×
Ad

'ಕಣ್ಣೀರಿನಲ್ಲಿರುವ ಅನಿವಾಸಿಗಳ ಕಷ್ಟಗಳನ್ನು ಅರ್ಥ ಮಾಡಿಕೊಳ್ಳೋಣ'

Update: 2020-04-13 21:07 IST

ಇಡೀ ದೇಶ ಕೋವಿಡ್ 19 ನಿಂದ ಸಂಕಷ್ಟದಲ್ಲಿದೆ. ಒಂದು ಕಡೆ ಪತ್ನಿ ಮಕ್ಕಳು ಊರಿನಲ್ಲಾದರೆ ಪತಿ ಗಲ್ಫ್ ನಲ್ಲಿದ್ದಾರೆ. ಉದ್ಯೋಗ ಇಲ್ಲ, ಸಂಬಳವೂ ಇಲ್ಲ, ಕೆಲವು ಕಂಪನಿಗಳು ಅರ್ಧ ಸಂಬಳ ನೀಡುತ್ತಿದೆಯಾದರೂ ಊರಿಗೆ ಹಣ ಕಳುಹಿಸುವ ಸೌಕರ್ಯಗಳಿಲ್ಲ. ಹೀಗೆಲ್ಲಾ ಇರುವಾಗ ಊರಿನಲ್ಲಿರುವ ಹಲವು ಸಂಘಸಂಸ್ಥೆಗಳು ದಾನಿಗಳ ಮೊರೆ ಹೋಗಿ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿದೆ.

ಈ ಸಂದರ್ಭದಲ್ಲಿ ಹೆಚ್ಚಿನವರು ಬಡ ಕುಟುಂಬಗಳನ್ನೇ ಆರಿಸುತ್ತಾರೆ. ಶ್ರೀಮಂತ ಕುಟುಂಬ ಇದ್ದ ಹಣದಿಂದ ಸುಧಾರಿಸಿಕೊಳ್ಳುತ್ತಾರಾದರೆ ಬಡ ಕುಟುಂಬಕ್ಕೆ ಅಗತ್ಯಕ್ಕಿಂತ‌ ಹೆಚ್ಚಾಗಿಯೂ ನೀಡುವವರಿದ್ದಾರೆ. ಆದರೆ ಮಧ್ಯಮ ವರ್ಗದ ಜನ ಆಚೆ ಯಾರಿಂದಲೂ ಕೇಳುವ ಹಾಗಿಲ್ಲ, ಕೇಳದೆ ಕೊಡುವವರೂ ಇಲ್ಲ. ಹೀಗಿರುವ ಸಂದರ್ಭದಲ್ಲಿ ಗಲ್ಫ್ ನಲ್ಲಿ ಉದ್ಯೋಗದಲ್ಲಿರುವ ಪ್ರವಾಸಿ ಕುಟುಂಬದವರಿಗೆ ಆಹಾರ ಸಾಮಗ್ರಿ ಒದಗಿಸೋಣ ಅವರ ಮೇಲೆಯೂ ಕರುಣೆ ತೋರೋಣ.

ಎಲ್ಲಾ ಸಂಘಸಂಸ್ಥೆಗಳು ಪ್ರವಾಸಿಗಳ ಸಹಕಾರದಿಂದಾಗಿದೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಎನ್ನುವುದು ಸತ್ಯದ ಸಂಗತಿ. ಸಣ್ಣ ಸಂಬಳದಲ್ಲಿ ದುಡಿಯುತ್ತಿರಲಿ, ದೊಡ್ಡ ಮಟ್ಟದಲ್ಲಿ ದುಡಿಯುತ್ತಿರಲಿ ಊರಿನಲ್ಲಿ ಸಣ್ಣಪುಟ್ಟ ಸಮಸ್ಯೆ ಬಂದರೂ ಎಲ್ಲರಿಗೂ ಮೊದಲು ನೆನಪಾಗುವುದು ಪ್ರವಾಸಿಗರೆ, ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರವಾಸಿಗರು ಊರಿನಲ್ಲಿರುವವರನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ಊರಿನಲ್ಲಿ ನೆರೆ ಬಂದಾಗ, ಬಡ ಕುಟುಂಬಕ್ಕೆ ಮನೆ ನಿರ್ಮಿಸಲು, ಚಿಕಿತ್ಸೆಯ ವೆಚ್ಚ  ಭರಿಸಲು, ಊರಿನಲ್ಲಿ ಮಸೀದಿ,‌ ಮದರಸ ನಿರ್ಮಿಸಲು ಎಲ್ಲದರಲ್ಲೂ ಮುಂಚೂಣಿಯಲ್ಲಿದ್ದ ಅನಿವಾಸಿಗಳು ಈಗ ಕಣ್ಣೀರಿನಲ್ಲಿದ್ದಾರೆ. ನಮ್ಮ ಕಷ್ಟಕಾಲದಲ್ಲಿ ನೆರವಾದ ಅವರನ್ನು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳದ ನಾವು ದೇವನ ಮುಂದೆ ಉತ್ತರಿಸಬೇಕಾದಿತು. ಸೌದಿಯಲ್ಲಿರುವ ಸ್ನೇಹಿತನಿಗೆ ಕರೆ ಮಾಡಿ ಅಲ್ಲಿನ ಕಷ್ಟ ಸುಖಗಳ ಬಗ್ಗೆ ಕುಶಲೋಪರಿ ನಡೆಸಿದಾಗ ಕಣ್ಣೀರಾದೆ. ಸ್ನೇಹಿತರೊಬ್ಬರು ಹೇಳಿದರು 'ಮನೆಗೆ ಕರೆ ಮಾಡಿ ಮಾತನಾಡುವಾಗ ಸಾಲ‌ ಮಾಡಿಯಾದರೂ ಸ್ವಲ್ಪವಾದರೂ ಹಣ ಕಳುಹಿಸಿ ಎಂದು ಪತ್ನಿ ಹೇಳುತ್ತಾಳೆ, ಈ ಸಂದರ್ಭದಲ್ಲಿ ಯಾರಲ್ಲಿ ಸಾಲ ಕೇಳುವುದು ? ನಮ್ಮ ಜಮಾಅತ್ ವತಿಯಿಂದ ಕಿಟ್ ವಿತರಿಸುವಾಗ ನಾನು ಸೌದಿಯಲ್ಲಿರುವುದು ಎಂಬ ಕಾರಣಕ್ಕೆ ನಿರಾಕರಿಸಿದರು'. ಇದ್ದಾಗ ನಾವು ಕೊಟ್ಟಿದ್ದೇವೆ ಈಗ ನಾವು ಕೇಳಿ ಪಡೆಯಲು ಮನಸ್ಸು ಕೇಳುತ್ತಿಲ್ಲ ಎಂಬ ಉತ್ತರ ಕೇಳಿದಾಗ ಮನಸ್ಸು ಮತ್ತಷ್ಟು ಭಾರವಾಯಿತು.

ಸಂದರ್ಭ ಈ ರೀತಿ ಇರುವಾಗ ಪ್ರವಾಸಿಗರ ಮೇಲೆ‌ ಕರುಣೆ ತೋರೋಣ ಅವರ ಮನೆಗೆ ಆಹಾರ ಸಾಮಗ್ರಿ ಒದಗಿಸಿ. ಈ ಕೊರೋನ ವೈರಸ್ ನಿಂದ ನಮ್ಮೆಲ್ಲರನ್ನು ದೇವರು ಕಾಪಾಡಲಿ, ನಮ್ಮ ಸೇವೆಯನ್ನು ಸ್ವೀಕರಿಸಲಿ.

Writer - ಮಹಮ್ಮದ್ ಕಳವಾರು

contributor

Editor - ಮಹಮ್ಮದ್ ಕಳವಾರು

contributor

Similar News