ಮೇ 3ರ ತನಕ ಎಲ್ಲ ದೇಶಿಯ, ಅಂತರ್ ರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು

Update: 2020-04-14 07:42 GMT

ಹೊಸದಿಲ್ಲಿ, ಎ.14: ದೇಶದಲ್ಲಿ ಲಾಕ್‌ಡೌನ್‌ನ ಅವಧಿ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್ಲಾ ದೇಶೀಯ ಮತ್ತು ಅಂತರ್ ರಾಷ್ಟ್ರೀಯ ವಿಮಾನಗಳ ಹಾರಾಟ ಮೇ 3 ರವರೆಗೆ ರದ್ದಾಗಿದೆ.

ಲಾಕ್ ಡೌನ್ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ ಕೂಡಲೇ ವಿಮಾನಯಾನ ಸಚಿವಾಲಯ ಈ ಪ್ರಕಟಣೆ  ಹೊರಡಿಸಿದೆ.

ದೇಶದ ಸಂಪೂರ್ಣ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ಮಾರ್ಚ್ 24 ರಂದು ಪ್ರಧಾನಿ ಮೋದಿ ಅವರು 21 ದಿನಗಳವರೆಗೆ ಲಾಕ್‌ಡೌನ್ ಘೋಷಿಸಿದ್ದರು ಮತ್ತು ಮಂಗಳವಾರ ಅದನ್ನು ಇನ್ನೂ ಎರಡು ವಾರಗಳವರೆಗೆ ವಿಸ್ತರಿಸಲಾಯಿತು.

ಲಾಕ್‌ಡೌನ್‌ಗೆ ಮುಂಚೆಯೇ ಭಾರತವು ಎಲ್ಲಾ ಅಂತರ್ ರಾಷ್ಟ್ರೀಯ ವಿಮಾನಯಾನಗಳನ್ನು ನಿಷೇಧಿಸಿತ್ತು ಮತ್ತು ಕೆಲವು ದಿನಗಳ ನಂತರ ದೇಶೀಯ ಪ್ರಯಾಣವನ್ನು ಸ್ಥಗಿತಗೊಳಿಸಲಾಯಿತು.

ಈಗ, ಲಾಕ್‌ಡೌನ್ ವಿಸ್ತರಿಸುವುದರೊಂದಿಗೆ, ಮೇ 3 ಮಧ್ಯರಾತ್ರಿಯವರೆಗೆ ಎಲ್ಲಾ ದೇಶೀಯ ಮತ್ತು ಅಂತರ್ ರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.

ಮಾರ್ಚ್ 24 ರಿಂದ ಭಾರತ ಸಂಪೂರ್ಣ ಲಾಕ್ ಡೌನ್ ಆಗಿರುವ  ನಂತರ, 650 ವಿಮಾನಗಳು ದೇಶಾದ್ಯಂತ ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News