“ನಾನು ಯಾರ ಶತ್ರುವೂ ಆಗಿರಲಿಲ್ಲ”
ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬಂಗಾಡ ಗ್ರಾಮದ ನಿವಾಸಿ ದಿಲ್ಶಾದ್ (37) ಎ.5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದಾನೆ ಎಂದು ಗ್ರಾಮಸ್ಥರು ಶಂಕಿಸಿದ ಬಳಿಕ ಆತನನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಪರೀಕ್ಷಾ ವರದಿಯಲ್ಲಿ ದಿಲ್ಶಾದ್‌ನಿಗೆ ಕೊರೋನ ವೈರಸ್ ಸೋಂಕು ಇಲ್ಲವೆನ್ನುವುದು ದೃಢಪಟ್ಟ ಬಳಿಕ ಎ.4ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ. ಆದರೆ ಗ್ರಾಮಸ್ಥರಿಂದ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದ್ದ ಆತ ಅವರ ಕೊಂಕುಮಾತುಗಳಿಂದ ನೊಂದು ಮೊದಲು ಕೈ ನರಗಳನ್ನು ಕತ್ತರಿಸಿಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಿಲ್ಶಾದ್‌ನ ಸಾವಿನ ಬಗ್ಗೆ ಸುದ್ದಿ ಜಾಲತಾಣ ‘thequint’ ತನಿಖೆ ನಡೆಸಿದೆ. ಅದು ಆತನ ಕುಟುಂಬ ಸದಸ್ಯರು,ಗ್ರಾಮದ ಮುಖ್ಯಸ್ಥರು ಮತ್ತು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ವಿವರಗಳನ್ನು ಸಂಗ್ರಹಿಸಿದೆ. ‘ಆತ ಕ್ವಾರಂಟೈನ್‌ನಿಂದ ಮರಳಿದ ಬಳಿಕ ಅಳುತ್ತಲೇ ಇದ್ದ. ಆತ ಅತ್ತದ್ದನ್ನು ನಾನೆಂದೂ ನೋಡಿರಲಿಲ್ಲ. ತನ್ನ ವಿರುದ್ಧ ಪಿತೂರಿ ನಡೆದಿದೆ ಮತ್ತು ತನ್ನನ್ನು ಸುಳ್ಳಾಗಿ ಸಿಲುಕಿಸಲಾಗಿದೆ ಎಂದು ಹೇಳುತ್ತಲೇ ಇದ್ದ. ಇಡೀ ದಿನ ಆತ ಕೋಣೆಯಲ್ಲಿಯೇ ಇದ್ದ. ನಾನು ಆತನ ಬಳಿಗೆ ತೆರಳಿ ಯೋಗಕ್ಷೇಮವನ್ನು ವಿಚಾರಿಸಿದ್ದೆ. ಆದರೆ ಆತ ಏನೂ ಹೇಳಿರಲಿಲ್ಲ’ ಎಂದು ದಿಲ್ಶಾದ್‌ನ ತಾಯಿ ಉಷಾ ‘thequint’ಗೆ ತಿಳಿಸಿದ್ದಾರೆ.
ದಿಲ್ಶಾದ್ ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದಾನೆ ಎಂದು ಗ್ರಾಮಸ್ಥರು ಶಂಕಿಸಿದ್ದರು. ಆತ ಗ್ರಾಮದ ಇತರರಿಗೂ ಸೋಂಕು ಹರಡುತ್ತಾನೆ ಎಂದು ಅವರು ಭಾವಿಸಿದ್ದರು. ಮಾರ್ಚ್ ಅಂತ್ಯದಲ್ಲಿ ಅದೊಂದು ದಿನ ದಿಲ್ಶಾದ್ ತನ್ನ ಸ್ಕೂಟರ್‌ನಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳಿಗೆ ಹೆದ್ದಾರಿಯವರೆಗೆ ಲಿಫ್ಟ್ ನೀಡಿದ್ದನ್ನು ಅವರು ಕಂಡಿದ್ದರು. ಈ ಇಬ್ಬರು ವ್ಯಕ್ತಿಗಳು ತಬ್ಲೀಗಿ ಜಮಾಅತ್‌ಗೆ ಸೇರಿದ್ದವರು ಎನ್ನಲಾಗಿದೆ. ನೀನು ಮಾಡಿದ್ದು ಸರಿಯಲ್ಲ ಎಂದು ಪದೇ ಪದೇ ದಿಲ್ಶಾದ್‌ಗೆ ತಿವಿದಿದ್ದ ಗ್ರಾಮಸ್ಥರು ಪೊಲೀಸರಿಗೂ ಮಾಹಿತಿ ನೀಡಿದ್ದರು. ಅವರ ಕೊಂಕು ಮಾತುಗಳಿಂದ ತಲ್ಲಣಗೊಂಡಿದ್ದ ದಿಲ್ಶಾದ್ ಅವರ ಬಯಕೆಯಂತೆ ಆಸ್ಪತ್ರೆಗೆ ದಾಖಲಾಗಿದ್ದ. ಆತನಲ್ಲಿ ಕೊರೋನ ವೈರಸ್ ಸೋಂಕು ಇಲ್ಲ ಎನ್ನುವುದು ಮೂರು ದಿನಗಳ ಬಳಿಕ ದೃಢಪಟ್ಟಿತ್ತು ಮತ್ತು ಮರುದಿನವೇ ಆತ ಸಾವಿಗೆ ಶರಣಾಗಿದ್ದ.
ದಿಲ್ಶಾದ್ ಮದುವೆ ಸಮಾರಂಭಗಳಲ್ಲಿ ಹಾಡುವ ಮಿರಾಸಿ ಸಮುದಾಯಕ್ಕೆ ಸೇರಿದ್ದು, ದಶಕದ ಹಿಂದೆಯೇ ತಂದೆಯನ್ನು ಕಳೆದುಕೊಂಡಿದ್ದ ಆತ ತನ್ನ ದೊಡ್ಡ ಕುಟುಂಬಕ್ಕೆ ಆಸರೆಯಾಗಲು ಐದು ವರ್ಷಗಳ ಹಿಂದೆ ಚಿಕನ್ ಮಾರಾಟ ಆರಂಭಿಸಿದ್ದ. ತನ್ನ ಏಳೂ ಸೋದರಿಯರಿಗೆ ಮದುವೆ ಮಾಡಿಸಿದ್ದ ಆತ ಬಂಗಾಡ ಗ್ರಾಮದಲ್ಲಿ ತಾಯಿ ,ಪತ್ನಿ ಮತ್ತು ಐದರ ಹರೆಯದ ದತ್ತುಪುತ್ರಿಯೊಂದಿಗೆ ನೆಮ್ಮದಿಯಾಗಿದ್ದ.
ಬಿಲಾಸಪುರದ ಇಬ್ಬರು ಮುಸ್ಲಿಂ ವ್ಯಕ್ತಿಗಳು ಗ್ರಾಮದ ಮಸೀದಿಯಲ್ಲಿ ರಾತ್ರಿ ತಂಗಲು ಬಯಸಿದ್ದರು. ಆದರೆ ಲಾಕ್‌ಡೌನ್ ಇರುವುದರಿಂದ ಅದಕ್ಕೆ ಅವಕಾಶವನ್ನು ಮೌಲ್ವಿ ನಿರಾಕರಿಸಿದ್ದರು ಮತ್ತು ದಿಲ್ಶಾದ್‌ನನ್ನು ಕರೆದು ಇಬ್ಬರನ್ನೂ ಸ್ಕೂಟರ್‌ನಲ್ಲಿ ಹೆದ್ದಾರಿಯ ವರೆಗೆ ಬಿಡುವಂತೆ ಸೂಚಿಸಿದ್ದರು ಎಂದು ಚಿಕ್ಕಪ್ಪ ದಿಲಾವರ್ ಖಾನ್ ತಿಳಿಸಿದರು. ಈ ಇಬ್ಬರು ವ್ಯಕ್ತಿಗಳು ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಇದಾದ ಬಳಿಕ ಗ್ರಾಮಸ್ಥರು ದಿಲ್ಶಾದ್‌ನ ಸೋದರಿಯಿಂದ ಹಾಲು ಖರೀದಿಸುವುದನ್ನು ನಿಲ್ಲಿಸಿದ್ದರು. ‘ನಾವೇನೋ ಮಾಡಬಾರದ ಭಯಂಕರ ತಪ್ಪನ್ನು ಮಾಡಿದ್ದಂತೆ ಅವರು ನಡೆದುಕೊಳ್ಳುತ್ತಿದ್ದರು. ದಿಲ್ಶಾದ್ ಆಸ್ಪತ್ರೆಯಿಂದ ಮರಳಿದ ಬಳಿಕ ನಾವು ಈ ಎಲ್ಲ ವಿಷಯವನ್ನು ಆತನಿಗೆ ತಿಳಿಸಿದ್ದೆವು. ಇದರಿಂದ ಆತ ಖಿನ್ನನಾಗಿದ್ದ ಎಂದು ಖಾನ್ ತಿಳಿಸಿದರು.
ದಿಲ್ಶಾದ್ ತುಂಬ ಒಳ್ಳೆಯ ಮತ್ತು ಸರಳ ವ್ಯಕ್ತಿಯಾಗಿದ್ದ. ಜನರು ನಿರಂತರವಾಗಿ ಆತನ ಬಗ್ಗೆ ಕೊಂಕುಮಾತುಗಳನ್ನಾಡಿರದಿದ್ದರೆ ಇಂದು ಬದುಕಿರುತ್ತಿದ್ದ. ಆತ ತುಂಬ ಆರೋಗ್ಯದಿಂದಿದ್ದ ಮತ್ತು ಪರೀಕ್ಷೆಯಿಂದ ಇದು ದೃಢಪಟ್ಟಿತ್ತು ಸಹ. ಗ್ರಾಮಸ್ಥರೇಕೆ ಅಷ್ಟೊಂದು ಕ್ರೂರಿಯಾಗಿದ್ದರು ಎಂದು ಪತ್ನಿ ಅಮನದೀಪ್ ಪ್ರಶ್ನಿಸಿದರು.
ಸಾಮಾಜಿಕ ಕಳಂಕ ದಿಲ್ಶಾದ್‌ನ ಆತ್ಮಹತ್ಯೆಗೆ ಕಾರಣವಾಗಿತ್ತು ಎನ್ನುವುದು ಈವರೆಗಿನ ತನಿಖೆಯಲ್ಲಿ ಕಂಡುಬಂದಿದೆ ಎಂದು ಉನಾ ಎಸ್‌ಪಿ ಕಾರ್ತಿಕೇಯನ್ ತಿಳಿಸಿದರು. ಆದರೆ ದಿಲ್ಶಾದ್ ತನ್ನ ಆತ್ಮಹತ್ಯಾ ಪತ್ರದಲ್ಲಿ ಯಾರನ್ನೂ ಹೆಸರಿಸಿಲ್ಲ,ಹೀಗಾಗಿ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಬಹುದು ಎಂದರು.