ಹಸನ್ಮುಖಿ, ಜನಸ್ನೇಹಿ ವಿದ್ವಾಂಸ ಮೌಲಾನಾ ಸಿರಾಜುಲ್ ಹಸನ್
ತಮ್ಮ ಅನುಪಮ, ವಾತ್ಸಲ್ಯ ಪೂರ್ಣ ವ್ಯಕ್ತಿತ್ವಕ್ಕಾಗಿ ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದ ಕನ್ನಡಿಗ ವಿದ್ವಾಂಸ ಮೌಲಾನಾ ಮುಹಮ್ಮದ್ ಸಿರಾಜುಲ್ ಹಸನ್ (88) ಎ.2 ರಂದು ತಮ್ಮ ಅಪಾರ ಅಭಿಮಾನಿಗಳ ಬಳಗವನ್ನು ಶೋಕಸಾಗರದಲ್ಲಿ ಬಿಟ್ಟು ಇಹಲೋಕದಿಂದ ತೆರಳಿ ಹೋದರು.
ಅವರು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಹಿರಿಯ ನಾಯಕರಾಗಿದ್ದರು. ಮುಸ್ಲಿಮ್ ಸಮುದಾಯದ ಹಲವು ರಾಷ್ಟ್ರೀಯ ವೇದಿಕೆಗಳಲ್ಲಿ ಸಕ್ರಿಯರಾಗಿದ್ದರು ಮತ್ತು ಅನೇಕ ಸಾಮಾಜಿಕ ಆಂದೋಲನಗಳಲ್ಲಿ ಭಾಗಿಯಾಗಿದ್ದರು.
ಮೌಲಾನಾ ಸಿರಾಜುಲ್ ಹಸನ್ ಸಾಹೇಬರು 1932ರಲ್ಲಿ ರಾಯಚೂರು ಜಿಲ್ಲೆಯ ಜವಳಗೆರೆ ಗ್ರಾಮದ ಒಂದು ಶ್ರೀಮಂತ ಜಮೀನ್ ದಾರ ಕುಟುಂಬದಲ್ಲಿ ಜನಿಸಿದವರು. ತಾರುಣ್ಯದಲ್ಲೇ ತಮ್ಮನ್ನು ಸಾಮಾಜಿಕ ಹಾಗೂ ಮಾನವೀಯ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರು. 1957 ರಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯರಾದವರು ಮುಂದಿನ ವರ್ಷವೇ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದರು. ಆಗ ಅವರ ವಯಸ್ಸು ಕೇವಲ 26 ವರ್ಷ. ಮುಂದೆ 26 ವರ್ಷಗಳ ಕಾಲ ಅವರು ಆ ಹುದ್ದೆಯಲ್ಲಿ ಮುಂದುವರಿದರು. 1984 ರಲ್ಲಿ ಆ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ದೆಹಲಿಗೆ ತೆರಳಿದರು. 13 ವರ್ಷಗಳ ಕಾಲ ಅದರ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಅವರು ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಉಪಾಧ್ಯಕ್ಷರಾಗಿದ್ದರು. ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸ್ ಎ ಮುಶಾವರತ್, ಬಾಬರಿ ಮಸ್ಜಿದ್ ಕ್ರಿಯಾ ಸಮಿತಿ ಮುಂತಾದ ಹಲವು ಸಂಘಟನೆಗಳಲ್ಲಿ ಪ್ರಮುಖ ಹೊಣೆಗಾರಿಕೆಯ ಹುದ್ದೆಗಳನ್ನು ನಿಭಾಯಿಸಿಸುತ್ತಿದ್ದರು.
ಮೌಲಾನಾ ಅವರ ವಿಶೇಷತೆ ಏನೆಂದರೆ, ಅವರನ್ನು ತುಂಬು ಗೌರವದೊಂದಿಗೆ ಸ್ಮರಿಸುವ ಅವರ ಅಭಿಮಾನಿ ಬಳಗದಲ್ಲಿ ಎಲ್ಲ ಪಕ್ಷ, ಎಲ್ಲ ಸಂಘಟನೆ, ಎಲ್ಲ ಪ್ರದೇಶ, ಮಾತ್ರವಲ್ಲ, ಎಲ್ಲ ಜಾತಿ, ಧರ್ಮಗಳ ಜನ ಕಂಡು ಬರುತ್ತಾರೆ. ಇದೀಗ ಅವರ ವಿಶಾಲ ಅಭಿಮಾನಿ ಬಳಗದ ಕಡೆಯಿಂದ, ಅವರ ಕುರಿತು ಸಾರ್ವಜನಿಕರಿಗೆ ಅಷ್ಟಾಗಿ ತಿಳಿದಿಲ್ಲದ ಹಲವು ಮಹತ್ವದ, ಗಮನಾರ್ಹ ಮಾಹಿತಿಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ.
ಮೌಲಾನಾ ಉರ್ದು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಅದ್ಭುತ ವಾಗ್ಮಿಯಾಗಿದ್ದರು. ತಮ್ಮ ಭಾಷಣಗಳಲ್ಲಿ ಅವರು ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಜೊತೆ ಸಾಮಾಜಿಕ ಸಂಬಂಧಗಳ ಸ್ವಾಸ್ಥ್ಯಕ್ಕೆ ವಿಶೇಷ ಮಹತ್ವ ನೀಡುತ್ತಿದ್ದರು. ವೈಯಕ್ತಿಕವಾಗಿ ಅವರು ವಿವಿಧ ಪಕ್ಷ, ಸಂಘಟನೆಗಳ ನಾಯಕರ ಜೊತೆ ಮತ್ತು ವಿಶೇಷವಾಗಿ ವಿವಿಧ ಮತ ಧರ್ಮಗಳ ಅನೇಕ ಧಾರ್ಮಿಕ ನಾಯಕರೊಂದಿಗೆ ಆತ್ಮೀಯ ನಂಟು ಹೊಂದಿದ್ದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ತೀರಾ ಸರಳ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಸದಾ ಹಸನ್ಮುಖಿಯಾಗಿರುತ್ತಿದ್ದ, ತುಂಬಾ ಸೌಮ್ಯಭಾಷಿಯಾಗಿದ್ದ ಮತ್ತು ಹಿರಿಯ ಕಿರಿಯರೆಲ್ಲರನ್ನೂ ಸಮಾನವಾಗಿ ಆದರಿಸಿ ಉಪಚರಿಸುತ್ತಿದ್ದ ಮೌಲಾನಾರ ನೆನಪು ಶಕ್ತಿ ಅಸಾಮಾನ್ಯವಾಗಿತ್ತು. ಒಮ್ಮೆ ಒಬ್ಬರನ್ನು ಭೇಟಿಯಾದರೆಂದರೆ ಅವರನ್ನು ಮತ್ತೆಂದೂ ಮರೆಯುತ್ತಿರಲಿಲ್ಲ. ಒಮ್ಮೆ ಅವರನ್ನು ಮಾತನಾಡಿಸಿದವರು ಹತ್ತು ವರ್ಷಗಳ ಬಳಿಕ ಕಾಣ ಸಿಕ್ಕರೆ, ನೀವು ಇಂತಿಂತಹ ಹೆಸರಿನವರಲ್ಲವೇ ? ಇಂತಹ ಊರಿನವರಲ್ಲವೇ ? ಎಂದು ಹೇಳಿ ದಂಗು ಬಡಿಸುತ್ತಿದ್ದರು. ಅವರನ್ನು ಭೇಟಿಯಾದವರು ಕೂಡಾ ಅಷ್ಟೇ, ಅವರ ವಾತ್ಸಲ್ಯಮಯ ವ್ಯಕ್ತಿತ್ವವನ್ನು ಎಂದೂ ಮರೆಯುತ್ತಿರಲಿಲ್ಲ.
ಅವರ ಭಾಷಣಗಳಲ್ಲಿ ಪವಿತ್ರ ಕುರ್ ಆನ್ ನ ಸ್ಫೂರ್ತಿದಾಯಕ ವಚನಗಳು ಮತ್ತು ಅವುಗಳ ಸಂಧರ್ಬೋಚಿತ ವಿಶ್ಲೇಷಣೆ ಕೇಳಲು ಸಿಗುತ್ತಿತ್ತು. ಮಹಾ ಕವಿ ಇಕ್ಬಾಲ್ ರ ಉರ್ದು ಮತ್ತು ಪರ್ಷಿಯನ್ ದ್ವಿಪದಿಗಳು ಅವರ ಬಾಯಿಂದ ಸಾಲು ಸಾಲಾಗಿ ಉದುರುತ್ತಿದ್ದವು. ತಮ್ಮ ಹೆಚ್ಚಿನೆಲ್ಲ ಭಾಷಣ, ಉಪನ್ಯಾಸಗಳಲ್ಲಿ ಮಾನವೀಯ ಸಂಬಂಧಗಳ ರಕ್ಷಣೆ ಮತ್ತು ವರ್ಧನೆಗೆ ವಿಶೇಷ ಒತ್ತು ಕೊಡುತ್ತಿದ್ದ ಅವರು, ಆ ಧೋರಣೆಯನ್ನು ಸ್ವತಃ ತಮ್ಮ ಬದುಕಿನಲ್ಲಿ ಬಹಳ ಕಟ್ಟು ನಿಟ್ಟಾಗಿ ಅಳವಡಿಸಿಕೊಂಡಿದ್ದರು. ಸದ್ವಿಚಾರಗಳ ಪ್ರಸಾರಕ್ಕಾಗಿ ಕೇವಲ ಭಾಷಣಗಳನ್ನು ಅವಲಂಬಿಸಿರುವ ಬದಲು, ಜನರಿಗೆ ನಿಕಟರಾಗಿ, ಎಲ್ಲರೊಂದಿಗೆ ಸಂಪರ್ಕದಲ್ಲಿ, ಎಲ್ಲರನ್ನೂ ಮನಸಾರೆ ಪ್ರೀತಿಸಿ, ಆದರಿಸಿ ಎಂದು ಪದೇ ಪದೇ ತಮ್ಮ ಸಂಗಾತಿಗಳಿಗೆ ಉಪದೇಶಿಸುತ್ತಿದ್ದರು. ಆವೇಶ ಭರಿತ ಭಾಷಣ ಮಾಡುವ ಯುವಕರಿಗೆ, ನಿಮ್ಮ ಮಾತಿನಿಂದ ಯಾರದಾದರೂ ಮನಸ್ಸಿಗೆ ನೋವಾಗದಂತೆ ಗರಿಷ್ಟ ಎಚ್ಚರಿಕೆ ವಹಿಸಿ ಎಂದು ತಿಳಿ ಹೇಳುತ್ತಿದ್ದರು.
ದೂರ ದೃಷ್ಟಿ ಮತ್ತು ಮನೋ ವೈಶಾಲ್ಯದ ದೃಷ್ಟಿಯಿಂದ ಅವರ ವ್ಯಕ್ತಿತ್ವ ಆದರ್ಶ ಪ್ರಾಯವಾಗಿತ್ತು. ಅವರ ದೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಮಹತ್ವವಿತ್ತು. ತಮ್ಮ ವಿರೋಧಿಗಳನ್ನೂ ಮನಸಾರೆ ಪ್ರೀತಿಸಬಲ್ಲ, ತಮಗೆ ಮಾಡಲಾದ ನಿಂದನೆಗಳನ್ನು ಕ್ಷಮಿಸಬಲ್ಲ ವಿಶಾಲ ಹೃದಯ ಅವರದಾಗಿತ್ತು. ತೀರಾ ನಿಸ್ವಾರ್ಥಿಯಾಗಿದ್ದ ಮೌಲಾನಾ ಸದಾ ಇತರರ ಹಿತದ ಬಗ್ಗೆ ಚಿಂತಿತರಾಗಿರುತ್ತಿದ್ದರು. ಜನರು ಸಾಮೂಹಿಕ ಸಂಕಟಗಳನ್ನು ಎದುರಿಸುತ್ತಿರುವ ಸ್ಥಳಗಳಿಗೆ ಸ್ವತಃ ಹೋಗಿ ಸಂತ್ರಸ್ತರ ಸೇವೆಯಲ್ಲಿ ನಿರತರಾಗಿ ಬಿಡುತ್ತಿದ್ದರು. ಅವರು ಅಪ್ಪಿತಪ್ಪಿಯೂ ಯಾರದಾದರೂ ಬೆನ್ನ ಹಿಂದೆ ಅವರ ವಿರುದ್ಧ ಮಾತನಾಡುತ್ತಿರಲಿಲ್ಲ. ತಮ್ಮ ಆಪ್ತ ವಲಯದಲ್ಲಿ ಯಾರಾದರೂ ಪರದೂಷಣೆ ಮಾಡತೊಡಗಿದರೆ, ಅದು ತಪ್ಪೆಂದು ಅಲ್ಲೇ ಹೇಳುತ್ತಿದ್ದರು. ಸಮೂಹ ಹಿತದ ಎಲ್ಲ ಕಾರ್ಯಗಳನ್ನು ಎಲ್ಲರ ಜೊತೆ ಸಮಾಲೋಚಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕೆಂದು ಆಗ್ರಹಿಸುತ್ತಿದ್ದರು. ಅದೆಷ್ಟೋ ಸಂದಿಗ್ಧ ಸನ್ನಿವೇಶಗಳನ್ನು ಅವರು ತಮ್ಮ ಹಾಸ್ಯ ಪ್ರಜ್ಞೆ ಮತ್ತು ಸವಿ ಮಾತಿನ ಮೂಲಕ ತಿಳಿಗೊಳಿಸಿಬಿಡುತ್ತಿದ್ದರು. ಕೌಟುಂಬಿಕ ಹಾಗೂ ವ್ಯಾವಹಾರಿಕ ವಿಷಯಗಳಲ್ಲಿ ಪರಸ್ಪರ ಜಗಳಾಡಿ ದೂರವಾದವರನ್ನು ಕರೆದು ಜೊತೆ ಕೂರಿಸಿ ಅವರ ನಡುವಣ ವೈಮನಸ್ಯ ಹೋಗಲಾಡಿಸಿ ಬಾಂಧವ್ಯ ಬೆಸೆಯುತ್ತಿದ್ದರು.
ಮೌಲಾನಾ ಸಿರಾಜುಲ್ ಹಸನ್ ರ ಒಡನಾಟದಲ್ಲಿದ್ದವರು ಸ್ಮರಿಸಿಕೊಳ್ಳುವಂತೆ, ಮೌಲಾನಾರ ದೇವಭಕ್ತಿ ಮತ್ತು ಆಧ್ಯಾತ್ಮಿಕತೆ ಔಪಚಾರಿಕ ಸ್ವರೂಪದ್ದಾಗಿರಲಿಲ್ಲ. ನಿತ್ಯ ಬೆಳಗ್ಗೆ ನಾಲ್ಕು ಗಂಟೆಗೂ ಮುನ್ನ ಎದ್ದು ತಣ್ಣೀರ ಸ್ನಾನ ಮಾಡಿ 'ತಹಜ್ಜುದ್' ನಮಾಝ್ ಗೆ ನಿಲ್ಲುತ್ತಿದ್ದರು. ಸಂಕಷ್ಟದಲ್ಲಿರುವ ಜನರ ಸೇವೆಯೇ ದೇವರನ್ನು ಮೆಚ್ಚಿಸುವ ಅತ್ಯುತ್ತಮ ಉಪಾಧಿಯೆಂದು ಅವರು ನಂಬಿದ್ದರು. ಅವರ ಆಧ್ಯಾತ್ಮಿಕತೆಯು ಅವರನ್ನು ಅಪಾರ ಆಶಾವಾದಿಯಾಗಿಸಿತ್ತು. ಎಂತಹ ಪ್ರತಿಕೂಲ ಸನ್ನಿವೇಶದಲ್ಲೂ ನಿರಾಶರಾಗುತ್ತಿರಲಿಲ್ಲ. ತಮ್ಮ ಜೊತೆಗಿದ್ದವರನ್ನೂ ಅವರು ನಿರಾಶರಾಗಲು ಬಿಡುತ್ತಿರಲಿಲ್ಲ.
ಸಾಹಿತ್ಯಾಭ್ಯಾಸದಲ್ಲಿ ಮೌಲಾನಾರಿಗೆ ವಿಶೇಷ ಆಸಕ್ತಿ ಇತ್ತು. ಪ್ರಯಾಣಿಸುತ್ತಿರುವಾಗಲೂ ಒಂದಷ್ಟು ಪುಸ್ತಕಗಳು ಸದಾ ಅವರ ಜೊತೆ ಇರುತ್ತಿದ್ದವು. ತಮಗೆ ಸಿಕ್ಕ ಬಿಡುವಿನ ಸಮಯವನ್ನೆಲ್ಲ ಅವರು ಅಧ್ಯಯನದಲ್ಲಿ ಕಳೆಯುತ್ತಿದ್ದರು. ಇಸ್ಲಾಮ್ ಧರ್ಮ ಮತ್ತು ಮುಸ್ಲಿಂ ಸಮಾಜಕ್ಕೆ ಸಂಬಂಧಿಸಿದ ಸಾಹಿತ್ಯ ಕನ್ನಡ ಭಾಷೆಯಲ್ಲಿ ಲಭ್ಯವಾಗಬೇಕೆಂದು ಆಗ್ರಹಿಸುತ್ತಿದ್ದ ಅವರು ಪವಿತ್ರ ಕುರ್ ಆನ್ ನ ಕನ್ನಡ ಅನುವಾದ (ದಿವ್ಯ ಕುರ್ ಆನ್) ಗ್ರಂಥದ ಪ್ರಕಾಶನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಜೊತೆಗೆ ಇತರ ಹಲವು ಪುಸ್ತಕಗಳನ್ನೂ ಕನ್ನಡಲ್ಲಿ ಪ್ರಕಾಶಿಸಿದರು.