ಭಾರತೀಯ ಔಷಧ ಕಂಪನಿಗಳಿಗೆ ಅಮೆರಿಕಾ ಕಿರುಕುಳ ಕೊಡುತ್ತಿತ್ತೇ ?

Update: 2020-04-14 17:25 GMT
ಸಾಂದರ್ಭಿಕ ಚಿತ್ರ

ಅಮೆರಿಕಕ್ಕೆ ಭಾರತದಲ್ಲಿ ಉತ್ಪಾದನೆಯಾಗುವ Hydroxychloroquine ನ ಅಗತ್ಯ ಬೀಳುವ ಮುಂಚೆ ಅದು ಭಾರತೀಯ ಔಷಧ ಕಂಪನಿಗಳಿಗೆ ಕಿರುಕುಳ ಕೊಡುತ್ತಿತ್ತೇ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಡುಕಹೊರಟರೆ ಸಿಗುವ ಮಾಹಿತಿಗಳೆಲ್ಲಾ ಅದಕ್ಕೆ ತದ್ವಿರುದ್ಧವಾದವುಗಳೇ...

ಅಂದರೆ ಟ್ರಂಪ್ ಅವರು ಅಮೇರಿಕಾದ ಅಧ್ಯಕ್ಷರಾದ ನಂತರ ಭಾರತೀಯ ಔಷಧ ಕಂಪನಿಗಳಿಗೆ ಕಿರುಕುಳವಾಗುವುದಿರಲಿ ಬಂಪರ್ ಆಫರ್ ಸಿಕ್ಕಿದೆ. 

ಉದಾಹರಣೆಗೆ IQVIA ಎಂಬ ಅಮೇರಿಕಾದ ಬಹುರಾಷ್ಟ್ರೀಯ ಹೂಡಿಕೆ ಸಂಬಂಧಿ ಅಧ್ಯಯನ ಸಂಸ್ಥೆಯು 2019 ರಲ್ಲಿ ಪ್ರಕಟಿಸಿದ "US GENERICS MARKET- EVOLUTION OF INDIAN PLAYERS"  ಎಂಬ ವರದಿಯನ್ನೇ ಗಮನಿಸಿ. 

ಅದರ ಪ್ರಕಾರ ಅಮೇರಿಕಾದಲ್ಲಿ ಬ್ರಾಂಡೆಡ್ ಔಷಧಿಗಳ ಬದಲಿಗೆ ಜೆನರಿಕ್ ಔಷಧಿಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಮತ್ತು ಅಮೆರಿಕದ ಔಷಧ ಕಂಪೆನಿಗಳ ಪೇಟೆಂಟ್ ಗಳ ಕಾಲಾವಧಿ ಮುಗಿಯುತ್ತಾ ಬಂದಂತೆ ಭಾರತದ ಜನರಿಕ್ ಔಷಧಿಗಳ ಉತ್ಪಾದನಾ ಕಂಪನಿಗಳ ಸರಕುಗಳಿಗೆ ರಫ್ತು ಪರವಾನಗಿಯು ಹೆಚ್ಛೆಚ್ಚು ಸಿಗುತ್ತಾ ಹೋಯಿತು.

ಹಾಗೆಯೇ ಟ್ರಂಪ್ ಅಧಿಕಾರಕ್ಕೆ ಬಂದಮೇಲಂತೂ ನಿರ್ಯಾತವನ್ನು ಸಾಕಷ್ಟು ಸರಳಗೊಳಿಸುವ ಕಾನೂನನ್ನು ಜಾರಿಗೆ ತರಲಾಯಿತು. ಅದರ ಪ್ರಧಾನ ಲಾಭವಾದದ್ದು ಭಾರತೀಯ ಔಷಧ ಕಂಪನಿಗಳಿಗೇ 

ಈ ಎಲ್ಲಾ ಕಾರಣಗಳಿಂದ ಅಮೆರಿಕದ ಗುಣಮಟ್ಟ ನಿಯಂತ್ರಣ ಸಂಸ್ಥೆ ( US Food and Drug Administration (FDA) )ಯ ತಕರಾರುಗಳು ಎಷ್ಟೇ ಇದ್ದಾಗ್ಯೂ ಅಮೆರಿಕವು ರಪ್ತಿಗೆ ಕೊಡುವ ಪರವಾನಗಿಗಳಲ್ಲಿ ಶೇ . 40ಕ್ಕೂ ಹೆಚ್ಚು ಪರವಾನಗಿಗಳನ್ನು ಪಡೆದುಕೊಂಡಿರುವುದು ಭಾರತದ ಔಷಧ ಕಂಪನಿಗಳೇ ಆಗಿವೆ.

ಇದೆ ಸಮಯದಲ್ಲಿ  FDA ಯು ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಕಾರ್ಖಾನೆಗಳ ಮತ್ತು ಕಾರ್ಮಿಕರ ಸ್ವಚ್ಛತೆ ಇನ್ನಿತ್ಯಾದಿಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವರ್ಷಕ್ಕೊಮ್ಮೆ ಮಾಡುತ್ತಿದ್ದ Inspection ಅನ್ನು ವರ್ಷಕ್ಕೆ ಮೂರೂ ಬಾರಿಗೆ ಹೆಚ್ಚಿಸಿರುವುದೂ ಮತ್ತು Inspection  ಮಾಡಲು ಬರುವುದಕ್ಕೆ ಮುಂಚೆ ಕೊಡುತ್ತಿದ್ದ ನೋಟೀಸಿನ ಅವಧಿಯನ್ನು ಒಂದು ತಿಂಗಳಿಂದ 24ಗಂಟೆಗಳಿಗೆ ಇಳಿಸಿರುವುದು ನಿಜ. ಹಾಗೆ ಈ ಕಾರಣಗಳಿಗಾಗಿಯೇ ಸರಿಯಾದ ಉತ್ಪಾದನಾ ಮಾನದಂಡಗಳನ್ನು ಪಾಲಿಸದಿದ್ದ ಭಾರತೀಯ ಕಂಪನಿಗಳಿಗೆ ವಾರ್ನಿಂಗ್ ಪತ್ರಗಳನ್ನು ನೀಡಿರುವುದೂ ನಿಜ.

ಆದರೆ ವಾರ್ನಿಂಗ್ ಪತ್ರಗಳನ್ನು ಪಡೆದುಕೊಂಡವರಲ್ಲಿ ಚೀನಾ ಕಂಪನಿಗಳೇ ಜಾಸ್ತಿಯೇ ‌ಹೊರತು ಭಾರತೀಯ ಕಂಪೆನಿಗಳಲ್ಲ. ಹಾಗೆಯೇ ಇದೇ ಅವಧಿಯಲ್ಲಿ ವಾರ್ನಿಂಗ್ ಗಳ ಜೊತೆಗೆ ಭಾರತೀಯ ಕಂಪನಿಗಳ ರಫ್ತಿನ ಪಾಲೂ ಹೆಚ್ಚುತ್ತಾ ಹೋಗಿದ್ದು ಮಾತ್ರ ಕಾಕತಿಳೀಯವಲ್ಲ.

ಇದರ ಹಿಂದೆ ವೈದ್ಯಕೀಯ ಕಾರಣಗಳಿಗಿಂತ ಜಿಯೋ-ಪೊಲಿಟಿಕಲ್ ಕಾರಣಗಳೇ ಹೆಚ್ಚಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾವನ್ನು ಮಣಿಸಲು ಅಮೆರಿಕವು ಏಷ್ಯಾದಲ್ಲಿ ಭಾರತದ ಜೊತೆ ವ್ಯೂಹಾತಾಂತ್ರಿಕ ಮೈತ್ರಿಯನ್ನು ಮಾಡಿಕೊಳ್ಳುತ್ತಿದೆ. ಅಮೇರಿಕಾದ ದಾಳಕ್ಕೆ ಮೋದಿಯ ಭಾರತ ಪಗಡೆಯಾಗಿ ಬಳಕೆಯಾಗುತ್ತಿದೆ. ಅದರ ಲಾಭವನ್ನು ಭಾರತೀಯ ಔಷಧ ಕಂಪನಿಗಳು 2016 ರಿಂದಲೂ ಪಡೆದುಕೊಂಡಿವೆ. 

ಟ್ರಂಪ್ ಅವರ ಈ ರಣನೀತಿಯಿಂದಾಗಿ ಅಮೆರಿಕನ್ನರ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದೆಎಂದು ಅಮೇರಿಕಾದ ನಾಗರಿಕ ಸಮಾಜ ದೊಡ್ಡ ರೀತಿಯಲ್ಲಿ ಧ್ವನಿ ಎತ್ತಿದೆ. 

ಉದಾಹರಣೆಗೆ ಕ್ಯಾಥರಿನ್ ಇಬಾನ್ ಎಂಬ ಪತ್ರಕರ್ತೆ ಹೇಗೆ "ಅಮೇರಿಕಾದ ಇತ್ತೀಚಿನ ಔಷಧ ನೀತಿಗಳು ಅಮೆರಿಕನ್ನರ ಆರೋಗ್ಯದ ಜೊತೆ  ರಾಜಿ ಮಾಡಿಕೊಳ್ಳುತ್ತಿವೆ ಮತ್ತು ಭಾರತದ ದೊಡ್ಡ ಔಷಧ ಕಂಪನಿಗಳನ್ನು ಒಳಗೊಂಡಂತೆ ಹಲವಾರು ಕಂಪನಿಗಳು ಹೇಗೆ ತಿರಸ್ಕೃತ ಔಷಧಿಗಳನ್ನು ಮೋಸದಿಂದ ಅಮೆರಿಕಕ್ಕೆ ರಫ್ತು ಮಾಡುತ್ತಿವೆ" ಎಂಬುದನ್ನು 2019 ರಲ್ಲಿ ಪ್ರಕಟಿಸಿದ ತಮ್ಮ "BOTTLE OF LIEES"ಎಂಬ ಪುಸ್ತಕದಲ್ಲಿ  ದಾಖಲು ಮಾಡಿದ್ದಾರೆ. 

ಅದರಲ್ಲೂ ವಿಶೇಷವಾಗಿ ಭಾರತದ  RANBAXY ಸಂಸ್ಥೆಗೆ 2013 ರಲ್ಲಿ ಮೋಸದ ಸರಬರಾಜಿಗೆ ಅಮೇರಿಕ 500 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿತ್ತು. ಹಾಗೆಯೇ ಬೆಂಗಳೂರು ಮೂಲದ ಕಿರಣ್ ಮಜುಂದಾರ್ ಸ ಅವರ BIOCON ಸಂಸ್ಥೆಗೂ ಈ ಹಿಂದೆ ಅಮೇರಿಕಾದ  FDA ಸಮರ್ಪಕವಾದ ಔಷಧ ಉತ್ಪಾದನಾ ಮಾನದಂಡಗಳನ್ನು ಅನುಸರಿಸುತ್ತಿಲ್ಲವೆಂದು ವಾರ್ನಿಂಗ್ ಪತ್ರಗಳನ್ನು ನೀಡಿತ್ತು.

ಟ್ರಂಪ್ ಬಂದ ಮೇಲೆ 2016ರಿಂದಲೇ ನೀತಿಗಳು ಬದಲಾಗುತ್ತಾ ಬಂಧವು. ಈ ವರ್ಷದ ಜನವರಿ-ಫೆಬ್ರವರಿಯಲ್ಲಿ ಷಾ ಅವರ ಮಲೇಷಿಯಾದ ಇನ್ಸುಲಿನ್ ತಯಾರಿಕಾ ಘಟಕದ ರಪ್ತಿಗೂ ಮನ್ನಣೆ ಸಿಕ್ಕಿದೆ. 

ಹೀಗೆ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಬದಲಾದ ಜಿಯೋ-ಪೊಲಿಟಿಕಲ್ ರಣತಂತ್ರದ ಕಾರಣಗಳಿಗಾಗಿ ಹಾಗು ಅಮೇರಿಕಾದ ವ್ಯೂಹಾತಂತ್ರಕ್ಕೆ ಮೋದಿಯವರ ಸರ್ಕಾರ ಸಂಪೂರ್ಣ ತಲೆಬಾಗಿ ಸಹಕರಿಸುತ್ತಿರುವ ಕಾರಣಕ್ಕಾಗಿ ಭಾರತೀಯ ಔಷಧ ಕಂಪನಿಗಳು 2016ರಿಂದಲೂ ಅಮೇರಿಕಾದ ಔಷಧ ಮಾರುಕಟ್ಟೆಯಲ್ಲಿ ಸುಲಭ ಪ್ರವೇಶವನ್ನು ಹಾಗು ಹೆಚ್ಚಿನ ಪಾಲನ್ನು ಪಡೆಯುತ್ತಲೇ ಇವೆ. 

ಹೀಗಾಗಿ ಹಾಲಿ ಕೋವಿಡ್ -19ರ ವಿರುದ್ಧ ಯಾವುದೇ ವೈದ್ಯಕೀಯ ಪುರಾವೆ ಇಲ್ಲದಿದ್ದರೂ ಅಮೇರಿಕ ಬಳಸಲು ನಿರ್ಧರಿಸಿರುವ ಹೈಡ್ರಾಅಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಸರಬರಾಜು ಮಾಡಲು ಅಮೆರಿಕವು ಭಾರತವನ್ನು ಬೆದರಿಸುವ ಅಗತ್ಯವೂ ಇರಲಿಲ್ಲ. ಮೋದಿಯವರು ಈ ಸಂದರ್ಭವನ್ನು ಬಳಸಿಕೊಂಡು ಯಾವುದೇ ವಿಶೇಷ ಷರತ್ತನ್ನು ಹಾಕಿಲ್ಲ. 

ಆದ್ದರಿಂದ  ಹೈಡ್ರಾಅಕ್ಸಿಕ್ಲೋರೋಕ್ವಿನ್ ವಿಷಯದಲ್ಲಿ ಅಮೇರಿಕ ಭಾರತಕ್ಕೆ ಬೆದರಿಕೆ ಹಾಕಿತು  ಎಂಬುದಾಗಲಿ ಅಥವಾ ಮೋದಿಯವರು ಸಂದರ್ಭವನ್ನು ಬಳಸಿಕೊಂಡು  ಚಾಣಾಕ್ಷತನದಿಂದ ವಿಶೇಷ ಷರತ್ತುಗಳನ್ನು ಹಾಕಿ ಭಾರತೀಯ ಔಷಧ ಕಂಪನಿಗಳಿಗೆ ಆಗುತ್ತಿದ್ದ ಕಿರುಕುಳವನ್ನು ತಡೆದರು ಎಂಬುದಾಗಲಿ  ಸತ್ಯವಲ್ಲ. 

ಈ ಎರಡೂ ವಾದಗಳು ಟ್ರಂಪ್-ಮೋದಿ ಜೋಡಿಯ ಜಗತ್ತಿಗೆ ಮಾರಕವಾದ ಜಿಯೋ-ಪೊಲಿಟಿಕಲ್ ವ್ಯೂಹಾತಂತ್ರವನ್ನು ಮರೆಮಾಚುತ್ತದೆ ಎಂಬುದು ನನ್ನ ಅಭಿಪ್ರಾಯ. 

-ಶಿವಸುಂದರ್

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಉಲ್ಲೇಖಗಳನ್ನು ಗಮನಿಸಬಹುದು. 

- "US GENERICS MARKET- EVOLUTION OF INDIAN PLAYERS" 

(https://www.iqvia.com/-/media/iqvia/pdfs/ap-location-site/india/us-generics-market-evolution-of-indian-players.pdf)

- "Bottle of Lies: The Inside Story of the Generic Drug Boom"- Katherine Eban

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News