ಕೊರೋನ ವಿರುದ್ಧದ ಹೋರಾಟ: ಒಂದು ತಿಂಗಳ ಮಗುವಿನ ಜೊತೆ ಕರ್ತವ್ಯಕ್ಕೆ ಹಾಜರಾದ ಐಎಎಸ್ ಅಧಿಕಾರಿ

Update: 2020-04-12 13:01 GMT

ವಿಶಾಖಪಟ್ಟಣಂ: ಮಗುವಿಗೆ ಜನ್ಮ ನೀಡಿ ಒಂದು ತಿಂಗಳಾಗುತ್ತಿದ್ದಂತೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಧುಮುಕಿರುವ ಐಎಎಸ್‍ ಅಧಿಕಾರಿ ಶ್ರೀಜನಾ ಗುಮ್ಮಲ್ಲಾ ಸುದ್ದಿಯಾಗಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಹೆರಿಗೆಯಾಗಿದ್ದ ಗುಮ್ಮಲ್ಲಾ ಆರು ತಿಂಗಳ ಹೆರಿಗೆ ರಜೆಯಲ್ಲಿದ್ದರು. ರಜೆಯನ್ನು ಬಿಟ್ಟು ಒಂದು ತಿಂಗಳ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ ಆಗಿದೆ.

2013ನೇ ಬ್ಯಾಚ್‍ ಐಎಎಎಸ್‍ ಅಧಿಕಾರಿಯಾಗಿರುವ ಇವರು, ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ತಿಂಗಳ ಮಗುವನ್ನು ಮಡಿಲಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಫೋಟೊ ವೈರಲ್‍ ಆಗಿದೆ.

ಚಿಗುರು ಪ್ರಶಾಂತ್‍ ಕುಮಾರ್‍ ಎಂಬವರು ಈ ಫೋಟೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, “ಅಸೋಸಿಯೇಶನ್‍ನ ವಿಶಿಷ್ಟ ಗರಿ. 2013ನೇ ಬ್ಯಾಚ್‍ ಐಎಎಸ್‍ ಅಧಿಕಾರಿಣಿಯಾಗಿರುವ ಜಿವಿಎಂಸಿ ಆಯುಕ್ತೆ ಶ್ರೀಮತಿ ಗುಮ್ಮಲ್ಲಾ ಶ್ರೀಜನಾ, ಆರು ತಿಂಗಳ ಹೆರಿಗೆ ರಜೆಯನ್ನುತೊರೆದು ಒಂದು ತಿಂಗಳ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಎಲ್ಲ ಕೊರೋನ ವಾರಿಯರ್‍ ಗಳಿಗೆ ಸ್ಫೂರ್ತಿ" ಎಂದು ಬಣ್ಣಿಸಿದ್ದಾರೆ.

ಹಲವು ಮಂದಿ ಗುಮ್ಮಲ್ಲಾ ಅವರ ಗುಣಗಾನ ಮಾಡಿದ್ದರೆ, ಕೆಲವರು ಮಗುವನ್ನು ಕಚೇರಿಗೆ ಕರೆತಂದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗುಮ್ಮಲ್ಲಾ ಕರ್ತವ್ಯದ ಅವಧಿಯಲ್ಲಿ ಕೂಡಾ ಮಗುವಿಗೆ ಒಳ್ಳೆಯ ಆರೈಕೆ ಸಿಗಬೇಕು ಎನ್ನುವುದು ಉದ್ದೇಶ ಎಂದು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News