ದೇಶದಲ್ಲಿ 10 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ
ಹೊಸದಿಲ್ಲಿ, ಎ.14: ಭಾರದಲ್ಲಿ ದೇಶವ್ಯಾಪಿ ಲಾಕ್‌ಡೌನ್ ಆರಂಭದ ದಿನ 498ರಷ್ಟಿದ್ದ ಕೊರೋನ ಸೋಂಕಿತರ ಮುಂದಿನ 20 ದಿನಗಳಲ್ಲಿ 10 ಸಾವಿರಕ್ಕೇರಿದೆ. ಅಂದರೆ 20 ದಿನಗಳಲ್ಲಿ ವೈರಸ್ ಸೋಂಕಿತರ ಸಂಖ್ಯೆ 20 ಪಟ್ಟು ಹೆಚ್ಚಿದಂತಾಗಿದೆ. ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಪಾಡಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದ್ದರೂ, ಅಂಕಿಅಂಶಗಳಲ್ಲಿ ಆಶಾಕಿರಣವೂ ಇದೆ.
ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆಯಾದ 22ನೇ ದೇಶವಾಗಿ ಭಾರತ ದಾಖಲಾಗಿದೆ. ಪ್ರತಿ 10 ಲಕ್ಷ ಮಂದಿಯ ಪೈಕಿ ಏಳು ಮಂದಿಗಷ್ಟೇ ಸೋಂಕು ತಗುಲಿದೆ. ಆದರೆ ಭಾರತದಲ್ಲಿ ಕೊರೋನ ವೈರಸ್ ಪರೀಕ್ಷೆ ಕೂಡಾ ತೀರಾ ಕಡಿಮೆ ಇದೆ. ಪ್ರತಿ 10 ಲಕ್ಷ ಮಂದಿಯ ಪೈಕಿ 137 ಮಂದಿಗಷ್ಟೇ ಪರೀಕ್ಷೆ ಮಾಡಲಾಗಿದೆ. ಅಮೆರಿಕದಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ 1,700 ಮಂದಿಗೆ ಸೋಂಕು ಇದ್ದರೆ, ಸ್ಪೇನ್‌ನಲ್ಲಿ ಈ ಪ್ರಮಾಣ 3,500. ಭಾರತದಲ್ಲಿ ಪರೀಕ್ಷೆಯನ್ನು ಕ್ಷಿಪ್ರಗೊಳಿಸಿದರೆ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಆದರೆ ಪ್ರತಿ ಹತ್ತು ಲಕ್ಷ ಮಂದಿಯ ಪೈಕಿ ತೀರಾ ಕಡಿಮೆ ಮಂದಿ ಸೋಂಕಿತರು ಇರುವುದರಿಂದ, ಒಟ್ಟಾರೆ ಚಿತ್ರಣದಲ್ಲಿ ದೊಡ್ಡ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ.
ದೇಶದಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವ ಅವಧಿ ಕೂಡಾ ದೀರ್ಘವಾಗಿರುವುದು ಭಾರತಕ್ಕೆ ಸಮಾಧಾನಕರ ಅಂಶ. ಎಪ್ರಿಲ್ 7ರಂದು 5 ಸಾವಿರದಷ್ಟಿದ್ದ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳಲು ಆರು ದಿನಗಳಾಗಿವೆ. ಆದರೆ ಸೋಮವಾರ 1,200 ಹೊಸ ಪ್ರಕರಣಗಳು ವರದಿಯಾಗಿರುವುದರಿಂದ ಭಾರತ ಎಚ್ಚರ ವಹಿಸಬೇಕಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಕಳೆದ ಕೆಲ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಪರಿಸ್ಥಿತಿ ಬಿಗುಡಾಯಿಸುತ್ತಿದೆ. ಮಹಾರಾಷ್ಟ್ರದಲ್ಲಿ ಕೇವಲ ಐದು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದರೆ, ಐದು ದಿನದಲ್ಲಿ ಸಾವಿನ ಪ್ರಮಾಣ ಶೇಕಡ 122ರಷ್ಟು ಹೆಚ್ಚಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 160ನ್ನು ದಾಟಿದೆ. ದಿಲ್ಲಿ, ರಾಜಸ್ಥಾನ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಈ ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುವ ಸಾಧ್ಯತೆ ಇದೆ.