ಅಗತ್ಯ ವಸ್ತುಗಳ ಕೊರತೆ: ದೇಣಿಗೆ ಸಂಗ್ರಹಿಸಿ ಸುರಕ್ಷಾ ಸಾಧನ ಖರೀದಿಸಿದ ಉತ್ತರಪ್ರದೇಶದ ವೈದ್ಯರು
ಅಲೀಗಢ (ಉತ್ತರಪ್ರದೇಶ): ರಾಜ್ಯದಲ್ಲಿ ಕೊರೋನ ವೈರಸ್ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷಾ ಸಾಧನಗಳ ತೀವ್ರ ಅಭಾವ ಇರುವ ಹಿನ್ನೆಲೆಯಲ್ಲಿ ಇಲ್ಲಿನ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಿರಿಯ ವೈದ್ಯರು ಒಂದು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ಸುರಕ್ಷಾ ಸಾಧನಗಳನ್ನು ಖರೀದಿಸಿದ್ದಾರೆ.
"ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆ ಮತ್ತು ಚಿಕಿತ್ಸೆಗೆ ಇರುವ ಮುಂಚೂಣಿ ಆಸ್ಪತ್ರೆ ಇದಾಗಿದೆ" ಎಂದು ವೈದ್ಯರ ಸಂಘದ ಉಪಾಧ್ಯಕ್ಷ ಶಾನವಾಝ್ ಇಕ್ಬಾಲಿ ಹೇಳುತ್ತಾರೆ. ವೈದ್ಯ ಸಮುದಾಯದ ಕಳಕಳಿಯನ್ನು ಕಡೆಗಣಿಸಬಾರದು. ಅವರಿಗೆ ಇರುವ ಅಪಾಯವನ್ನು ಮನಗಂಡು ಸನಿವಾಸ ವೈದ್ಯರ ಸಂಘವು ಸರ್ಜಿಕಲ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಖರೀದಿಸುವ ಸಲುವಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿತು ಎಂದು ಅವರು ವಿವರಿಸಿದ್ದಾರೆ. ನಾಲ್ಕು ದಿನಗಳಲ್ಲಿ ಸಂಘ ಒಂದು ಲಕ್ಷರೂಪಾಯಿ ಮೌಲ್ಯದ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರಿಗೆ ವೈಯಕ್ತಿಕ ಸುರಕ್ಷಾ ಸಾಧನಗಳ ಲಭ್ಯತೆ ತೀವ್ರ ಕಷ್ಟಕರ ಎನ್ನುವಂಥ ಸನ್ನಿವೇಶ ಇತ್ತು. ಅಗತ್ಯ ಸುರಕ್ಷಾ ಸಾಧನಗಳನ್ನು ತಕ್ಷಣ ನೀಡದಿದ್ದರೆ ಕರ್ತವ್ಯ ಬಹಿಷ್ಕರಿಸುವ ಬೆದರಿಕೆಯನ್ನೂ ವೈದ್ಯರು ಹಾಕಿದ್ದರು ಎಂದು ಆರ್‍ಡಿಎ ಅಧ್ಯಕ್ಷ ಹಂಝ ಮಲಿಕ್ ವಿವರಿಸಿದ್ದಾರೆ.
ತಕ್ಷಣ ಎಎಂಯು ವಿವಿ ತಾರಿಕ್ ಮನ್ಸೂರ್ ಮಧ್ಯಪ್ರವೇಶಿಸಿ, ಅಗತ್ಯ ಸಾಧನಗಳನ್ನು ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 1269 ಹಾಸಿಗೆಗಳ ಸಾಮಥ್ರ್ಯದ ಈ ಆಸ್ಪತ್ರೆಯಲ್ಲಿ 450 ವೈದ್ಯರಿದ್ದಾರೆ.