕು. ಕೇರಳ ನಿಮ್ಮ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಮಯನಾಡಿನಲ್ಲಿ ಕರ್ನಾಟಕ, ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿದೆ. ಆ ಗಡಿಯನ್ನು ಜನರ ಓಡಾಟಕ್ಕೆ ಕೇರಳ ಮುಚ್ವಿದ್ದರೂ ವೈದ್ಯಕೀಯ ಸೇವೆಗೆ ತೆರೆದಿದೆ. ಕರ್ನಾಟಕದ ನಾನೂರು, ತಮಿಳುನಾಡಿನ ಐನೂರು ರೋಗಿಗಳು ಲಾಕ್ ಡೌನ್ ನಂತರವೂ ವಯನಾಡ್ ಪ್ರವೇಶಿಸಿ ಅಲ್ಲಿನ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಪಡೆದಿದ್ದಾರೆ. ಹಾಗೆಯೆ ಕರ್ನಾಟಕದ ಪ್ರಥಮ ಸೋಂಕಿತ ಗುಲ್ಬರ್ಗದ ವ್ಯಕ್ತಿ ಕೊರೋನ ಚಿಕಿತ್ಸೆಗಾಗಿ ತೆರಳಿದ್ದು ಹತ್ತಿರದ ತೆಲಂಗಾಣದ ರಾಜಧಾನಿ ಹೈದರಾಬಾದಿಗೆ. ಈಗಲೂ ಕರ್ನಾಟಕದ ಹಿಂದುಳಿದ ಗುಲ್ಬರ್ಗ, ಬೀದರ್, ರಾಯಚೂರಿನ ಜನತೆ ಗಂಭೀರ, ತುರ್ತು ವೈದ್ಯಕೀಯ ಸೇವೆಗಾಗಿ ಹೈದರಾಬಾದ್ ಗೆ ತೆರಳುತ್ತಾರೆ. ಕೇರಳ ಈಗಾಗಲೆ ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ವಿಶ್ವದ ಗಮನ ಸೆಳೆದಿದೆ. ಭಾರತದ ಬೇರೆ ರಾಜ್ಯಗಳಿಗೆ ಮಾದರಿಯನ್ನು ಹಾಕಿಕೊಟ್ಟಿದೆ. ಎಲ್ಲಿಯವರಗೆ ಅಂದರೆ ಪ್ರವಾಸ ಬಂದಿದ್ದ ವಿದೇಶಿ ಪ್ರಜೆಗಳಿಗೆ ಮರಳಿ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಸೋಂಕಿನ ಶಂಕೆ ಕಂಡು ಬಂದಾಗ ಅವರಿಗೆ ವಿಮಾನ ಹತ್ತಿ ದೇಶ ತೆರಳಲು ಅನುಮತಿಸದೆ ಕೇರಳದಲ್ಲೇ ಇಟ್ಟು ಕೊಂಡು ಚಿಕಿತ್ಸೆ ನೀಡಿ ಗುಣ ಮುಖರನ್ನಾಗಿಸಿದೆ. ಇದು ಕೇರಳದ ಕಾಳಜಿ. ವಿದೇಶಗಳೂ ಕೊರೋನ ಸೋಂಕಿಗೆ ಒಳಗಾಗಿ ನರಳಬಾರದು ಎಂಬ ಉದಾತ್ತತೆ. ಇದು ಭಾರತ ಮಣ್ಣಿನ ಗುಣ. ನಿಫಾ ಸೋಂಕಿನ ಸಂದರ್ಭದಲ್ಲೂ ಕೇರಳ ಇದೆ ದೃಢ ನಿಲುವಿನೊಂದಿಗೆ ಗೆದ್ದಿತ್ತು. ಕೇರಳದಿಂದ ಸೋಂಕು ಹೊರದಾಟದಂತೆ ನೋಡಿಕೊಂಡಿತ್ತು. ಅಂತಹ ಕೇರಳ, ಬೇಜವಾಬ್ದಾರಿತನದಿಂದ ಕೊರೋನ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗ ಹಾಕುತ್ತದೆ ಎಂಬ ಬಿಜೆಪಿ ನಾಯಕರ ವಾದ ಎಷ್ಟು ಬಾಲಿಶ, ಕೊಳಕು ರಾಜಕೀಯ, ಅಲ್ಲವೆ ಮಿಥುನ್. ನೀವೂ ಇದಕ್ಕೆ ಬಲಿಬಿದ್ದಿರಿ ಎಂಬುದು ಅರ್ಥವಾಗದ ವಿಚಾರ. ಯಾವ ತಜ್ಞ ವೈದ್ಯರು, ವೈದ್ಯಕೀಯ ಸಂಸ್ಥೆಗಳು, ಕೇಂದ್ರ ಆರೋಗ್ಯ ಇಲಾಖೆ ವ್ಯಕ್ತ ಪಡಿಸದ ಸಂದೇಹವನ್ನು ಬಿಜೆಪಿ ಜೊತೆ ಸೇರಿ ನೀವೂ ವ್ಯಕ್ತ ಪಡಿಸಿದ್ದು, ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ನಿಜಕ್ಕೂ ಬೇಸರದ ಸಂಗತಿ. ಗಡಿನಾಡ ತುಳು ಕನ್ನಡಿಗರ ಮನದಲ್ಲಿ ಆರದ ಗಾಯವಾಗಿ ಇದು ಉಳಿಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾನವೀಯ ಕಳಕಳಿಯ ಜನಸಾಮಾನ್ಯರಲ್ಲೂ ಒಂದು ಕೆಟ್ಟ ನೆನಪಾಗಿ , ಕಪ್ಪು ಚುಕ್ಕೆಯಾಗಿ ಉಳಿದು ಬಿಡುತ್ತದೆ.
ಇರಲಿ. ಕೊರೋನ ದಕ್ಷಿಣ ಕನ್ನಡ ಉಡುಪಿ, ಕಾಸರಗೋಡು ಸಹಿತ ತುಳುನಾಡಿನ ನೆಲದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಅದು ಹಾಗೆಯೇ ಆಗಲಿ ಎಂದು ಹಾರೈಸೋಣ. ಇಂದಲ್ಲ ನಾಳೆ ಜನಜೀವನವೂ ಸಹಜ ಸ್ಥಿತಿ ತಲುಪುತ್ತದೆ. ನೀವು ನನ್ನ ಪತ್ರದ ಸದಾಶಯವನ್ನು ಅರ್ಥಮಾಡಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳುತ್ತೀರಿ. ಆಗಿರುವ ತಿಳುವಳಿಕೆ ವ್ಯತ್ಯಾಸವನ್ನು ಸರಿಪಡಿಸಿಕೊಳ್ಖುತ್ತೀರಿ ಎಂದು ಭಾವಿಸುವೆ. ಮುಂದಿನ ದಿನಗಳಲ್ಲಿ ನಿಮಗೆ ಎಲ್ಲಾ ರೀತಿಯಲ್ಲಿ ಒಳಿತುಂಟಾಗಲಿ ಎಂದು ಶುಭ ಹಾರೈಸುವೆ. ಈ ಕೆಟ್ಟಗಳಿಗೆ ಕಳೆದು ಆದಷ್ಟು ಬೇಗ ಭೇಟಿಯಾಗುವ, ನಮಸ್ಕಾರ.
- ಇತೀ, ಮುನೀರ್ ಕಾಟಿಪಳ್ಳ
ಅಧ್ಯಕ್ಷರು, ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ