ಕೊರೋನ ವೈರಸ್ ಗೆ ಭೋಪಾಲ ಅನಿಲ ದುರಂತದ ಐವರು ಸಂತ್ರಸ್ತರು ಬಲಿ
ಭೋಪಾಲ(ಮ.ಪ್ರ),ಎ.15: ಭೋಪಾಲದಲ್ಲಿ ಮೃತಪಟ್ಟಿರುವ ಎಲ್ಲ ಕೊರೋನ ವೈರಸ್ ರೋಗಿಗಳು 1984ರಲ್ಲಿ ನಗರದಲ್ಲಿ ಸಂಭವಿಸಿದ್ದ ಅನಿಲ ದುರಂತದಲ್ಲಿ ಬದುಕುಳಿದವರಾಗಿದ್ದರು,ಹೀಗಾಗಿ ಇತರರಿಗಿಂತ ಹೆಚ್ಚು ಸುಲಭವಾಗಿ ಸೋಂಕಿಗೆ ಗುರಿಯಾಗಿದ್ದರು.
ಮಾ.23ರಂದು ಮಧ್ಯಪ್ರದೇಶ ಸರಕಾರವು ಭೋಪಾಲ ಮೆಮೋರಿಯಲ್ ಹಾಸ್ಪಿಟಲ್ ಆ್ಯಂಡ್ ರೀಸರ್ಚ್ ಸೆಂಟರ್ (ಬಿಎಂಎಚ್‌ಆರ್‌ಸಿ)ನ್ನು ಕೊರೋನ ವೈರಸ್ ರೋಗಿಗಳಿಗೆ ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಮೂಲಕ ಅನಿಲ ದುರಂತದ ಸಂತ್ರಸ್ತರನ್ನು ವೈದ್ಯಕೀಯ ಸೇವೆಯಿಂದ ವಂಚಿತರನ್ನಾಗಿಸಿತ್ತು. ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಗಂಭೀರ ಸ್ಥಿತಿಯಲ್ಲಿದ್ದವರು ಸೇರಿದಂತೆ ಹೆಚ್ಚಿನ ರೋಗಿಗಳನ್ನು ಬಿಡುಗಡೆಗೊಳಿಸಲಾಗಿತ್ತು.
ಈ ರೋಗಿಗಳು ಇತರರಿಗಿಂತ ಐದು ಪಟ್ಟು ಹೆಚ್ಚು ಕರೋನ ವೈರಸ್‌ಗೆ ಸುಲಭಭೇದ್ಯರಾಗಿದ್ದರು. ಭೋಪಾಲ ಅನಿಲ ದುರಂತ ಸಂತ್ರಸ್ತರ ಕಡೆಗೆ ಹೆಚ್ಚಿನ ಗಮನವನ್ನು ನೀಡುವ ಬದಲು ಸರಕಾರವು ಬಿಎಂಎಚ್‌ಆರ್‌ಸಿಯನ್ನು ವಶಪಡಿಸಿಕೊಂಡು ಅದನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ. ಕಳೆದ 22 ದಿನಗಳಿಂದ ಈ ಆಸ್ಪತ್ರೆಯಲ್ಲಿ ಅನಿಲ ದುರಂತದ ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಸೇವೆಯನ್ನು ಪಡೆಯಲೂ ಅವಕಾಶ ನೀಡಲಾಗುತ್ತಿಲ್ಲ ಎಂದು 1984 ದುರಂತದ ಸಂತ್ರಸ್ತರಿಗಾಗಿ ಶ್ರಮಿಸುತ್ತಿರುವ ಭೋಪಾಲ ಗ್ರೂಪ್ ಆಫ್ ಇನ್ಫಾರ್ಮೇಷನ್ ಆ್ಯಂಡ್ ಆ್ಯಕ್ಷನ್‌ನ ಕಾರ್ಯಕರ್ತೆ ರಚನಾ ಧಿಂಗ್ರಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಅನಿಲ ದುರಂತದಲ್ಲಿ 3,500ಕ್ಕೂ ಅಧಿಕ ಜನರು ಮೃತಪಟ್ಟಿದ್ದು,ಇತರ ಸಾವಿರಾರು ಜನರು ಕ್ರಮೇಣ ವಿಷಪೂರಿತ ಅನಿಲದ ದುಷ್ಪರಿಣಾಮಗಳಿದ ಸಾವನ್ನಪ್ಪಿದ್ದರು. ಬದುಕುಳಿದವರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿದ್ದು,ದುರಂತದ ಬಳಿಕ ಜನಿಸಿದವರಲ್ಲಿ ಜನ್ಮದತ್ತ ದೋಷಗಳ ಪ್ರಕರಣಗಳೂ ಹೆಚ್ಚುತ್ತಿವೆ. ಇದು ಈ ಜನರು ಕೊರೋನ ವೈರಸ್ ಸೋಂಕಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸಿದೆ.ಮೃತ ಕೊರೋನ ವೈರಸ್ ರೋಗಿಗಳು 40 ರಿಂದ 80 ವರ್ಷ ಪ್ರಾಯದವರಾಗಿದ್ದರು.
ಸಾವುಗಳನ್ನು ಗಮನಕ್ಕೆ ತೆಗೆದುಕೆೊಂಡಿರುವ ರಾಜ್ಯ ಸರಕಾರವು ಬಿಎಂಎಚ್‌ಆರ್‌ಸಿಯಲ್ಲಿ ಅನಿಲ ದುರಂತ ಸಂತ್ರಸ್ತರಿಗೆ ಚಿಕಿತ್ಸೆ ಮುಂದುವರಿಕೆಗೆ ಅವಕಾಶ ಕಲ್ಪಿಸಿ ಮಂಗಳವಾರ ರಾತ್ರಿ ಆದೇಶವನ್ನು ಹೊರಡಿಸಿದೆ.